ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಬ್ಬೆಯ ತೂಗುಸೇತುವೆಯಿಂದ ಸಿಗದ ‘ಮುಕ್ತಿ’, ಅಪಾಯಕಾರಿ ಸಂಚಾರ

ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ಗ್ರಾಮ
Last Updated 16 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಕಾರವಾರ: ಕೆಳಗೆ ರಭಸವಾಗಿ ಹರಿಯುವ ಮುಕ್ತಿ ಹೊಳೆ, ಮೇಲೆ ಪಾಚಿಕಟ್ಟಿ ಕಾಲಿಟ್ಟರೆ ಜಾರುವ ಅಡಿಕೆ ಮರದ ದಬ್ಬೆಯ ತೂಗುಸೇತುವೆ. ಇದರ ನಡುವೆ ಸಮತೋಲನ ಕಾಯ್ದುಕೊಂಡು ಸ್ವಲ್ಪವೂ ಎಚ್ಚರ ತಪ್ಪದೇ ಹೆಜ್ಜೆಹಾಕಿದರೆ ಅಥವಾ ಅದರಲ್ಲೇ ಬೈಕ್ ಸವಾರಿ ಮಾಡಿದರೆ ಗ್ರಾಮಸ್ಥರಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕ!

ಹೊನ್ನಾವರ ಮತ್ತು ಸಿದ್ದಾಪುರ ತಾಲ್ಲೂಕಿನ ಗಡಿಯಲ್ಲಿರುವ ಐದು ಮಜರೆಗಳ ಜನರಿಗೆ ಈ ಸರ್ಕಸ್ ದೈನಂದಿನ ಜೀವನದ ಭಾಗವಾಗಿದೆ.

ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನ್ನಕಡ್ಕಾಲ್, ಕೊಡಗಿ, ಹೊಸಗದ್ದೆ, ಉಪ್ಪೋಣಿ ಗ್ರಾಮ ಪಂಚಾಯ್ತಿಯ ಮಹಿಮೆ ಮತ್ತು ಹಾಸೊಳ್ಳಿ ಮಜರೆಗಳ ನಿವಾಸಿಗಳ ಈ ಸಮಸ್ಯೆಗೆ ಇನ್ನೂ ‘ಮುಕ್ತಿ’ ಸಿಕ್ಕಿಲ್ಲ.

‘ಮಳೆಗಾಲದಲ್ಲಿತೂಗುಸೇತುವೆದಾಟಲು ಸಾಧ್ಯವಾಗದೇ ಗ್ರಾಮದ ಐವರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರು ಕೆಲವು ದಿನಗಳಿಂದ ಶಾಲೆಗೆ ಹೋಗುತ್ತಿಲ್ಲ. ಗ್ರಾಮದಲ್ಲಿಯಾರನ್ನಾದರೂ ಚಿಕಿತ್ಸೆಗೆ ಕರೆದುಕೊಂಡು ಹೋಗುವುದೆಂದರೆ ದೊಡ್ಡ ಸವಾಲಿನ ಸಂಗತಿಯಾಗಿದೆ. ಈ ಎಲ್ಲ ಅವ್ಯವಸ್ಥೆಯಿಂದ ಬೇಸತ್ತು ಗ್ರಾಮಕ್ಕೆ ಮೂಲ ಸೌಕರ್ಯ ಕೊಡುವಂತೆ ಪ್ರಧಾನಿಗೆ ಜುಲೈ 12ರಂದುಅಂಚೆ ಮೂಲಕಮನವಿರವಾನಿಸಿದ್ದೇವೆ. ಆದರೆ, ಅದಕ್ಕೂಸ್ಪಂದನೆಬಂದಿಲ್ಲ’ ಎಂದು ಸಮೀಪದ ಕೊಡಗಿ ಗ್ರಾಮದ ನಿವಾಸಿ ಯೋಗೇಶ ನಾಯ್ಕ ಬೇಸರಿಸಿದರು.

‘ತೂಗುಸೇತುವೆಯುಜನ್ನಕಡ್ಕಾಲ್ ಎಂಬಲ್ಲಿದೆ. ಅಲ್ಲಿಂದ 30 ಕಿಲೋಮೀಟರ್ ದೂರದಲ್ಲಿರುವ ಹೊನ್ನಾವರಕ್ಕೆ ಬರಲು ಸೂಕ್ತ ರಸ್ತೆಯ ಸೌಕರ್ಯವಿಲ್ಲ.ಇಲ್ಲಿ 20 ಕುಟುಂಬಗಳಿದ್ದು, ಬಹುತೇಕರು ಕೃಷಿಯನ್ನೇ ಅವಲಂಬಿಸಿದ್ದಾರೆ. ಸಂಪರ್ಕ ವ್ಯವಸ್ಥೆ ಸರಿಯಿಲ್ಲದ ಕಾರಣ ನಮ್ಮ ವಹಿವಾಟನ್ನು 40 ಕಿಲೋಮೀಟರ್ ದೂರದ ಸಿದ್ದಾಪುರದಲ್ಲಿ ನಡೆಸುತ್ತೇವೆ. ಆದರೆ, ಅಲ್ಲಿಗೆ ತೆರಳಲು ಕೂಡ ಕಚ್ಚಾರಸ್ತೆಯಲ್ಲಿ ಒಂಬತ್ತು ಕಿಲೋಮೀಟರ್ ನಡೆಯಬೇಕಿದೆ’ ಎಂದು ಸಮಸ್ಯೆಯನ್ನು ವಿವರಿಸಿದರು.

‘ಪ್ರತಿ ವರ್ಷ ಇಲ್ಲಿ ಗ್ರಾಮಸ್ಥರೇ ಸುಮಾರು ₹40 ಸಾವಿರ ಖರ್ಚಿನಲ್ಲಿ ರಸ್ತೆ ದುರಸ್ತಿ ಮತ್ತು ₹15 ಸಾವಿರ ವೆಚ್ಚದಲ್ಲಿ ತೂಗುಸೇತುವೆ ನಿರ್ಮಿಸಿಕೊಳ್ಳುತ್ತೇವೆ. ಇಲ್ಲದಿದ್ದರೆ ನಮಗೆ ಹೊಳೆಯಿಂದ ಈಚೆಗೆ ಬರಲು ಸಾಧ್ಯವೇ ಆಗುವುದಿಲ್ಲ. ಹಾಗಾಗಿ ಸುಮಾರು 25 ಮೀಟರ್ ಉದ್ದದ ಸೇತುವೆಯ ನಿರ್ಮಾಣವನ್ನೇ ಎಲ್ಲರೂ ಕಾಯುತ್ತಿದ್ದೇವೆ’ ಎಂದು ಹೇಳಿದರು.

ಮರದ ವಿದ್ಯುತ್ ಕಂಬ:‘ಗ್ರಾಮದಲ್ಲಿ ವಿದ್ಯುತ್ ಕಂಬಗಳು ಹಾಳಾಗಿದ್ದು, ದುರಸ್ತಿ ಮಾಡಿಕೊಡುವಂತೆ ಕೇಳಿದ್ದರೂ ಹೆಸ್ಕಾಂನವರು ಸ್ಪಂದಿಸಲಿಲ್ಲ. ಕೊನೆಗೆ ಊರವರೇ ಒಟ್ಟಾಗಿ ಮರದ ಕಂಬಗಳನ್ನು ನೆಟ್ಟು ತಂತಿ ಎಳೆದು ದುರಸ್ತಿ ಮಾಡಿಕೊಂಡೆವು. ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಭರವಸೆ ನೀಡಿದ ರಾಜಕಾರಣಿಗಳು ನಂತರ ಗಮನಹರಿಸಲಿಲ್ಲ’ ಎಂದು ಯೋಗೇಶ ಬೇಸರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT