ಶನಿವಾರ, ಜನವರಿ 25, 2020
22 °C
ತಹಶೀಲ್ದಾರ್‌ ವಿರುದ್ಧ ಕಾಂಗ್ರೆಸ್‌ ಮುಖಂಡರು ಗರಂ

ಆನಂದ್‌ ಸಿಂಗ್‌ ಮಾತು ನಂಬದ ಗ್ರಾಮಸ್ಥರು: ಮೂರುವರೆ ಗಂಟೆ ಮತದಾನ ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ನಿವೇಶನ ಹಕ್ಕುಪತ್ರಕ್ಕೆ ಒತ್ತಾಯಿಸಿ ತಾಲ್ಲೂಕಿನ 88 ಮುದ್ಲಾಪುರ ಗ್ರಾಮಸ್ಥರು ಗುರುವಾರ ಮೂರುವರೆ ಗಂಟೆ ಮತದಾನ ಬಹಿಷ್ಕರಿಸಿದರು.

ಮತದಾನ ಬಹಿಷ್ಕರಿಸಿ, ಗ್ರಾಮದ ಮುಖ್ಯರಸ್ತೆಗೆ ಅಡ್ಡಲಾಗಿ ಕುಳಿತುಕೊಂಡು ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಸಹಾಯಕ ಚುನಾವಣಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ಗ್ರಾಮಸ್ಥರ ಮನವೊಲಿಸಿದರು. ಬೆಳಿಗ್ಗೆ ಎಂಟು ಗಂಟೆಗೆ ಆರಂಭಗೊಂಡ ಧರಣಿ 11.30ಕ್ಕೆ ಕೈಬಿಟ್ಟು, ಬಳಿಕ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಧರಣಿಗೂ ಮುನ್ನ ಒಟ್ಟು 1,360 ಮತದಾರರ ಪೈಕಿ 21 ಜನರಷ್ಟೇ ಮತದಾನ ಮಾಡಿದ್ದರು.

ಬಿಜೆಪಿ ಅಭ್ಯರ್ಥಿ ಭರವಸೆ, ತಹಶೀಲ್ದಾರ್‌ಗೆ ತರಾಟೆ: ಇದಕ್ಕೂ ಮುನ್ನ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌, ‘ನಿಮ್ಮೂರಿನ ಜನರ ಸಮಸ್ಯೆ ನನಗೆ ಗೊತ್ತು. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಚುನಾವಣೆ ನಂತರ ನಿಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ಧರಣಿ ಕೈಬಿಟ್ಟು ಮತದಾನ ಮಾಡಬೇಕು’ ಎಂದು ಕೋರಿದರು.

‘ಈ ಹಿಂದೆಯೂ ಸಾಕಷ್ಟು ಸಲ ಭರವಸೆಗಳನ್ನು ಕೊಟ್ಟಿದ್ದೀರಿ. ಇದುವರೆಗೆ ಈಡೇರಿಸಿಲ್ಲ. ನಿಮ್ಮನ್ನು ಪುನಃ ಹೇಗೆ ನಂಬಬೇಕು. ಏನಾದರೂ ಗ್ಯಾರಂಟಿ ಕೊಡ್ರಿ’ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ‘ನಾನು ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿರುವೆ. ಅದಕ್ಕಿಂತ ಹೆಚ್ಚೇನೂ ಹೇಳಲಾರೆ. ನಿಮಗೆ ಗ್ಯಾರಂಟಿ ಕೊಡಲು ಆಗುವುದಿಲ್ಲ’ ಎಂದು ಹೇಳಿ ಹೊರಟರು.

ಗ್ರಾಮಸ್ಥರೊಂದಿಗೆ ಆನಂದ್‌ ಸಿಂಗ್‌ ಮಾತನಾಡುವಾಗ ತಹಶೀಲ್ದಾರ್‌ ಡಿ.ಜೆ. ಹೆಗಡೆ ಅವರು ದೂರದಲ್ಲಿ ನಿಂತುಕೊಂಡಿದ್ದರು. ಕಾಂಗ್ರೆಸ್‌ ಕಾರ್ಯಕರ್ತರ ಒತ್ತಾಯದ ಮೇರೆಗೆ ಆನಂದ್‌ ಸಿಂಗ್‌ ಬಳಿ ಹೋಗಿ ಅಲ್ಲಿಂದ ತೆರಳುವಂತೆ ಕೋರಿದರು. ಆದರೆ, ಸಿಂಗ್‌ ಅದಕ್ಕೆ ಸೊಪ್ಪು ಹಾಕಲಿಲ್ಲ. ‘ನನ್ನ ವಿರುದ್ಧ ಏನು ಬೇಕಾದರೂ ಕ್ರಮ ಕೈಗೊಳ್ಳಬಹುದು’ ಎಂದು ಹೆಗಡೆ ಅವರನ್ನೇ ದೂರ ಸರಿಸಿದರು. ಹೆಗಡೆ ಅಸಹಾಯಕರಾಗಿ ದೂರ ಹೋದರು.

‘ಗ್ರಾಮಸ್ಥರ ಮನವೊಲಿಸುವ ಕೆಲಸ ಅಧಿಕಾರಿಗಳದ್ದು. ಆದರೆ, ಬಿಜೆಪಿ ಅಭ್ಯರ್ಥಿ ಆ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ಕಲ್ಪಿಸಬಾರದಿತ್ತು. ಈ ಸಂದರ್ಭದಲ್ಲಿ ಯಾವುದೇ ರೀತಿಯ ಭರವಸೆ ಕೊಡುವುದು ನೀತಿ ಸಂಹಿತೆಯ ಉಲ್ಲಂಘನೆ. ನೀವು ಬಿಜೆಪಿ ಏಜೆಂಟ್‌ರಂತೆ ವರ್ತಿಸುತ್ತಿದ್ದೀರಿ’ ಎಂದು ಬಿಜೆಪಿ ಮುಖಂಡರಾದ ನಿಂಬಗಲ್‌ ರಾಮಕೃಷ್ಣ, ಆಜಾದ್‌ ಅವರು ಹೆಗಡೆ ವಿರುದ್ಧ ಹರಿಹಾಯ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು