ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಂಕರ್‌ ನೀರಿಗೆ ಇಡೀ ರಾತ್ರಿ ಕಾಯುವ ಗ್ರಾಮಸ್ಥರು!

ವಾಲ್ವ್‌ಗೆ ವಿಷ ಬೆರಕೆ: ಟ್ಯಾಂಕರ್‌ಗಳಿಂದ ನೀರು ಪೂರೈಕೆ
Last Updated 13 ಜನವರಿ 2019, 1:49 IST
ಅಕ್ಷರ ಗಾತ್ರ

ಯಾದಗಿರಿ: ಕುಡಿಯುವ ನೀರಿಗೆ ಆಧಾರವಾಗಿದ್ದ ಬಾವಿಯ ವಾಲ್ವ್‌ಗೆ ಕಿಡಿಗೇಡಿಗಳು ವಿಷ ಹಾಕಿದ ಮೇಲೆ ತೆಗ್ಗಳ್ಳಿ, ಶಾಖಾಪುರದಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಟ್ಯಾಂಕರ್ ನೀರಿಗಾಗಿಯೇ ಜನ ರಾತ್ರಿ ಇಡೀ ಕಾಯುವಂತಹ ಸ್ಥಿತಿ ಎದುರಾಗಿದೆ.

ಸ್ವಚ್ಛಗೊಂಡ ನಂತರ ಬಾವಿಯಲ್ಲಿ ಸಂಗ್ರಹವಾಗುವ ನೀರನ್ನು ಪರೀಕ್ಷೆ ಮಾಡಿಸಿದ ಮೇಲೆ ಬಳಕೆಗೆ ಸೂಚಿಸಲಾಗುವುದು. ಜಿಲ್ಲಾಡಳಿತ ಸೂಚನೆ ನೀಡುವವರೆಗೂ ಬಾವಿಯಿಂದ ಎರಡೂ ಗ್ರಾಮಗಳಿಗೆ ನೀರು ಪೂರೈಕೆ ಮಾಡುವಂತಿಲ್ಲ. ಜನ ಕೂಡ ಬಾವಿಯ ನೀರನ್ನು ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

‘ಎರಡೂ ಗ್ರಾಮಗಳಿಗೆ ನೀರು ಪೂರೈಕೆಗೆ ನಾಲ್ಕು ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿದ್ದಾರೆ. ಈ ಟ್ಯಾಂಕರ್‌ಗಳು ಮುದನೂರು ಹಾಗೂ ಏವೂರುಗಳಿಂದ ನೀರು ಸರಬರಾಜು ಮಾಡುತ್ತಿವೆ. ಆದರೆ, ಎರಡೂ ಗ್ರಾಮಗಳು ಸೇರಿ ಒಟ್ಟು ಮೂರು ಸಾವಿರ ಜನಸಂಖ್ಯೆ ಇದೆ. ಟ್ಯಾಂಕರ್‌ಗಳ ನೀರು ಸಾಲುತ್ತಿಲ್ಲ. ಅಲ್ಲದೇ ಟ್ಯಾಂಕರ್‌ ನೀರಿಗಾಗಿ ಕಾದುಕೊಂಡೇ ದಿನಗೂಲಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಅಲ್ಲದೇ ಟ್ಯಾಂಕರ್‌ಗಳು ರಾತ್ರಿ ಸಮಯದಲ್ಲಿ ನೀರು ಪೂರೈಕೆ ಮಾಡುತ್ತಿರುವುದರಿಂದ ಪರದಾಡುವಂತಾಗಿದೆ’ ಎಂದು ತೆಗ್ಗಳ್ಳಿಯ ಬಸವರಾಜ್‌ ಅಸಹಾಯಕತೆ ವ್ಯಕ್ತಪಡಿಸಿದರು.

ಎಲ್ಲರೂ ಗುಣಮುಖ

ಕೀಟನಾಶಕ ಬೆರೆತ ನೀರು ಸೇವಿಸಿ ಅಸ್ವಸ್ಥರಾಗಿ ಶಹಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದ 16 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

‘ಮೊದಲು ದಾಖಲಾದ ನಾಲ್ವರಲ್ಲಿ ಹೊಟ್ಟೆ ನೋವು, ಕಣ್ಣುರಿ, ತಲೆ ನೋವು, ವಾಂತಿ ಬೇಧಿ ಕಾಣಿಸಿಕೊಂಡಿತ್ತು. ನಂತರ ದಾಖಲಾದ 12 ಮಂದಿ ಭೀತಿಗೆ ಒಳಗಾಗಿ ಅಸ್ವಸ್ಥರಾಗಿದ್ದರು. ಈಗ ಎಲ್ಲರೂ ಗುಣಮುಖರಾಗಿದ್ದು ಅವರನ್ನು ಶನಿವಾರ ಬಿಡುಗಡೆ ಮಾಡಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶ್‌ ಗುತ್ತೇದಾರ ತಿಳಿಸಿದರು.

**

ಗ್ರಾಮಕ್ಕೆ ಎರಡರಂತೆ ಒಟ್ಟು ನಾಲ್ಕು ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ. ನೀರಿನ ಅಭಾವ ಇದ್ದ ಕಡೆ ಪೂರೈಸಲು ಸೂಚಿಸಲಾಗುವುದು.

-ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT