ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ತಪ್ಪದ ನೀರಿನ ಬವಣೆ

ಕೆರೆಗಳಿಗೆ ಕಬಿನಿ ನದಿ ಮೂಲದಿಂದ ನೀರು ತುಂಬಿಸುವ ಯೋಜನೆ ಜಾರಿ
Last Updated 22 ಮಾರ್ಚ್ 2018, 8:46 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕಬಿನಿ ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಎರಡನೇ ಹಂತ ಜಾರಿಗೊಂಡರೂ ನೀರಿನ ಬವಣೆ ಮಾತ್ರ ತಪ್ಪಿಲ್ಲ. ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತ ಸ್ಥಿತಿ ಜಿಲ್ಲೆಯ ಕೆರೆಗಳದ್ದಾಗಿದೆ.

ಮುಖ್ಯವಾಗಿ ನಗರದಲ್ಲೇ ಸಮರ್ಪಕವಾದ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಇಲ್ಲ. ತಿ.ನರಸೀಪುರದ ಕಬಿನಿ ನದಿಯಿಂದ ನೀರನ್ನು ತರುವ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ತಿ.ನರಸೀಪುರದ ನೀರು ಸರಬರಾಜು ಕೇಂದ್ರ ಹಾಗೂ ಮಂಗಳದ ನೀರು ಶುದ್ಧೀಕರಣ ಕೇಂದ್ರದಲ್ಲಿ ಪದೇ ಪದೇ ಕೆಟ್ಟು ನಿಲ್ಲುವ ಮೋಟಾರ್‌ನಿಂದ ನಾಗರಿಕರಿಗೆ ಸಕಾಲದಲ್ಲಿ ನೀರು ತಲುಪುತ್ತಿಲ್ಲ. ಒಮ್ಮೆ ಕೆಟ್ಟು ಹೋದರೆ ಅದು ದುರಸ್ತಿಯಾಗಿ ಮತ್ತೆ ನೀರು ಬರುವ ಹೊತ್ತಿಗೆ ಕನಿಷ್ಠ 15 ದಿನಗಳಾದರೂ ಕಳೆದಿರುತ್ತದೆ.

ಒಂದೆಡೆ ಪಟ್ಟಣಗಳಲ್ಲಿ ಈ ಪರಿಸ್ಥಿತಿಯಾದರೆ ಮತ್ತೊಂದೆಡೆ ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕೊಳವೆ ಬಾವಿಗಳಲ್ಲಿ ಬತ್ತುತ್ತಿರುವ ನೀರಿನಿಂದ ಹಲವು ಗ್ರಾಮಗಳಲ್ಲಿ ವಾರಕ್ಕೊಮ್ಮೆ ನೀರು ಬಿಡುವಂತಹ ಸ್ಥಿತಿ ಇದೆ.

ತುಂಬದ ಮಾಲಂಗೆರೆ: ಕಬಿನಿ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯಡಿ ನಗರದ  ಪ್ರಮುಖ ಕೆರೆ ಎನಿಸಿದ ಮಾಲಂಗೆರೆಗೆ ನೀರು ತುಂಬಿಸಲು ಯತ್ನಿಸಲಾಯಿತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬಾರದೇ ಇರುವುದರಿಂದ ಮಾಲಂಗೆರೆ ಸಂಪೂರ್ಣ ತುಂಬಿಲ್ಲ. ಇದರಿಂದ ನಗರದ ಕೊಳವೆ ಬಾವಿಗಳು ಪುನಶ್ಚೇತನ ಕಂಡಿಲ್ಲ. ಒಂದು ವೇಳೆ ಈ ಕೆರೆ ಸಂಪೂರ್ಣ ತುಂಬಿದರೆ ನಗರದ ಸುತ್ತಮುತ್ತಲು ಇರುವ ಎಲ್ಲ ಕೈಪಂಪುಗಳಲ್ಲೂ ನೀರು ಜಿನುಗುತ್ತದೆ. ww‘ಹಿಂದೆ ಈ ಕೆರೆ ತುಂಬಿರುತ್ತಿದ್ದಾಗ ತಾಲ್ಲೂಕಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುತ್ತಿರಲಿಲ್ಲ. ಗ್ರಾಮಗಳಲ್ಲಿದ್ದ ಎಲ್ಲ ಬಾವಿಗಳೂ ಸಮೃದ್ಧ ನೀರಿನಿಂದ ತುಂಬಿರುತ್ತಿದ್ದವು’ ಎಂದು ಸಂತೇಮರಹಳ್ಳಿಯ ಹಿರಿಯಜ್ಜ ಶಿವಸ್ವಾಮಿ ನೆನಪಿಸಿಕೊಳ್ಳುತ್ತಾರೆ.
**
ಕ್ರೀಡಾಂಗಣವಾದ ಕೆರೆಗಳು
ನಗರದ ಹೃದಯಭಾಗದಲ್ಲಿದ್ದ ಪುರಾತನ ದೊಡ್ಡ ಅರಸನ ಕೊಳ ಈಗ ನಾಮಾವಶೇಷವಾಗುವ ಹಂತದಲ್ಲಿದೆ. ಎಕರೆಗಟ್ಟಲೆ ಪ್ರದೇಶಕ್ಕೆ ಮಣ್ಣು ತುಂಬಿ ಕ್ರೀಡಾಂಗಣ ಮಾಡಿದ್ದರೆ, ಮತ್ತೊಂದಿಷ್ಟು ಜಾಗವನ್ನು ಖಾಸಗಿ ಬಸ್‌ನಿಲ್ದಾಣವನ್ನಾಗಿಸಲಾಗಿದೆ. ಸದ್ಯ, ಕೆರೆಗೆ ಜೀವಜಲ ತುಂಬುತ್ತಿದ್ದ ಒಂದು ಹೊಂಡವಷ್ಟೇ ಉಳಿದಿದೆ. ಗಿಡಗಂಟಿಗಳು ಬೆಳೆದುಕೊಂಡಿದ್ದು, ಅದೂ ನಿರ್ನಾಮವಾಗುವ ಕಾಲ ದೂರವಿಲ್ಲ ಎನಿಸಿದೆ.

ಸಂತೇಮರಹಳ್ಳಿ ವೃತ್ತದ ಬಳಿ ಇದ್ದ ಕಲ್ಯಾಣಿಯೊಂದು ಈಗಾಗಲೇ ಕುರುಹು ಸಿಗದ ಹಾಗೆ ಮುಚ್ಚಿ ಹೋಗಿದೆ. ಅಲ್ಲೊಂದು ತರಕಾರಿ ಮಾರುಕಟ್ಟೆ ನಿರ್ಮಿಸುವ ಯೋಜನೆ ಸಿದ್ಧವಾಗಿದೆ.
**
ಕೆರೆ ತುಂಬಿದರೆ ಕೈಪಂಪಿಗೆ ಜೀವ
ಕೆರೆಗಳು ತಂಬಿದರೆ ಅಂತರ್ಜಲದ ಪ್ರಮಾಣ ಏರಿಕೆಯಾಗುತ್ತದೆ ಎಂಬುದಕ್ಕೆ ಜಿಲ್ಲೆಯಲ್ಲಿ ಹಲವು ಜೀವಂತ ಉದಾಹರಣೆಗಳು ಸಿಗುತ್ತವೆ. ಬೆಂಡರವಾಡಿ ಕೆರೆ, ಕೋಣನೂರು ಕೆರೆ ಹಾಗೂ ಇನ್ನಿತರ ಕೆರೆಗಳನ್ನು ಕಬಿನಿ ನದಿ ಮೂಲದಿಂದ ತುಂಬಿಸಿದ ಬಳಿಕ ನಿಂತು ಹೋಗಿದ್ದ ಕೊಳವೆಬಾವಿಗಳು ಜೀವ ಪಡೆದಿವೆ. ನೀರು ಕಡಿಮೆಯಾಗಿದ್ದ ಕೊಳವೆಬಾವಿಗಳಲ್ಲಿ ಭರಪೂರ ನೀರು ಬರತೊಡಗಿದೆ. ಇದರಿಂದ ಸುತ್ತಮುತ್ತಲ   ತೋಟಗಳಲ್ಲಿ ಮರಳಿ ಜೀವ ಕಳೆ ಬಂದಿದೆ. ಗುಳೆ ಹೊರಟಿದ್ದ ರೈತಾಪಿ ವರ್ಗ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿದರೆ ಕೆಲಸಕ್ಕಾಗಿ ರೈತರು ಮೈಸೂರಿಗೆ ಹೋಗುವುದನ್ನು ತಡೆಗಟ್ಟಬಹುದು.
**
ಗುಂಡ್ಲುಪೇಟೆಯಲ್ಲಿ ನೀರಿಗೆ ತತ್ವಾರ

ಬೇಸಿಗೆ ಹೊಸ್ತಿಲಲ್ಲಿ ಗುಂಡ್ಲುಪೇಟೆಯಲ್ಲಿ ನೀರಿಗೆ ತತ್ವಾರ ಉಂಟಾಗಿದೆ. ಪಟ್ಟಣದ  ಕೆಲವು ವಾರ್ಡ್‌ಗಳಲ್ಲಿ  15 ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದೆ. ಬಸಾಪುರ, ಕೋಡಹಳ್ಳಿ, ಬನ್ನಿತಾಳಪುರ, ವಡ್ಡನ ಹೊಸಹಳ್ಳಿ, ಹಂಗಳ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿಗಾಗಿ ಪರದಾಡುವಂತಾಗಿದೆ.
**
ಬಿಗಡಾಯಿಸುವಂತಹ ಸ್ಥಿತಿ ಇಲ್ಲ
‘ಸದ್ಯ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುವ ಹಂತಕ್ಕೆ ತಲುಪಿಲ್ಲ. ತಲುಪುವುದಕ್ಕೂ ಬಿಡುವುದಿಲ್ಲ. ಬಹುಗ್ರಾಮಕುಡಿಯುವ ನೀರು ಯೋಜನೆ ಹಾಗೂ ಸುಮಾರು 19 ಕೆರೆಗಳಿಗೆ ನೀರು ತುಂಬಿಸಿದ್ದರಿಂದ ಜತೆಗೆ ಕಳೆದ ವರ್ಷ ಒಳ್ಳೆಯ ಮಳೆ ಬಂದಿದ್ದರಿಂದ ಸಮಸ್ಯೆ ನಿವಾರಣೆಯಾಗಿದೆ. ಕೊಳ್ಳೇಗಾಲಕ್ಕೆ ₹ 450 ಕೋಟಿ ಮೊತ್ತದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಆಗಿದೆ. ಹೀಗಾಗಿ, ನೀರಿನ ಸಮಸ್ಯೆ ಕಳೆದ ವರ್ಷದಷ್ಟು ಈ ಬಾರಿ ಇಲ್ಲ’ ಎಂದು ಜಿಲ್ಲಾ  ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
*
ಜಿಲ್ಲೆಯ ಕೆರೆಗಳ ಸ್ಥಿತಿಗತಿ
ಚಾಮರಾಜನಗರ 64 ಕೆರೆಗಳು 7,081.45 ಹೆಕ್ಟೇರ್
ಗುಂಡ್ಲುಪೇಟೆ  73 ಕೆರೆಗಳು 5,037.43 ಹೆಕ್ಟೇರ್
ಯಳಂದೂರು 30 ಕೆರೆಗಳು 2,223.55  ಹೆಕ್ಟೇರ್
ಕೊಳ್ಳೇಗಾಲ 28 5,337 ಹೆಕ್ಟೇರ್

ಜಿಲ್ಲೆಯಲ್ಲಿ ಒಟ್ಟು 19,679.43 ಹೆಕ್ಟೇರ್ ಪ್ರದೇಶದಷ್ಟು ಕೆರೆಗಳಿವೆ. ಇವುಗಳನ್ನು ಆಭಿವೃದ್ಧಿಪಡಿಸಿ  ನೀರು ತುಂಬಿಸಿದರೆ ಕನಿಷ್ಠ ಎಂದರೂ 3,429.28 ಮಿಲಿಯನ್ ಕ್ಯೂಬಿಕ್‌ ಅಡಿಯಷ್ಟು ನೀರನ್ನು ತುಂಬಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT