ಸದನದಲ್ಲಿ ಮೂಗುತೂರಿದ ‘ವಿಜಯಪುರ ರಾಜಕಾರಣ’!

7

ಸದನದಲ್ಲಿ ಮೂಗುತೂರಿದ ‘ವಿಜಯಪುರ ರಾಜಕಾರಣ’!

Published:
Updated:

ಬೆಂಗಳೂರು: ‘ಹಿಂದಿನ ನೀರಾವರಿ ಸಚಿವರ ಸಾಧನೆ ಕುರಿತು ಯತ್ನಾಳರು (ಬಸವನಗೌಡ ಪಾಟೀಲ) ಹೊಗಳುತ್ತಿದ್ದರೆ, ನೀವು ಬೊಗಳುತ್ತಿದ್ದೀರಿ’  ವಿರೋಧಪಕ್ಷದ ಉಪನಾಯಕ ಗೋವಿಂದ ಕಾರಜೋಳ ಅವರನ್ನು ಉದ್ದೇಶಿಸಿ ಸಚಿವ ಶಿವನಾಂದ ಪಾಟೀಲರು ಆಡಿದ ಈ ಮಾತು ವಿಧಾನಸಭೆಯಲ್ಲಿ ಬುಧವಾರ ತುರುಸಿನ ವಾಗ್ವಾದಕ್ಕೆ ಕಾರಣವಾಯಿತು.

ಕೃಷ್ಣಾ ಮೇಲ್ದಂಡೆ ಯೋಜನೆಯ ಕುರಿತು ಪ್ರಸ್ತಾಪಿಸಿದ ಕಾರಜೋಳ, ‘ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಿಂದಿನ ಸಚಿವರು (ಎಂ.ಬಿ.ಪಾಟೀಲ) ಸಾವಿರ ಕೋಟಿ ರೂಪಾಯಿ ವ್ಯಯಿಸಿ ಜಾಹೀರಾತು ನೀಡಿದ್ದೊಂದೇ ಬಂತು. ಅಲ್ಲಿ ಸಾವಿರ ಕೋಟಿ ರೂಪಾಯಿಯ ಕೆಲಸವೂ ಆಗಿಲ್ಲ’ ಎಂದು ದೂರಿದರು.

ಮಧ್ಯ ಪ್ರವೇಶಿಸಿದ ಶಿವಾನಂದ ಪಾಟೀಲ ಮೇಲಿನಂತೆ ಪ್ರತಿಕ್ರಿಯಿಸಿದರು. ‘ಹೌದು, ನಾನು ಎಂ.ಬಿ. ಪಾಟೀಲರನ್ನು ಹೊಗಳಿದ್ದು ನಿಜ. ಆದರೆ, ಕಾರಜೋಳರಿಗೆ ಬೊಗಳುತ್ತಿದ್ದೀರಿ ಎಂದರೆ ಏನರ್ಥ? ಮೊದಲು ಗೌರವ ಕೊಡುವುದನ್ನು ಕಲಿಯಿರಿ’ ಎಂದು ಯತ್ನಾಳ ಏರುಧ್ವನಿಯಲ್ಲಿ ಮಾರುತ್ತರ ನೀಡಿದರು.

‘ವಿಷಯ ಬೆಳೆಸಬೇಡಿ. ನಿಮಗೆ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದು ಸಚಿವರು ಹೇಳಿದರು. ‘ಇಬ್ಬರು ಪಾಟೀಲರು ಸೇರಿ ಇನ್ನೊಬ್ಬ ಪಾಟೀಲರ ಕುರಿತು ನಡೆಸಿದ ಚರ್ಚೆ ಇದು’ ಎಂದ ಬಿಜೆಪಿಯ ಬಸವರಾಜ ಬೊಮ್ಮಾಯಿ, ವಿಜಯಪುರ ಜಿದ್ದಾಜಿದ್ದಿ ರಾಜಕಾರಣ ಸದನದಲ್ಲೂ ವಾಗ್ವಾದಕ್ಕೆ ಕಾರಣವಾಗಿದೆ ಎಂಬ ಗುಟ್ಟನ್ನು ಬಿಚ್ಚಿಟ್ಟರು. ಅದಕ್ಕೆ ಸಭಾಧ್ಯಕ್ಷರು, ‘ಓಹ್‌, ಆ ವಿಷಯವೇ ಇದು. ಈಗ ಎಲ್ಲ ಅರ್ಥವಾಯ್ತು ಬಿಡಿ’ ಎಂದು ಪ್ರತಿಕ್ರಿಯಿಸಿದರು.

ಯತ್ನಾಳರ ಹಿಂದೆ ಕುಳಿತಿದ್ದ ಬಿಜೆಪಿಯ ವೀರಣ್ಣ ಚರಂತಿಮಠ, ‘ಎಂ.ಬಿ. ಪಾಟೀಲ ಅವರ ಕಾರ್ಯ ಹೊಗಳಿದ್ದನ್ನು ನೀವು ಸದನದಲ್ಲಿ ಸಮರ್ಥಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಅದೀಗ ದಾಖಲೆಗೆ ಹೋಗಿದೆ’ ಎಂದು ಸಿಟ್ಟು ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !