ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಟರನ್ನು ಬುಟ್ಟಿಯಲ್ಲಿ ಹಳ್ಳ ದಾಟಿಸಿದರು!

ಯಲ್ಲಾಪುರ ತಾಲ್ಲೂಕಿನ ದೇಹಳ್ಳಿ ಗ್ರಾಮದ ದಬ್ಬೆಸಾಲ ದೊಡ್ಮನೆಯಲ್ಲಿ ಕೊಚ್ಚಿಹೋದ ಕಾಲುಸಂಕ
Last Updated 5 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಕಾರವಾರ: ಆ ಕುಗ್ರಾಮದಲ್ಲಿ ರಭಸದಿಂದ ಹರಿಯುವ ಹಳ್ಳಕ್ಕೆ ಅಡಿಕೆ ಮರದಿಂದ ನಿರ್ಮಿಸಲಾದ ತಾತ್ಕಾಲಿಕ ಕಾಲುಸಂಕ ಕಾಲಿಟ್ಟರೆ ಜಾರುತ್ತದೆ. ಹೆಚ್ಚು ಕಡಿಮೆಯಾದರೆ ನೀರು ಪಾಲಾಗುವ ಸಾಧ್ಯತೆ. ಆದರೆ, ಮನೆಯೊಂದರಲ್ಲಿನಿಗದಿಯಾದತಿಥಿ ಕಾರ್ಯಕ್ಕೆ ಪುರೋಹಿತರು ಹೋಗಲೇಬೇಕಾಗಿತ್ತು. ಕೊನೆಗೆ ಮನೆ ಮಂದಿ ಪುರೋಹಿತರನ್ನು ಬೆತ್ತದ ಬುಟ್ಟಿಯಲ್ಲಿ ಕೂರಿಸಿ ಹಳ್ಳ ದಾಟಿಸಿದರು!

ಇದು ಯಲ್ಲಾಪುರ ತಾಲ್ಲೂಕಿನ ದೇಹಳ್ಳಿ ಗ್ರಾಮ ಪಂಚಾಯ್ತಿಯ ಬಳಗಾರ ಸಮೀಪದ ದಬ್ಬೆಸಾಲ ದೊಡ್ಮನೆ ಎಂಬ ಕುಗ್ರಾಮದಲ್ಲಿ ಬುಧವಾರ ಕಂಡುಬಂದ ಪರಿಸ್ಥಿತಿ.

‘ದೇಹಳ್ಳಿ ಬೆಟ್ಟದಿಂದ ಹರಿಯುವ ನೀರು ಸಾತೊಡ್ಡಿ ಜಲಪಾತದ ಮೂಲಕ ಸಾಗಿ ಕಾಳಿ ನದಿಗೆ ಸೇರುತ್ತದೆ. ಊರಿನ ಕೇಂದ್ರ ಭಾಗದಲ್ಲಿ ಒಂದು ಸೇತುವೆಯಿದೆ.ಸಮೀಪದ ಊರುಗಳಿಗೆ ಮುಖ್ಯವಾಗಿರುವ ಬಳಗಾರ ಗ್ರಾಮಕ್ಕೆ ಸುಮಾರು 20 ಕಿಲೋಮೀಟರ್ ಸುತ್ತಿಬಳಸಿ ಹೋಗುತ್ತಿದ್ದೇವೆ. ಹಳ್ಳವನ್ನು ದಾಟಿದರೆ ಮೂರೇ ಕಿಲೋಮೀಟರ್ ಆಗುತ್ತದೆ’ ಎಂದು ಗ್ರಾಮದ ಶಿವಾನಂದ ಗಾಳಿಕೆರೆ ಸಮಸ್ಯೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

‘ಹಳ್ಳದ ಮೂಲಕ ದಾಟಿದರೆ ನಾಲ್ಕೈದು ಹಳ್ಳಿಗಳಿಗೆ ಸಂಪರ್ಕ ಸಾಧ್ಯವಾಗುತ್ತದೆ. ಈ ಮೊದಲು ಊರಿನವರೆಲ್ಲ ಸೇರಿ ನಿರ್ಮಿಸಿದ್ದ ಕಾಲುಸಂಕವಿತ್ತು. ಅದು ಪ್ರವಾಹದಲ್ಲಿ ತೇಲಿ ಹೋಯಿತು. ಬೇಸಿಗೆಯಲ್ಲಿ ಹಳ್ಳಕ್ಕೆ ಇಳಿದು ದಾಟಬಹುದು. ಆದರೆ, ಮಳೆಗಾಲದಲ್ಲಿ ಸಾಧ್ಯವೇ ಇಲ್ಲ. ಹಾಗಾಗಿ ಅಡಿಕೆ ಮರಗಳನ್ನು ಕಟ್ಟಿ ಕಾಲುಸಂಕ ನಿರ್ಮಿಸಲಾಗಿದೆ. ಅದು ನಿರಂತರ ಮಳೆಯಿಂದ ಪಾಚಿ ಹಿಡಿದುಕೊಂಡು ಜಾರುತ್ತಿದ್ದು, ಅಪಾಯಕಾರಿಯಾಗಿದೆ’ ಎಂದರು.‌

‘ಗ್ರಾಮದದತ್ತಾತ್ರೇಯ ನರಸಿಂಹ ಗಾಂವ್ಕರ್ ಅವರ ಮನೆಯಲ್ಲಿಕಾರ್ಯಕ್ರಮಕ್ಕೆ ಬರಲು ಪುರೋಹಿತ ಭಾವಯ್ಯ ಭಟ್ಟರು ಹಿಂದೇಟು ಹಾಕಿದ್ದರು. ಕೊನೆಗೆ ಅವರನ್ನು ತರಗೆಲೆ, ತೆಂಗಿನಕಾಯಿ ಸಂಗ್ರಹಿಸುವ ಚೂಳಿಯೊಳಗೆ (ಬೆತ್ತದ ಬುಟ್ಟಿ) ಕಂಬಳಿ ಹಾಗೂ ಚೀಲ ಹೊದಿಸಿ ಕೂರಿಸಲಾಯಿತು. ಬುಟ್ಟಿಯನ್ನುಅಡಿಕೆ ಮರದ ಕಾಲುಸಂಕದ ಮೇಲೆ ಎಳೆದು ಹಳ್ಳ ದಾಟಿಸಲಾಯಿತು’ ಎಂದು ವಿವರಿಸಿದರು.

‘ಪುರೋಹಿತರನ್ನು ಈ ರೀತಿ ಕರೆದುಕೊಂಡು ಬಂದಿರುವುದು ಒಂದು ಉದಾಹರಣೆಯಷ್ಟೇ. ಇಲ್ಲಿನವರ ದೈನಂದಿನ ಬದುಕಿನಲ್ಲಿಇಂತಹ ಹಲವು ಸವಾಲುಗಳು ಎದುರಾಗುತ್ತವೆ. ಪಕ್ಕದಲ್ಲೇ ಶಾಲೆಯಿದ್ದರೂ ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT