ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೇ ವರ್ಷದಲ್ಲಿ ಹೊಳಪು ಕಳೆದುಕೊಂಡ ಗೋಪುರ

ಹಂಪಿ ವಿರೂಪಾಕ್ಷೇಶ್ವರ ದೇಗುಲದ ಗೋಪುರಗಳ ಜೀರ್ಣೋದ್ಧಾರದಲ್ಲಿ ಅಕ್ರಮದ ವಾಸನೆ
Last Updated 3 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದ ಮೂರು ಗೋಪುರಗಳನ್ನು ಜೀರ್ಣೊದ್ಧಾರಗೊಳಿಸಿದ ಎರಡು ವರ್ಷದೊಳಗೆ ಹೊಳಪು ಕಳೆದುಕೊಂಡಿದ್ದು, ಅಕ್ರಮ ನಡೆಸಿ, ಕಳಪೆ ಕಾಮಗಾರಿಯ ಮಾಡಿರುವ ಆರೋಪ ಕೇಳಿ ಬಂದಿದೆ.

2017ರ ಅಕ್ಟೋಬರ್‌–ನವೆಂಬರ್‌ನಲ್ಲಿ ದೇವಸ್ಥಾನದ ಮುಖ್ಯ ಗೋಪುರಗಳಲ್ಲಿ ಒಂದಾಗಿರುವ ಬಿಷ್ಟಪ್ಪಯ್ಯ ಗೋಪುರ, ಗರ್ಭಗುಡಿಗೆ ಹೊಂದಿಕೊಂಡಿರುವ ರಾಯ ಮತ್ತು ಕನಕಗಿರಿ ಗೋಪುರಗಳನ್ನು ಜೀರ್ಣೊದ್ಧಾರಗೊಳಿಸಲಾಗಿತ್ತು. 

ಗೋಪುರಗಳ ಜೀರ್ಣೊದ್ಧಾರಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎ.ಎಸ್‌.ಐ.) ₹2 ಕೋಟಿ ಹಣ ವೆಚ್ಚ ಮಾಡಿತ್ತು. ತಮಿಳುನಾಡಿನಿಂದ ನುರಿತ ಕಲಾವಿದರನ್ನು ಕರೆಸಿ, ಮಳೆ–ಗಾಳಿಯಿಂದ ಎಲ್ಲೆಲ್ಲಿ ಗೋಪುರ ಹಾಳಾಗಿದೆಯೋ, ಬಿರುಕು ಬಿಟ್ಟಿತ್ತೋ ಅದನ್ನು ಗಾರೆ ಮಣ್ಣಿನಿಂದ ದುರಸ್ತಿಗೊಳಿಸಲಾಗಿತ್ತು. ಬಳಿಕ ನೈಸರ್ಗಿಕ ಬಣ್ಣ ಬಳಿಯಲಾಗಿತ್ತು. ಗೋಪುರಗಳ ಮೂಲ ಸ್ವರೂಪಕ್ಕೆ ಚ್ಯುತಿ ಬರದ ರೀತಿಯಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಗಿತ್ತು. 

ಕಾಮಗಾರಿ ಪೂರ್ಣಗೊಂಡ ಬಳಿಕ ನೂರಾರು ವರ್ಷ ಹಳೆಯ ಗೋಪುರಗಳು ಹೊಸದರಂತೆ ಕಂಗೊಳಿಸುತ್ತಿದ್ದವು. ಇಡೀ ದೇವಸ್ಥಾನಕ್ಕೆ ವಿಶೇಷ ಮೆರುಗು ಬಂದಿತ್ತು. ಎ.ಎಸ್‌.ಐ. ಕೆಲಸಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಈಗ ಅವುಗಳು ಈಗ ಹೊಳಪು ಕಳೆದುಕೊಂಡಿವೆ. ಅವುಗಳಿಗೆ ಬಳಸಿದ ಗಾರೆ ಮಣ್ಣು ಕಿತ್ತು ಹೋಗುತ್ತಿದೆ. ಇಡೀ ಗೋಪುರದ ಬಣ್ಣ ಹೋಗುತ್ತಿದ್ದು, ಕಪ್ಪು ವರ್ಣಕ್ಕೆ ತಿರುಗುತ್ತಿದೆ. ಕಳಪೆ ಕಾಮಗಾರಿಯಿಂದ ಈ ರೀತಿ ಆಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.

‘ಹಂಪಿ ಪರಿಸರದಲ್ಲಿ ಅನೇಕ ಸ್ಮಾರಕಗಳು, ದೇವಸ್ಥಾನಗಳಿವೆ. ಈ ಪೈಕಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಮಾತ್ರ ನಿತ್ಯ ಪೂಜೆ ನಡೆಯುತ್ತದೆ. ರಥಬೀದಿಯ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಯಾರೇ ಹಂಪಿಗೆ ಬಂದರೂ ವಿರೂಪಾಕ್ಷನ ಸನ್ನಿಧಿಗೆ ಬರದೆ ಹಿಂತಿರುಗುವುದಿಲ್ಲ. ಇಷ್ಟೊಂದು ಪ್ರಾಮುಖ್ಯತೆ ಹೊಂದಿರುವ ದೇವಸ್ಥಾನದ ಗೋಪುರಗಳ ಜೀರ್ಣೊದ್ಧಾರದಲ್ಲಿ ಅಕ್ರಮ ಎಸಗಿ, ಕಳಪೆ ಕಾಮಗಾರಿ ನಡೆಸಲಾಗಿದೆ. ಒಂದುವೇಳೆ ಗುಣಮಟ್ಟದ ಕಾಮಗಾರಿ ನಡೆದಿದ್ದರೆ ಹೀಗಾಗುತ್ತಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹಂಪಿ ನಿವಾಸಿ ರಾಜು.

‘ಗೋಪುರಗಳ ಜೀರ್ಣೊದ್ಧಾರಕ್ಕೂ ಮುನ್ನ ಅವುಗಳನ್ನು ನೋಡಿದರೆ ಅಂತಹ ವ್ಯತ್ಯಾಸವೇನೂ ಅನಿಸುತ್ತಿರಲಿಲ್ಲ. ಆದರೆ ಈಗ ಅಲ್ಲಲ್ಲಿ ಬಣ್ಣ ಹೋಗುತ್ತಿರುವುದರಿಂದ ನೋಡಲು ಸರಿ ಕಾಣುತ್ತಿಲ್ಲ. ವಿಶ್ವ ಪಾರಂಪರಿಕ ತಾಣದಲ್ಲೂ ಕಳಪೆ ಕಾಮಗಾರಿ ನಡೆಯುತ್ತದೆ ಎಂದರೆ ಎಷ್ಟರಮಟ್ಟಿಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬುದನ್ನು ನೋಡಬಹುದು. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಹಂಪಿ ಮಾರ್ಗದರ್ಶಿ ರಾಜೇಶ ಎಂಬುವರು ಆಗ್ರಹಿಸಿದರು.

ಈ ಸಂಬಂಧ ಎ.ಎಸ್‌.ಐ. ಹಂಪಿ ವೃತ್ತದ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಅವರನ್ನು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

**
ಗೋಪುರವಷ್ಟೇ ಅಲ್ಲ, ಹಂಪಿ ಪರಿಸರದಲ್ಲಿ ನಡೆದ ಬಹುತೇಕ ಸ್ಮಾರಕಗಳ ಕಾಮಗಾರಿಗಳು ಕಳಪೆಯಿಂದ ಕೂಡಿವೆ.
–ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಹಂಪಿ ವಿದ್ಯಾರಣ್ಯ ಮಠ

**
ಪ್ರತಿಕೂಲ ಹವಾಮಾನದಿಂದ ಗೋಪುರ ಬಣ್ಣ ಕಳೆದುಕೊಳ್ಳತ್ತಿ ರಬಹುದು. ಈ ಕುರಿತು ಪರಿಶೀಲನೆ ನಡೆಸಿ, ಕಾರಣ ತಿಳಿಯುವೆ.
–ಪಿ. ಕಾಳಿಮುತ್ತು, ಸೂಪರಿಟೆಂಡೆಂಟ್‌, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಹಂಪಿ ವೃತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT