ಶುಕ್ರವಾರ, ಸೆಪ್ಟೆಂಬರ್ 25, 2020
28 °C

ಸರ್ಕಾರ ಪತನಕ್ಕೆ ನಾವು ಕಾರಣರಲ್ಲ | ಅನರ್ಹ ಶಾಸಕರ ಪರ ವಿಶ್ವನಾಥ್ ಬ್ಯಾಟಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಲು ಸರ್ಕಾರವನ್ನು ಮುನ್ನಡೆಸಿದವರೇ ಕಾರಣ. ಶಾಸಕರನ್ನು ಗೌರವದಿಂದ ನಡೆಸಿಕೊಂಡರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಅನರ್ಹಗೊಂಡಿರುವ ಶಾಸಕ ಎಚ್‌.ವಿಶ್ವನಾಥ್ ಹೇಳಿದರು.

ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಮುಂಚೂಣಿಯಲ್ಲಿದ್ದ ನಾಯಕರು ಮಾಲೀಕರಂತೆ ವರ್ತಿಸಿದರು. ಅವರು ನಾಯಕರಂತೆ ವರ್ತಿಸಿದ್ದರೆ ಸರ್ಕಾರ ಉಳಿಯುತ್ತಿತ್ತು. ಈ ಸರ್ಕಾರದ ಸ್ಥಾಪನೆಗೆ ಅಥವಾ ಪತನಕ್ಕೆ ನಾವು ಕಾರಣರಲ್ಲ’ ಎಂದು ಅಭಿಪ್ರಾಯಪಟ್ಟರು.

‘ಮಂಡ್ಯ ಜನ ನಮಗೆ ವಿಷ ಉಣಿಸಿದರು’ ಎಂದು ನಿನ್ನೆ ಕೆ.ಆರ್.ಪೇಟೆಯಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ನಿಜವಾಗಿಯೂ ದೇವೇಗೌಡರ ಕುಟುಂಬಕ್ಕೆ ವಿಷ ಉಣಿಸಿದ್ದು ಸಾ.ರಾ.ಮಹೇಶ್. ದೇವೇಗೌಡರ ಕುಟುಂಬ ಹಾಳಾಗಲು ಸಾ.ರಾ.ಮಹೇಶ್ ಕಾರಣ ಎಂದು ವಿಶ್ವನಾಥ್ ಗಂಭೀರ ಆರೋಪ ಮಾಡಿದರು.

‘ನಮ್ಮ ದೇಶದಲ್ಲಿ ನೂರೆಂಟು ವಾದಗಳಿವೆ. ಕೋಮುವಾದ, ಜಾತ್ಯತೀರವಾದ, ಕಮ್ಯುನಿಷ್ಟ್‌ವಾದ ಇತ್ಯಾದಿ. ನಮಗೆ ಬೇಕಾದ ವಾದವನ್ನು ನಮ್ಮ ಪರವಾಗಿ ಮಾಡಿಕೊಳ್ತಾ ಇದ್ದೀವಿ. ಇದರ ಬಗ್ಗೆ ಜನರಿಗೆ ಗೊತ್ತಿಲ್ಲ. ಅವರು ನಿಮ್ಮ ವಾದಗಳನ್ನು ನೀವೇ ಇಟ್ಟುಕೊಳ್ಳಿ ಎನ್ನುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಸರ್ಕಾರ ಸ್ಥಾಪನೆಗೆ ಅಥವಾ ಪತನಕ್ಕೆ ನಾವು ಕಾರಣವಲ್ಲ. ಸರ್ಕಾರ ನಡೆಸುತ್ತಿದ್ದ ಪಾಲುದಾರ ಪಕ್ಷಗಳ ನೇರ ಹೊಣೆ ಹೊರಬೇಕು. ಶಾಸಕರನ್ನು ಕಡೆಗಣಿಸಿದ್ದರಿಂದ, ಯಾವುದೇ ಗೌರವ ಕೊಡಲಿಲ್ಲ. ಮಾಲೀಕರ ಥರ ಇದ್ರು. ನಾಯಕರ ಥರ ಇರಲಿಲ್ಲ. ಅವರು ಇದಕ್ಕೆ ನೇರ ಹೊಣೆ ಹೊರಬೇಕು.

‘ಜೆಡಿಎಸ್‌ ಪಕ್ಷದ ರಾಷ್ಟ್ರಾಧ್ಯಕ್ಷರಾದ ಎಚ್‌.ಡಿ.ದೇವೇಗೌಡರಲ್ಲಿ ನಾನು ಕ್ಷಮೆ ಕೇಳ್ತೀನಿ. ನನ್ನ ಮೇಲೆ ಅಪಾರವಾದ ಪ್ರೀತಿ, ವಿಶ್ವಾಸ ಇಟ್ಟು ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರು. ಆದರೆ ನನಗಾದ ಅವಮಾನ ಮತ್ತು ನಿರ್ಲಕ್ಷ್ಯದಿಂದ ನಾನು ಇಂಥ ನಿರ್ಧಾರ ತೆಗೆದುಕೊಳ್ಳಬೇಕಾಯಿತು’ ಎಂದು ವಿಷಾದಿಸಿದರು.

‘ರಾಜಕಾರಣ ನಂಬಿಕೆಯ ಮೇಲೆ ನಡೆಯುತ್ತದೆ. ಸಾ.ರಾ.ಮಹೇಶ್ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ನನಗೆ ಬೇಸರವಾಗಿದೆ. ಸದನದಲ್ಲಿ ಸಲ್ಲದ ವರ್ತನೆಗೆ ಅವಕಾಶ ಮಾಡಿಕೊಟ್ಟ ಅಂದಿನ ಸಭಾಧ್ಯಕ್ಷ ರಮೇಶ್‌ ಕುಮಾರ್ ಇದರ ಹೊಣೆ ಹೊರಬೇಕು’ ಎಂದು ಆಗ್ರಹಿಸಿದರು. ‘ಚುನಾವಣಾ ರಾಜಕಾರಣ ನನಗೆ ಸಾಕಾಗಿದೆ. ಇದು ಖಂಡಿತಾ ಪಲಾಯನವಾದವಲ್ಲ’ ಎಂದು ವಿಶ್ಲೇಷಿಸಿದರು.

ಯಾವಾಗ ರಾಜೀನಾಮೆ ಕೊಡ್ತೀರಿ? ಸಿದ್ದರಾಮಯ್ಯಗೆ ಪ್ರಶ್ನೆ

‘ಲೋಕಸಭೆ ಚುನಾವಣೆ ನಂತರ ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ರಾಜೀನಾಮೆ ಕೊಟ್ರು. ರಾಜ್ಯದ ಸೋಲಿನ ಹೊಣೆ ಹೊತ್ತು ನಾನು ರಾಜೀನಾಮೆ ಕೊಟ್ಟೆ. ನೀವು ಯಾವಾಗ ರಾಜೀನಾಮೆ ಕೊಡ್ತೀರಿ? ದೇವೇಗೌಡರನ್ನು ತುಮಕೂರಿಗೆ ಕರೆದೊಯ್ದು ಖೆಡ್ಡಾಕ್ಕೆ ಕೆಡವಿದ್ದೇ ನೀವು’ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

‘ನೀವಿನ್ನೂ ಗೂಟಾ ಹೊಡ್ಕೊಂಡು ಅಲ್ಲೇ ಕುಳಿತಿದ್ದೀರಾ ಸಿದ್ದರಾಮಯ್ಯನವರೇ. ರಾಜ್ಯದ ಜನ ನಿಮ್ಮನ್ನು ಹೀನಾಯವಾಗಿ ಸೋಲಿಸಿದರು. ಯಾರು ನಿಮಗೆ ಡಿಸಿಎಂ ಮಾಡಿದ್ರೋ, ಅವರಿಗೆ ಖೆಡ್ಡಾ ತೋಡಿದಿರಿ. ತುಮಕೂರಿಗೆ ಕರೆದುಕೊಂಡು ಹೋಗಿ ದೇವೇಗೌಡರನ್ನು ಸೋಲಿಸಿದಿರಿ’ ಎಂದು ಲೇವಡಿ ಮಾಡಿದರು.

‘ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಸಂಸಾರದ ಕೆಲಸ ಆಗಿದೆ ಹೊರೆತು ಸಾರ್ವಜನಿಕರ ಕೆಲಸ ಆಗಿಲ್ಲ. ಸಂಸಾರದ ಕೆಲಸ ಬಿಟ್ಟು ಇನ್ನೇನಾಗಿದೆ ಎಂದು ಅವರು ಬಹಿರಂಗವಾಗಿ ಹೇಳಲಿ’ ಎಂದು ಸಮ್ಮಿಶ್ರ ಸರ್ಕಾರಕ್ಕೆ ಪ್ರಶ್ನೆ ಹಾಕಿದರು.

ಸಾ.ರಾ.ಮಹೇಶ್‌ಗೆ ತರಾಟೆ

‘ಸಭೆ ನಂಬಿಸಲು ಅಪ್ಪನಾಣೆ ಅಮ್ಮನಾಣೆ ಹಾಕ್ತಿಯಾ. ನೀನು ಒಬ್ಬ ಮಂತ್ರಿನಾ? ಒಬ್ಬ ರಾಜಕಾರಣಿನಾ? ಮಾನ ಮರ್ಯಾದೆ ಇಲ್ಲವೇ?  ಸದನದಲ್ಲಿ ಯಾರ ಮೇಲಾದರೂ ಆರೋಪ ಮಾಡಬಹುದು. ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಲು ಆಗುವುದಿಲ್ಲ. ಅದಕ್ಕಾಗಿಯೇ ನನ್ನ ಮೇಲೆ ಸುಖಾಸುಮ್ಮನೆ ಆರೋಪ ಮಾಡಿದರು. ಹೊರಬಂದು ಮಾತನಾಡು ಅಂತ ಸಾ.ರಾ.ಗೆ ಹೇಳಿದ್ದೀನಿ’ ಎಂದು ವಿಶ್ವನಾಥ್ ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಸವಾಲು ಹಾಕಿದರು.

‘ಸಾ.ರಾ.ಮಹೇಶ್‌ ಅವರಂಥ ಅಪ್ರಬುದ್ಧರು ಬೇಕಾಬಿಟ್ಟಿ ಮಾತನಾಡುತ್ತಾರೆ. ದುಡ್ಡಿಗಾಗಿ ಪಕ್ಷ ಬಿಟ್ಟರು ಎನ್ನುತ್ತಿದ್ದಾರೆ. ನಾವ್ಯಾರೂ ದುಡ್ಡಿಗೆ ಹೋಗಿಲ್ಲ. ಇದು ಆಪರೇಷನ್ ಕಮಲ ಕೂಡ ಅಲ್ಲ. ರಾಜೀನಾಮೆ ನೀಡಿದವರೆಲ್ಲಾ ದುಡ್ಡಿನ ಕುಳಗಳೇ. ಯಾರು ಸಹ ಪದವಿಗಾಗಿ ರಾಜೀನಾಮೆ ನೀಡಿಲ್ಲ’ ಎಂದರು.

ನನ್ನ ಮತ್ತು ಸಿದ್ದರಾಮಯ್ಯ ನಡುವೆ ಕಂದಕ

ಕೆ.ಆರ್.ನಗರದಲ್ಲಿ ಸಮಾವೇಶ ನಡೆದಾಗ ರಾಹುಲ್ ಗಾಂಧಿ ಭೇಟಿಗೆ ನನಗೆ ಅವಕಾಶ ಕೊಡಲಿಲ್ಲ. ಅವರ ಅಜ್ಜಿ ಇಂದಿರಾ ಗಾಂಧಿ ಕೆ.ಆರ್.ನಗರಕ್ಕೆ ಬಂದಿದ್ದಾಗ ನಾನು ಭೇಟಿ ಮಾಡಿದ್ಧೆ. ಹಾಗೆಯೇ ಅವರ ಮೊಮ್ಮೊಗನನ್ನು ಭೇಟಿ ಮಾಡಲು ಸಿದ್ಧವಾಗಿದ್ದೆ. ಹೊರಡಲು ಸಿದ್ದವಾಗಿದ್ದಾಗ ‘ಸಿದ್ದರಾಮಯ್ಯ ಇದ್ದಾರೆ ಬರಬೇಡಿ’ ಎಂದು ಸಂದೇಶ ಕಳಿಸಿದರು. 

‘ಸಿದ್ದರಾಮಯ್ಯ ನೀವು ಒಂದೇ ವೇದಿಕೆಯಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ನನ್ನ ಸಿದ್ದರಾಮಯ್ಯ ನಡುವೆ ಇವರೇ ಕಂದಕ ಸೃಷ್ಟಿ ಮಾಡಿದರು. ಸಿದ್ದರಾಮಯ್ಯ ಇದ್ದಾರೆ, ಸಮಾವೇಶಕ್ಕೆ ಬರಬೇಡಿ ಎಂದರು. ಸಿದ್ದರಾಮಯ್ಯ ಇದ್ದಾರೆ ಸಮನ್ವಯ ಸಮಿತಿಗೆ ಬರಬೇಡಿ ಎಂದರು. ಸಿದ್ದರಾಮಯ್ಯ ಇದ್ದಾರೆ ಅಲ್ಲಿಗೆ ಬರಬೇಡಿ ಇಲ್ಲಿಗೆ ಬರಬೇಡಿ. ಯಾವ ಸಿದ್ದರಾಮಯ್ಯರಿಂದ ಕಾಂಗ್ರೆಸ್ ಬಿಟ್ಟೆನೊ ಅವರೇ ಮತ್ತೆ ಇಲ್ಲಿ ಬಂದು ಕಿರುಕುಳ ಕೊಟ್ಟರು. ವಿಶ್ವನಾಥ್ ಬರ್ತಾರೆ ಅಂತ ಹೇಳೋ ನೈತಿಕತೆ ನಿಮಗೆ ಇರಲಿಲ್ವಾ?
ಜೆಡಿಎಸ್ ಅಧ್ಯಕ್ಷರಾಗಿದ್ದುಕೊಂಡು ಸಿದ್ದರಾಮಯ್ಯ ಜೊತೆ ಕುಳಿತಿಕೊಳ್ಳಲು ಆಗಲಿಲ್ಲವಲ್ಲ. ಏಕೆ ಈ ಪರಿಸ್ಥಿತಿ ನಿರ್ಮಾಣ ಆಯಿತು?’ ಎಂದು ಅವರು ಜೆಡಿಎಸ್ ನಾಯಕರನ್ನು ಪ್ರಶ್ನಿಸಿದರು.

ನಾವು ಅತೃಪ್ತರಲ್ಲ

‘ಪಾಲುದಾರ ಪಕ್ಷದ ಮಾಲೀಕರು ಅತೃಪ್ತರೇ ಹೊರತು ನಾವು ಅತೃಪ್ತರಲ್ಲ’ ಎಂದು ವಿಶ್ವನಾಥ್ ಹೇಳಿದರು. ಪರಸ್ಪರ ಹೊಂದಾಣಿಕೆ ಇಲ್ಲದೆ ಇರುವ ಕಾರಣಕ್ಕೆ ಸರ್ಕಾರ ಪತನವಾಗಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಸಿದ್ದರಾಮಯ್ಯ ಮೈತ್ರಿ ಬಗ್ಗೆ ಅತೃಪ್ತಿ ವ್ಯಕ್ತ ಪಡಿಸಿದ್ದರು. ಇವೆಲ್ಲವೂ ಸರ್ಕಾರದ ಪತನಕ್ಕೆ ಕಾರಣವಾಯಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಕೆಲ ನಾಯಕರ ಒಪ್ಪಿಕೊಳ್ಳಲಿಲ್ಲ. ಇವರು ಸಿಎಂ ಥರ ಕಾಣಲೇ ಇಲ್ಲ ಅಂತ ಹೇಳಿದ್ದಾರೆ. ಅವರ ಹೊಂದಾಣಿಕೆ ಕೊರತೆಯೆ ಪತನಕ್ಕೆ ಕಾರಣವಾಯಿತು ಎಂದು ವಿಶ್ಲೇಷಿಸಿದರು.

ಪೊಲೀಸ್ ಭದ್ರತೆ: ವಿಶ್ವನಾಥ್ ಅವರ ಪತ್ರಿಕಾಗೋಷ್ಠಿಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಎರಡು ಪೊಲೀಸ್ ವ್ಯಾನ್ ನಿಯೋಜಿಸಲಾಗಿತ್ತು. ಎಸಿಪಿ ಹಂತದ ಅಧಿಕಾರಿ ನೇತೃತ್ವದಲ್ಲಿ 30ಕ್ಕೂ ಅಧಿಕ ಪೊಲೀಸರು ಭದ್ರತೆ ಒದಗಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು