ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಿದ್ದರಲ್ಲಿ ತಪ್ಪೇನಿದೆ?

ಶುಕ್ರವಾರ, ಏಪ್ರಿಲ್ 19, 2019
22 °C
ಕುಟುಂಬ ರಾಜಕಾರಣ ಎಂಬುದು ಅರ್ಥ ಹೀನ ಪದ

ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಿದ್ದರಲ್ಲಿ ತಪ್ಪೇನಿದೆ?

Published:
Updated:
Prajavani

ದೇವೇಗೌಡರ ಕುಟುಂಬದ ಸದಸ್ಯರು ರಾಜಕಾರಣದಲ್ಲಿ ಇರುವುದರಲ್ಲಿ ತಪ್ಪಿಲ್ಲ. ಎಲ್ಲ ರಾಜ್ಯಗಳಲ್ಲೂ ಕುಟುಂಬ ರಾಜಕಾರಣ ಇದೆ. ಕುಟುಂಬ ರಾಜಕಾರಣ ಪದವೇ ಅರ್ಥಹೀನ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಅಡಗೂರು ಎಚ್‌ ವಿಶ್ವನಾಥ್‌ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿ ತಮ್ಮ ಪುತ್ರನನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕೆ ಇಳಿಸಿದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು ; ‘ವೈ ನಾಟ್‌ ನಿಖಿಲ್‌ ಕುಮಾರ್‌ಸ್ವಾಮಿ’.

* ಮೈತ್ರಿ ಹೊಂದಾಣಿಕೆಯ ಪ್ರಕಾರ ಎಂಟು ಕ್ಷೇತ್ರಗಳಲ್ಲಿ ನಿಮಗೆ ಸಿಕ್ಕಿದ್ದವು. ಅಭ್ಯರ್ಥಿಗಳಿಲ್ಲದ ಕಾರಣಕ್ಕೆ ಒಂದನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದೀರಿ, ಒಂದರಲ್ಲಿ ಎರವಲು ಅಭ್ಯರ್ಥಿ ನೆರವು ಪಡೆದಿದ್ದೀರಿ.  ಶಕ್ತಿ ಇರದೇ ಇದ್ದರೂ ಎಂಟು ಕ್ಷೇತ್ರ ಪಡೆದಿದ್ದು ಯಾಕೆ?

ಹಾಗಲ್ಲ, ಸೀಟ್‌ ಶೇರಿಂಗ್‌ ವಿಚಾರದಲ್ಲಿ 12 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದೆವು. ಕೊಟ್ಟು ತೆಗೆದುಕೊಳ್ಳುವ ವ್ಯವಹಾರದಲ್ಲಿ  ಎಂಟು ಸ್ಥಾನ ಸಿಕ್ಕಿವೆ. ನಮಗೆ 8 ಅವರಿಗೆ 20 ಎನ್ನುವುದಕ್ಕಿಂತ, 28 ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಸಂಘಟಿತ ಹೋರಾಟ ನಡೆಸುವ ತೀರ್ಮಾನ ಮಾಡಿದ್ದೇವೆ. ಎರಡೂ ಪಕ್ಷಗಳು ಸೇರಿ ಹೆಚ್ಚು ಸ್ಥಾನ ಗೆಲ್ಲುವುದಷ್ಟೇ ನಮ್ಮ ಗುರಿ.

* ಕಡಿಮೆ ಕ್ಷೇತ್ರಗಳಲ್ಲಿ ನಿಮ್ಮ ಸ್ಪರ್ಧೆಯ ಅರ್ಥ ಪಕ್ಷದ ತಳಹದಿ ಭದ್ರವಾಗಿಲ್ಲ ಎಂಬುದೇ?

ಪಕ್ಷದ ತಳಹದಿ ವಿಸ್ತರಣೆಗೆ ಪ್ರಯತ್ನ ಮಾಡಿದ್ದರೂ ಕೆಲವು ಕಡೆ ಆಗಿಲ್ಲ ಎಂಬುದು ನಿಜ. ಆದರೆ, ಎಲ್ಲ ಜಿಲ್ಲೆಗಳ ಪದಾಧಿಕಾರಿಗಳ ಸಭೆ ಮಾಡಿದ್ದೇವೆ. ಜವಾಬ್ದಾರಿಯನ್ನೂ ನೀಡಿದ್ದೇವೆ. ಕೆಲವು ಕಡೆಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ.

* ಈ ಚುನಾವಣೆಯಲ್ಲಿ ಕುಟುಂಬ ರಾಜಕಾರಣದ ಬಗ್ಗೆಯೇ ನಿಮ್ಮ ಪಕ್ಷ ಉತ್ತರ ಕೊಡಬೇಕಾದ ಸ್ಥಿತಿ ಇದೆ. ತಾತ ಮೊಮ್ಮಕ್ಕಳು ಚುನಾವಣೆಗೆ ಸ್ಪರ್ಧಿಸಿರುವುದು ಒಂದು ರೀತಿಯಲ್ಲಿ ನಕಾರಾತ್ಮಕ ಸಂದೇಶ ರವಾನೆ ಆಗುತ್ತದೆಯಲ್ಲ?

ಭಾರತದಲ್ಲಿ ಕುಟುಂಬ ರಾಜಕಾರಣ ಎಂಬ ಪದವೇ ಅರ್ಥಹೀನವಾಗಿದೆ. ಲಾಲೂ ಯಾದವ್‌ ಮನೆಯಲ್ಲಿ ಏಳು ಜನ ರಾಜಕಾರಣದಲ್ಲಿ ಇದ್ದಾರೆ. ಉತ್ತರಪ್ರದೇಶದಲ್ಲಿ ಮುಲಾಯಂ ಮಗ, ಸೊಸೆ, ತಮ್ಮ, ಕಾಶ್ಮೀರದಲ್ಲಿದೆ, ನಮ್ಮಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪ, ಜಾರಕಿಹೊಳಿ, ಕತ್ತಿ ಇವರ ಕುಟುಂಬಹಳಿಲ್ಲವೇ. ಕುಟುಂಬ ರಾಜಕಾರಣ ದೇಶದಲ್ಲಿ ಒಪ್ಪಿತದ ಸಂಪ್ರದಾಯ. ಇದು ದೇವೇಗೌಡರ ಮನೆಗೆ ಸೀಮಿತವಾಗಿಲ್ಲ. ಕುಟುಂಬ ರಾಜಕಾರಣ ಸರ್ವವ್ಯಾಪಿ, ಭಾರತ ವ್ಯಾಪಿ.

* ಇದರಿಂದ 20– 30 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆಯಲ್ಲ?

ಕಾರ್ಯಕರ್ತರಿಗೆ ಶಾಸಕ ಸ್ಥಾನ, ಮಂತ್ರಿ ಸ್ಥಾನ, ನಿಗಮ–ಮಂಡಳಿಗಳಲ್ಲಿ ಅವಕಾಶ ನೀಡಿದ್ದೇವೆ. ನಿಷ್ಠಾವಂತರಿಗೆ ಅವಕಾಶ ಇದ್ದೇ ಇದೆ. ಹತಾಶರಾಗಬೇಕಾಗಿಲ್ಲ.

* ಮುಖ್ಯಮಂತ್ರಿ ಅವರು ತಮ್ಮ ಪುತ್ರ ನಿಖಿಲ್‌ ಅವರನ್ನು ಮಂಡ್ಯದಿಂದ ಕಣಕ್ಕೆ ಇಳಿಸುವ ಅಗತ್ಯವಿತ್ತೆ? ಇದಕ್ಕೆ ಸಾಕಷ್ಟು ಟೀಕೆ ಟಿಪ್ಪಣಿ ಕೇಳಿ ಬಂದಿದೆಯಲ್ಲ?

ಮುಖ್ಯಮಂತ್ರಿ ಪುತ್ರ ನಿಖಿಲ್‌ ಕುಮಾರ್‌ ಎಲ್ಲಿಂದಲೋ ಬಂದು ನಿಂತಿದ್ದಾರೆ ಎಂಬ ಟೀಕೆಗಳು ಸರಿಯಲ್ಲ. ಶೋಭಾ ಕರಂದ್ಲಾಜೆ ಎಲ್ಲಿಯವರು, ಸದಾನಂದಗೌಡರು ಎಲ್ಲಿಯವರು. ನಿಖಿಲ್‌ ಕುಮಾರಸ್ವಾಮಿ ವಿಷಯದಲ್ಲಿ ಏಕೆ ಈ ಭೇದ?. ಮಂಡ್ಯದ ಜನ ಕುಮಾರಸ್ವಾಮಿ ಮತ್ತು ದೇವೇಗೌಡರ ಬಗ್ಗೆ ಬಹಳ ಅಭಿಮಾನ ಇಟ್ಟುಕೊಂಡಿದ್ದಾರೆ. ಜನಕ್ಕೂ ಇವರ ಮೇಲೆ ನಂಬಿಕೆ ಇದೆ. ಕಳೆದ ವಿಧಾನಸಭೆಯಲ್ಲಿ ಪಕ್ಷದ ಎಂಟೂ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಈ ಬಾರಿ ನಿಖಿಲ್‌ ಗೆಲವು ಖಚಿತ.

* ಸುಮಲತಾ ಅವರನ್ನು ಕಣಕ್ಕೆ ಇಳಿಸುವುದರಲ್ಲಿ ಕಾಂಗ್ರೆಸ್‌, ಅದರಲ್ಲೂ ಸಿದ್ದರಾಮಯ್ಯ ಕೈವಾಡ ಇದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲ?

ಸುಮಲತಾ ಅವರನ್ನು ಕಣಕ್ಕೆ ಇಳಿಸಿದ್ದು ಪರೋಕ್ಷ ಆಶೀರ್ವಾದ ಇದೆ ಎಂಬುದು ಅಪ್ಪಟ ಗಾಳಿಸುದ್ದಿ. ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರು. ಈ ಚುನಾವಣೆಯಲ್ಲಿ ಮಿತ್ರ ಪಕ್ಷಗಳಿಗೆ ಅವರ ಸಂಪೂರ್ಣ ಸಹಕಾರ ಇದೆ. 15 ದಿನಗಳ ಹಿಂದೆಯೇ ಅವರು ಮಂಡ್ಯ ಸೀಟು ಸುಮಲತಾಗೆ ಕೊಡುವುದಿಲ್ಲ ಎಂದು ಖಡಕ್‌ ಆಗಿಯೇ ಹೇಳಿದ್ದಾರೆ. ಆದ್ದರಿಂದ ಸುಮ್ಮನೆ ಅವರ ಹೆಸರು ಎಳೆಯುವುದು ಸರಿಯಲ್ಲ.

* ಮಂಡ್ಯ, ಹಾಸನ ಮತ್ತು ತುಮಕೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹೊಂದಾಣಿಕೆ ವಿರೋಧಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರಲ್ಲ?

ತುಮಕೂರಿನಲ್ಲಿ ಮುದ್ದಹನುಮೇಗೌಡ ಮತ್ತು ಕೆ.ಎನ್‌. ರಾಜಣ್ಣ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ದೇವೇಗೌಡರು ಮಾಜಿ ಪ್ರಧಾನಮಂತ್ರಿ ಆಗಿದ್ದವರು ಅವರಿಗೆ ಕೊನೆ ಅವಕಾಶ ಕೊಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್‌ ನಾಯಕರು  ಎಲ್ಲ ಭಿನ್ನಾಭಿಪ್ರಾಯ ಬದಿಗೊತ್ತಿ ಕೈಜೋಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಇಬ್ಬರಿಗೂ ಅವಕಾಶಗಳನ್ನು ಕಲ್ಪಿಸಲಾಗುವುದು. ಮಂಡ್ಯ ಮತ್ತು ತುಮಕೂರಿನಲ್ಲೂ ಕಾಂಗ್ರೆಸ್‌ನವರು ನಮಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ. 

* ಈ ಚುನಾವಣೆಯಲ್ಲಿ ಮೋದಿ ನೇತೃತ್ವದ ದಂಡು– ದಾಳಿ ಹೇಗೆ ನಿಭಾಯಿಸುತ್ತೀರಿ? 

ಮೋದಿಯವರ ದಂಡು– ದಾಳಿ ತಡೆಯುವ ಶಕ್ತಿ ನಮ್ಮ ಬಳಿ ಇದೆ. ಆದರೆ, ಮೋದಿ 5 ವರ್ಷ ಏನು ಮಾಡಿದ್ದಾರೆ? ಎಲ್ಲ ರಂಗಗಳಲ್ಲೂ ವಿಫಲರಾಗಿದ್ದಾರೆ, ಅವರ ವೈಫಲ್ಯಗಳನ್ನು ಜನರಿಗೆ ವಿವರಿಸುತ್ತೇವೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ, ಐದು ವರ್ಷಗಳಲ್ಲಿ ಕೇವಲ 80 ಲಕ್ಷ ಉದ್ಯೋಗಗಳನ್ನು ಮಾತ್ರ ಸೃಷ್ಟಿಸಿದ್ದಾರೆ. ನೋಟು ರದ್ಧತಿ ಮತ್ತು ಜಿಎಸ್‌ಟಿ ಜಾರಿಯಿಂದ ಜನತೆ ಬೀದಿಗೆ ಬರುವಂತಾಯಿತು. ಸಣ್ಣಪುಟ್ಟ ವ್ಯಾಪಾರಿಗಳು ನಾಶವಾಗಿ ಹೋದರು. ಮೋದಿ ಬರೀ ಸುಳ್ಳಗಳನ್ನೇ ಹೇಳುತ್ತಾ ಹೋದರು. ಜನ ಬುದ್ಧಿವಂತರಿದ್ದಾರೆ; ಅವರಿಗೆ ಪಾಠ ಕಲಿಸುತ್ತಾರೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 16

  Angry

Comments:

0 comments

Write the first review for this !