ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಡಿಯೂರಪ್ಪ ಬೆಂಬಲಿಗರಿಂದ ಕೊಲೆಗೆ ಸಂಚು’

ಈಶ್ವರಪ್ಪ ಅವರ ಮಾಜಿ ಆಪ್ತ ಸಹಾಯಕ ಗಂಭೀರ ಆರೋಪ
Last Updated 12 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ತೇಜೋವಧೆ ಆಗುವಂತಹ ಡೈರಿ, ಪೆನ್‌ಡ್ರೈವ್ ಹಾಗೂ ಸಿ.ಡಿ ನನ್ನ ಬಳಿ ಇದೆ. ನನ್ನನ್ನು ಕೊಲೆ ಮಾಡಿಯಾದರೂ ಅವುಗಳನ್ನು ದೋಚಬೇಕೆಂದು ವ್ಯವಸ್ಥಿತ ಸಂಚು ನಡೆಯುತ್ತಿದೆ. ಹೀಗಾಗಿ, ನನಗೆ ಹಾಗೂ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು...’

ಹೀಗೆಂದು, ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಮಾಜಿ ಆಪ್ತ ಸಹಾಯಕ ವಿನಯ್ ಅವರು ಅಮೃತಹಳ್ಳಿ ಪೊಲೀಸರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ. ದೂರಿನ ಅನ್ವಯ ಎನ್‌ಸಿಆರ್ (ಸಾಮಾನ್ಯ ಪ್ರಕರಣ) ದಾಖಲಿಸಿಕೊಂಡಿರುವ ಪೊಲೀಸರು, ಭದ್ರತೆ ನೀಡುವ ಭರವಸೆ ನೀಡಿ ಕಳುಹಿಸಿದ್ದಾರೆ.

ಮನವಿ ಪತ್ರದ ವಿವರ: ‘ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್‌.ಆರ್.ಸಂತೋಷ್ ಸೂಚನೆ ಮೇರೆಗೆ 2017ರಲ್ಲಿ ಕೆಲ ರೌಡಿಗಳು ನನ್ನನ್ನು ಅಪಹರಿಸಿ ಕೊಲ್ಲಲು ಯತ್ನಿಸಿದ್ದರು. ಆದರೆ, ಅವರ ಯತ್ನ ವಿಫಲವಾಗಿತ್ತು.’

‘ಆ ಪ್ರಕರಣದಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದ ಸಂತೋಷ್, ‘ವಿನಯ್ ಬಳಿ ಇರುವ ದಾಖಲೆಗಳನ್ನು ತೆಗೆದುಕೊಂಡು ಬರುವಂತೆ ರಾಜೇಂದ್ರ ಅರಸ್ ಹಾಗೂ ಇತರರಿಗೆ ಸೂಚಿಸಿದ್ದೆ’ ಎಂದು ತಪ್ಪೊಪ್ಪಿಕೊಂಡಿದ್ದ. ಆನಂತರ ತನಿಖಾಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ದಾಖಲೆಗಳನ್ನು ತಮ್ಮ ಸುಪರ್ದಿಗೆ ಒಪ್ಪಿಸುವಂತೆ ನನಗೆ ನೋಟಿಸ್ ಕಳುಹಿಸಿದ್ದರು. ವಕೀಲರೊಂದಿಗೆ ಚರ್ಚಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ನ್ಯಾಯಾಲಯಕ್ಕೆ ಆ ದಾಖಲೆಗಳನ್ನು ಸಲ್ಲಿಸಲು ಸಿದ್ಧನಿದ್ದೇನೆ.’

‘ದಾಖಲೆಗಳು ನನ್ನ ಬಳಿ ಇರುವ ಕಾರಣ ಯಡಿಯೂರಪ್ಪ, ಸಂತೋಷ್ ಹಾಗೂ ಅವರ ಬೆಂಬಲಿಗರಿಂದ ನನ್ನ ಜೀವಕ್ಕೆ ಅಪಾಯವಿದೆ. ಈ ನಡುವೆ ಮನೆ ಸುತ್ತಮುತ್ತ ಅಪರಿಚಿತರ ಓಡಾಟ ಹೆಚ್ಚಾಗಿದ್ದು, ನನ್ನ ವಾಹನವನ್ನೂ ಕೆಲವರು ಹಿಂಬಾಲಿಸುತ್ತಿದ್ದಾರೆ. ಇದರಿಂದ ಭಯದ ವಾತಾವರಣದಲ್ಲೇ ಬದುಕುತ್ತಿದ್ದೇನೆ’ ಎಂದು ವಿನಯ್ ಮನವಿ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT