ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಮೇಲೆ ದೌರ್ಜನ್ಯ: ಶಿಕ್ಷೆ ಪ್ರಮಾಣ ಶೇ 6ರಷ್ಟು

ದೌರ್ಜನ್ಯ ತಡೆಗೆ ವಿಶೇಷ ಪೊಲೀಸ್‌ ಠಾಣೆಗಳ ಸ್ಥಾಪನೆ: ಎಚ್‌.ಕೆ. ಕುಮಾರಸ್ವಾಮಿ ನೇತೃತ್ವದ ಸಮಿತಿ ಶಿಫಾರಸು
Last Updated 18 ಡಿಸೆಂಬರ್ 2018, 19:37 IST
ಅಕ್ಷರ ಗಾತ್ರ

ಬೆಳಗಾವಿ: ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕೇವಲ ಶೇ 6ರಷ್ಟು ಇದೆ. ಪ್ರಕರಣಗಳ ಸಮರ್ಪಕ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಬೇಕು.

ವಿಶೇಷ ಪೊಲೀಸ್‌ ಠಾಣೆಗಳನ್ನು ತೆರೆಯಬೇಕು ಎಂದು ವಿಧಾನಮಂಡಲದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ. ಸಮಿತಿಯ ಮೊದಲ ವರದಿಯನ್ನು ಸಮಿತಿಯ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದರು.

2015ರಲ್ಲಿ ಶೇ 6ರಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 2016ರಲ್ಲಿ 1,012 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದ್ದು, ಶಿಕ್ಷೆ ಪ್ರಮಾಣ ಶೇ5ರಷ್ಟು. 2017ರಲ್ಲಿ 1032 ಪ್ರಕರಣಗಳು, 2018ರಲ್ಲಿ 456 ಪ್ರಕರಣಗಳು ಮುಕ್ತಾಯಗೊಂಡಿದ್ದು, ಶಿಕ್ಷೆ ಪ್ರಮಾಣ ಶೇ 5ರಷ್ಟಿದೆ. ಈ ವರ್ಷದ ಜುಲೈನಲ್ಲಿ 90 ಪ್ರಕರಣಗಳು ವಿಲೇವಾರಿಯಾಗಿದ್ದು, ಶಿಕ್ಷೆ ಪ್ರಮಾಣ ಶೇ 2ರಷ್ಟು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಲಮಿತಿಯಲ್ಲಿ ಈ ಪ್ರಕರಣಗಳ ತನಿಖೆ ಪೂರ್ಣಗೊಳಿಸಬೇಕು. ಶಿಕ್ಷೆ ಪ್ರಮಾಣ ಕಡಿಮೆಯಾದರೆ ತನಿಖೆ ಮಾಡಿದ ಪೊಲೀಸ್‌ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳಲ್ಲಿ ಅವರ ಕುಟುಂಬದವರಿಗೆ, ಅವಲಂಬಿತರಿಗೆ ಉದ್ಯೋಗ ನೀಡಲು ನೇಮಕಾತಿಗಳಲ್ಲಿ ಆದ್ಯತೆ ನೀಡಬೇಕು ಎಂದು ಸೂಚಿಸಿದೆ.

ಇತರ ಶಿಫಾರಸುಗಳು:

*ವಿದ್ಯಾರ್ಥಿ ವೇತನ ಪಡೆಯಲು ವಾರ್ಷಿಕ ಆದಾಯದ ಮಿತಿ ಹೆಚ್ಚಿಸಬೇಕು.

*ವಿದ್ಯಾರ್ಥಿನಿ ನಿಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಗುಣಮಟ್ಟದ ಆಹಾರ ನೀಡಬೇಕು. ಇದಕ್ಕಾಗಿ ನೋಡಲ್‌ ಅಧಿಕಾರಿಯ ನೇಮಕ ಮಾಡಬೇಕು.

*ಭೂ ಒಡೆತನ ಯೋಜನೆಯಡಿ ಪ್ರತಿ ಫಲಾನುಭವಿಗೆ ಒಂದು ಎಕರೆ ನೀರಾವರಿ ಜಮೀನು, ಎರಡು ಎಕರೆ ಖುಷ್ಕಿ ಜಮೀನು ಅಥವಾ ಒಂದು ಎಕರೆ ವರೆಗೂ ಬಾಗಾಯ್ತು ಜಮೀನುಗಳಿಗೆ ಮಾರುಕಟ್ಟೆ ದರಗಳಿಗೆ ಅನುಗುಣವಾಗಿ ಸರ್ಕಾರವೇ ಮೊತ್ತ ಭರಿಸಬೇಕು.

*ಪರಿಶಿಷ್ಟ ಜಾತಿ ಹಾಗೂ ಪಂಗಡದ ಪ್ರತಿಯೊಬ್ಬ ಷೇರುದಾರರಿಗೂ ಮತದಾನ ಹಕ್ಕನ್ನು ನೀಡಬೇಕು. ಸಹಕಾರ ಕಾನೂನಿಗೆ ತಿದ್ದುಪಡಿ ತಂದು ಸಹಕಾರ ಸಂಘ ಹಾಗೂ ಬ್ಯಾಂಕ್‌ಗಳಲ್ಲಿ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲೇ ಮೀಸಲಾತಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT