ವೋಟಿಗಾಗಿ ಬಿಜೆಪಿಯಿಂದ ಹೊಲಸು ರಾಜಕೀಯ: ವಿಶ್ವನಾಥ್‌

7

ವೋಟಿಗಾಗಿ ಬಿಜೆಪಿಯಿಂದ ಹೊಲಸು ರಾಜಕೀಯ: ವಿಶ್ವನಾಥ್‌

Published:
Updated:
Deccan Herald

ಮೈಸೂರು: ‘ವೋಟಿಗಾಗಿ ಸಾವನ್ನು ವೈಭವೀಕರಿಸುತ್ತಿರುವ ಬಿಜೆಪಿಯು ರಾಜಕೀಯ ವ್ಯವಸ್ಥೆಯನ್ನು ಹೊಲಸುಗೊಳಿಸುತ್ತಿದೆ. ಜನಾರ್ದನರೆಡ್ಡಿ ಅವರಂಥವರು ರಾಜಕೀಯ ಸಾಂಸ್ಕೃತಿಯನ್ನೇ ಹಾಳು ಮಾಡುತ್ತಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಇಲ್ಲಿ ಗುರುವಾರ ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯನವರ ಮಗನ ಸಾವನ್ನು ಎಳೆದು ತಂದಿದ್ದು ಎಷ್ಟು ಸರಿ. ಇಂಥ ದುಃಸ್ಥಿತಿ ಬಿಜೆಪಿಗೆ ಏಕೆ ಬಂತು. ಇದು ಯಾವುದೇ ಪಕ್ಷಕ್ಕೆ ಶೋಭೆ ತರುವಂಥದ್ದಲ್ಲ. ಇದಕ್ಕೆ ಕ್ಷಮೆಯೂ ಇಲ್ಲ. ಬಿಜೆಪಿ ಮುಖಂಡರು ಇನ್ನಾದರೂ ಬುದ್ಧಿ ಕಲಿತು ಗಾಂಭೀರ್ಯ ಉಳಿಸಿಕೊಳ್ಳಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಬಿಜೆಪಿಯವರು ಮಂಡ್ಯದಲ್ಲಿ ವೋಟಿಗಾಗಿ ರೈತ ನಾಯಕರಾಗಿದ್ದ ಪುಟ್ಟಣ್ಣಯ್ಯ ಮನೆಗೆ ದುಂಬಾಲು ಬಿದ್ದಿದ್ದಾರೆ. ಅವರು ನಿಧನರಾದಾಗ ಅವರ ಮನೆಗೆ ಭೇಟಿ ಕೂಡ ನೀಡಲಿಲ್ಲ. ಈಗ ಸಮಾಧಿಗೆ ಮಾಲೆ ಹಾಕುತ್ತಿದ್ದಾರೆ. ಹಿಂದಿನಿಂದಲೂ ಕೇಸರಿ ಶಾಲು, ಹಸಿರು ಶಾಲಿಗೆ ಕಿರುಕುಳ ನೀಡುತ್ತಾ ಬಂದಿದೆ. ಹೀಗಾಗಿ, ಹಸಿರು ಶಾಲು– ಕೇಸರಿ ಶಾಲು ಒಂದಾಗುವ ಮಾತೇ ಇಲ್ಲ’ ಎಂದರು.

ಆಪರೇಷನ್‌ ಕಮಲ ತಿರುಗೇಟು: ‘ಆಪ‍ರೇಷನ್‌ ಕಮಲದಲ್ಲಿ ತೊಡಗಿದ್ದ ಬಿಜೆಪಿಗೆ ಈಗ ರಾಮನಗರ ಪ್ರಕರಣ ತಿರುಗೇಟು ನೀಡಿದೆ. ದೊಡ್ಡ ಪಾಠ ಕಲಿಸಿದ್ದು, ಈ ಪಕ್ಷದ ಪರಿಸ್ಥಿತಿ ಅಯ್ಯೋ ಎನ್ನುವ ಹಂತ ತಲುಪಿದೆ’ ಎಂದು ಲೇವಡಿ ಮಾಡಿದರು.

‘ವೋಟಿಗಾಗಿ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ರ ಹೆಸರಿನಲ್ಲಿ ಪ್ರಧಾನಿ ಮೋದಿ ಈಗ ಏಕತೆಯ ನಾಟಕವಾಡುತ್ತಿದ್ದಾರೆ. ಪಟೇಲ್‌ ದೇಶ ಒಗ್ಗೂಡಿಸಿದರು. ಆದರೆ, ಮೋದಿ ಹಿಂದಿ, ಹಿಂದು, ಹಿಂದೂಸ್ತಾನ್‌ ಎನ್ನುತ್ತಾ ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ದೇಶ ಒಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

ಲೋಕಸಭೆ ಚುನಾವಣೆಗೆ ಹೊಂದಾಣಿಕೆ‌

‘ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಮುಂದುವರಿಯಲಿದೆ. ಸೀಟು ಹಂಚಿಕೆ ವಿಚಾರವೂ ಒಂದು ಹಂತಕ್ಕೆ ಬಂದಿದೆ’ ಎಂದು ಎಚ್‌.ವಿಶ್ವನಾಥ್ ಹೇಳಿದರು.

‘ಕೋಮುವಾದಿ ಬಿಜೆಪಿ ಹೊರಗಿಡಲು ರಾಜಕೀಯ ಧ್ರುವೀಕರಣ ಆಗಲೇಬೇಕು. ಸಂಸ್ಕೃತಿಯೇ ಇಲ್ಲದ, ನಡವಳಿಕೆ ಸರಿ ಇಲ್ಲದ ಈ ಪಕ್ಷ ಮತ್ತೆ ಅಧಿಕಾರಕ್ಕೇರಲು ಅವಕಾಶ ನೀಡಬಾರದು’ ಎಂದರು.

ಪ್ರಮುಖವಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಪದೇಪದೇ ಪ್ರಸ್ತಾಪಿಸಿದ ವಿಶ್ವನಾಥ್‌ ಅವರು ಹಳೆ ಗೆಳೆಯನ ಮೇಲೆ ವಿಶೇಷ ಪ್ರೀತಿ ತೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !