ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಕೇಳದ ಮಗಳ ಕೈ–ಕಾಲು ಮುರಿಯಿರಿ: ಸ್ವಾಮೀಜಿ

ಮದುವೆ ವಿಚಾರದಲ್ಲಿ ಯುವ ಜನರಿಂದ ಸ್ವತಂತ್ರ ನಿರ್ಧಾರ ಸಲ್ಲದು
Last Updated 14 ಜುಲೈ 2019, 9:44 IST
ಅಕ್ಷರ ಗಾತ್ರ

ತುಮಕೂರು: ‘ಮದುವೆ ವಿಚಾರದಲ್ಲಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಸ್ವತಂತ್ರ ನಿರ್ಧಾರ ಕೈಗೊಳ್ಳಬೇಡಿ. ಪೋಷಕರ ಮಾತನ್ನೆ ಕೇಳಿ’ ಎಂದು ಸಿದ್ದರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಯುವ ಜನರಿಗೆ ಸಲಹೆ ನೀಡಿದರು.

‘ನಮ್ಮ ಸಮುದಾಯದ ಪೋಷಕರೊಬ್ಬರು ಮಗಳನ್ನು ಕರೆದುಕೊಂಡು ಬಂದಿದ್ದರು. ಆ ಮಗಳು ಮೆಚ್ಚಿದ ಹುಡುಗನನ್ನೆ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳು. ನಾವೇಷ್ಟೆ ತಿಳಿಹೇಳಿದರೂ ಅವಳು ದಾರಿಗೆ ಬರಲಿಲ್ಲ. ‘ನನ್ನಿಷ್ಟದ ಹುಡುಗನೊಂದಿಗೆ ಮದುವೆಯಾಗಲು ನೀವು ಬಿಡದಿದ್ದರೆ, ಜೀವನಪೂರ್ತಿ ಅವಿವಾಹಿತಳಾಗಿಯೇ ಇರುತ್ತೇನೆ’ ಎಂದು ಕಡ್ಡಿ ಮುರಿದಂತೆ ಹೇಳಿದಳು’ ಎಂದು ಪ್ರಸಂಗವೊಂದನ್ನು ಹೇಳಿದರು.

‘ದೃಢನಿರ್ಧಾರದಂತೆ ವಯಸ್ಸಿಗೆ ಬಂದ ಆ ಮಗಳು ಅವಿವಾಹಿತಳಾಗಿ ಮನೆಯಲ್ಲಿ ಇದ್ದರೆ ಬಂಧು–ಬಾಂಧವರು ಕಾರಣ ಕೇಳುತ್ತಾರೆ. ಅವರಿಗೆ ಉತ್ತರಿಸಲು ತಂದೆ–ತಾಯಿಗೆ ಮುಜುಗರ ಆಗಬಹುದು. ಹಾಗಾಗಿ ಮಾತು ಕೇಳದ ಮಗಳ ಕೈಯೋ–ಕಾಲೋ ಮುರಿದು ಬಿಡಿ. ಅಂಗವಿಕಲತೆಯ ಕಾರಣಕ್ಕೆ ವರಿಸಲು ಯಾರೂ ಮುಂದೆ ಬರುತ್ತಿಲ್ಲವೆಂದು ಸಂಬಂಧಿಗಳಿಗೆ ಕಾರಣ ಹೇಳಬಹುದು ಎಂದು ಆ ಪೋಷಕರಿಗೆ ಸಲಹೆ ನೀಡಿದ್ದೇನೆ’ ಎಂದು ಶಿವಾಚಾರ್ಯ ಸ್ವಾಮೀಜಿ ಮಂದಸ್ಮಿತರಾಗಿ ಹೇಳಿದರು.

ಜಿಲ್ಲಾ ವೀರಶೈವ–ಲಿಂಗಾಯತ ಸೇವಾ ಸಮಿತಿಯು ಭಾನುವಾರ ಆಯೋಜಿಸಿದ್ದ ‘ಯುವ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ’ದಲ್ಲಿ ಅವರು ಮಾತನಾಡಿದರು.

‘ಮಾತನ್ನು ಮೀರಿ ಹಿಂದೆ–ಮುಂದೆ ನೋಡದೆ ನಿಮ್ಮ ಇಷ್ಟದವರನ್ನು ಮದುವೆ ಮಾಡಿಕೊಂಡರೆ ಪೋಷಕರು ನೊಂದುಕೊಳ್ಳುತ್ತಾರೆ. ಅವರ ಗೌರವ ಸಮಾಜದಲ್ಲಿ ಕಡಿಮೆ ಆಗುತ್ತದೆ. ಹೆತ್ತವರಿಗೆ ನೋವಾಗಿ ಕಣ್ಣಿರು ಹಾಕುತ್ತಾರೆ. ಕೆಲವು ಪೋಷಕರಂತೂ ಆತ್ಮಹತ್ಯೆಯ ನಿರ್ಧಾರ ತಳೆಯುತ್ತಾರೆ. ಹಾಗಾಗಿ ಮದುವೆ ನಿರ್ಧಾರವನ್ನು ತಂದೆ–ತಾಯಿಗೆ ಬಿಟ್ಟುಬಿಡಿ’ ಎಂದು ಅವರು ಸೇರಿದ್ದ ಯುವ ಸಮೂಹಕ್ಕೆ ಕಿವಿಮಾತು ಹೇಳಿದರು.

‘ನಿಮ್ಮನ್ನು ಹೆತ್ತು, ಉಣಿಸಿ, ಬೆಳೆಸಿದ ತಂದೆ–ತಾಯಿಗೆ ನಿಮ್ಮ ಇಷ್ಟಗಳು ಗೊತ್ತಿರುತ್ತವೆ. ನಿಮ್ಮ ಬಗ್ಗೆ ಅವರಿಗೆ ಖಂಡಿತ ಕಾಳಜಿ ಇರುತ್ತದೆ. ಆದ್ದರಿಂದಲೇ ಅವರು ನಿಮ್ಮ ಮದುವೆಗಾಗಿ ಹಲವಾರು ಕಡೆ ವಿಚಾರಿಸುತ್ತಾರೆ. ಶಾಸ್ತ್ರ ಕೇಳುತ್ತಾರೆ. ಪಂಚಾಂಗ ನೋಡುತ್ತಾರೆ. ಅವರಿಗೆ ನೀವು ಎಂದೆಂದೂ ನಡೆ–ನುಡಿಯಲ್ಲಿ ಅಗೌರವ ತೋರಬಾರದು’ ಎಂದು ಉಪದೇಶಿಸಿದರು.

‘ಇಂದಿನ ಯುವಜನರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಅವರಲ್ಲಿ ಒಳಿತು–ಕೆಡುಕಿನ ಅರಿವು ಮೂಡಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆತನ್ನಿ, ನಮ್ಮಂತವರ ಪ್ರವಚನಗಳಿಗೆ ಕರೆದುಕೊಂಡು ಬನ್ನಿ’ ಎಂದು ಸೇರಿದ್ದ ಪೋಷಕರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT