ಸೋಮವಾರ, ಜುಲೈ 13, 2020
29 °C
2018ರ ಪ್ರಾಕೃತಿಕ ವಿಕೋಪದಿಂದ ನೆಲಸಮವಾಗಿದ್ದ ಊರಿನಲ್ಲಿ ಜೀವಕಳೆ

ಮಡಿಕೇರಿ: ಗ್ರಾಮಸ್ಥರೇ ಸೇತುವೆ, ತಡೆಗೋಡೆ ನಿರ್ಮಿಸಿದರು!

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಎರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ್ದ ಪ್ರಾಕೃತಿಕ ವಿಕೋಪದಿಂದ ನೆಲಸಮವಾಗಿದ್ದ ಮಡಿಕೇರಿ ತಾಲ್ಲೂಕಿನ 2ನೇ ಮೊಣ್ಣಂಗೇರಿಯಲ್ಲಿ ಗ್ರಾಮಸ್ಥರೇ ಈಗ ಸೇತುವೆ, ರಸ್ತೆ ಹಾಗೂ ತಡೆಗೋಡೆ ನಿರ್ಮಿಸಿಕೊಂಡು ಮಾದರಿ ಆಗಿದ್ದಾರೆ.

ಇನ್ನೇನು ಜಿಲ್ಲೆಗೆ ಮತ್ತೊಂದು ಮುಂಗಾರು ಪ್ರವೇಶಿಸಲಿದ್ದು ಪರಿಸ್ಥಿತಿ ಎದುರಿಸಲು ಗ್ರಾಮ ಸಜ್ಜಾಗಿದೆ. ಸರ್ಕಾರದ ಅನುದಾನಕ್ಕೆ ಕಾಯದೆ ಗ್ರಾಮಸ್ಥರೇ ತುರ್ತು ಕೆಲಸ ನಿರ್ವಹಿಸಿಕೊಂಡಿದ್ದಾರೆ. 

ಅದು ಬೆಟ್ಟದ ಮೇಲಿರುವ ಗ್ರಾಮ. ನವಗ್ರಾಮ, ಚಾರಣಿಗರ ಸ್ವರ್ಗವೆಂದೇ ಪ್ರಸಿದ್ಧಿ ಪಡೆದಿತ್ತು. ಆದರೆ, 2018ರಲ್ಲಿ ಮಹಾಮಳೆ ಸುರಿದು ಭೂಕುಸಿತದಿಂದ ಊರೇ ನೆಲಸಮಗೊಂಡು, ಜನರು ಆಶ್ರಯ ಕಳೆದುಕೊಂಡಿದ್ದರು. ಹಳ್ಳ, ಕೊಳ್ಳಗಳಿಗೆ ಮಣ್ಣು ಬಂದು ನಿಂತಿತ್ತು. ರಸ್ತೆಗಳು ಕುಸಿದಿದ್ದವು. ಕಾಫಿ ತೋಟ, ಕೃಷಿ ಜಮೀನು ಸರ್ವನಾಶವಾಗಿತ್ತು. ಅಂದು ಮುಚ್ಚಿದ್ದ ಗ್ರಾಮದ ಶಾಲೆ ಇನ್ನೂ ಬಾಗಿಲು ತೆರೆದಿಲ್ಲ! 200 ಮನೆಗಳಿದ್ದ ಊರಿನಲ್ಲಿ 100 ಮನೆಗಳು ಕುಸಿದಿದ್ದವು. ಅವರಿಗೆ ಸರ್ಕಾರವೇ ಈಗ ಮನೆ ನಿರ್ಮಿಸಿಕೊಡುತ್ತಿದ್ದರೂ ಸಂತ್ರಸ್ತರ ಕಣ್ಣೀರು ಮಾತ್ರ ನಿಂತಿಲ್ಲ.

ಉಳಿದ ಮನೆಗಳಿಗೆ ಹಾಗೂ ಕೃಷಿ ಜಮೀನಿಗೆ ಸಾಗಲು ಊರಿನ ಜನರೇ ಈಗ ರಸ್ತೆ ನಿರ್ಮಿಸಿಕೊಂಡಿದ್ದಾರೆ. ‌ಸರ್ಕಾರದಿಂದಲೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದರೂ ಅಗತ್ಯ ಕೆಲಸಗಳು ಬಾಕಿಯಿದ್ದವು. ಲಾಕ್‌ಡೌನ್‌ ಅವಧಿಯಲ್ಲಿ ಊರಿನ ಜನರೇ ಸೇರಿಕೊಂಡು ಹಳ್ಳದಲ್ಲಿ ಹೂಳು ತೆರವುಗೊಳಿಸಿದ್ದಾರೆ. ಭೂಕುಸಿತದಿಂದ ಉರುಳಿದ್ದ ಮರ, ಕಲ್ಲು ತೆರವು ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ. ಮರದಿಂದ ಸೇತುವೆ ಕಟ್ಟಿದ್ದಾರೆ. ಮತ್ತೆ ನವಗ್ರಾಮವಾಗಿಸಲು ಪಣತೊಟ್ಟಿರುವ ಜನರಿಗೆ ಹಲವು ಸಂಘ – ಸಂಸ್ಥೆಗಳೂ ಕೈಜೋಡಿಸಿವೆ. ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ಬೆಟ್ಟದ ಸಾಲಿನಲ್ಲಿರುವ ಗ್ರಾಮಕ್ಕೆ ಮತ್ತೆ ಜೀವಕಳೆ ಬಂದಿದೆ.

‘ನಿರಾಶ್ರಿತರಿಗೆ ದೂರದ ಸ್ಥಳದಲ್ಲಿ ಮನೆ ಸಿಗಲಿವೆ. ಆದರೆ, ಅವರ ಕೃಷಿ ಜಮೀನು ಇಲ್ಲಿದೆ. ಅವರಿಗೆ ಅನುಕೂಲವಾಗಲೆಂದು ನಾವೇ ರಸ್ತೆ ನಿರ್ಮಿಸಿದ್ದೇವೆ. ನಿವೃತ್ತ ಶಿಕ್ಷಕ ಶಿವರಾಂ ಹಿಟಾಚಿ ಬಳಕೆಗೆ ಆರ್ಥಿಕ ನೆರವು ನೀಡಿದರು. ಊರಿನವರೇ ಊಟದ ವ್ಯವಸ್ಥೆಗೂ ಕೈಲಾದಷ್ಟು ನೆರವು ನೀಡಿದರು. ಎರಡು ತಿಂಗಳಿಂದ ವಾರಕ್ಕೊಮ್ಮೆ 50ಕ್ಕೂ ಹೆಚ್ಚು ಮಂದಿ ಶ್ರಮದಾನ ಮಾಡಿದೆವು’ ಎಂದು ಗ್ರಾಮದ ಮುಖಂಡ ಧನಂಜಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ದುರಂತದಿಂದ ಈಗಲೂ ಭಯವಿದೆ. ಹೀಗಾಗಿ, ನಾವೇ ‘ನಮ್ಮ ಗ್ರಾಮ’ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು ಶ್ರಮದಾನಕ್ಕೆ ಇಳಿದೆವು. ಕರೆಗೆ ಗ್ರಾಮಸ್ಥರು ಹಾರೆ, ಪಿಕಾಸಿ, ಕತ್ತಿ ಹಿಡಿದು ಸ್ಥಳಕ್ಕೆ ಬಂದರು. ಎಲ್ಲ ಮನೆಗಳಿಗೂ ಕಾಲುದಾರಿ ನಿರ್ಮಿಸಿದ್ದೇವೆ’ ಎಂದು ಹೇಳಿದರು.

‘ಕೊಚ್ಚಿ ಹೋಗಿದ್ದ ದೊಡ್ಡ ಸೇತುವೆಯೊಂದನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸಿದೆ. ಆದರೆ, ತಡೆಗೋಡೆ ಮಂಜೂರಾಗಿಲ್ಲ. ಪಯಸ್ವಿನಿ ನದಿಯ ಅಬರಕ್ಕೆ ಆ ಸೇತುವೆ ಉಳಿಯಬೇಕಿದ್ದರೆ ತಡೆಗೋಡೆ ಅಗತ್ಯ. 80 ಮಂದಿ ಸೇರಿ ಜೋಡುಪಾಲದಿಂದ ಕಲ್ಲುತಂದು ತಡೆಗೋಡೆ ನಿರ್ಮಾಣ ಮಾಡಿದ್ದೇವೆ. ಸೇತುವೆಯೂ ಈಗ ಭದ್ರವಾಗಿದೆ’ ಎಂದು ನಿವೃತ್ತ ಶಿಕ್ಷಕ ಶಿವರಾಂ ಹೇಳಿದರು. 

ಲಾಕ್‌ಡೌನ್‌ನಿಂದ ಕೆಲವು ಕಾಮಗಾರಿ ಆರಂಭವಾಗಿಲ್ಲ. ಮಳೆಗಾಲ ಶುರುವಾದರೆ ಮತ್ತೆ ಸಮಸ್ಯೆಗೆ ಸಿಲುಕಿವ ಸಾಧ್ಯತೆಯಿದ್ದು ನಾವೇ ತಾತ್ಕಾಲಿಕವಾಗಿ ಅಲ್ಲಲ್ಲಿ ಮರದ ಸೇತುವೆ ನಿರ್ಮಿಸಿದ್ದೇವೆ.
– ಧನಂಜಯ್‌, ಮುಖಂಡ, 2ನೇ ಮೊಣ್ಣಂಗೇರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು