ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಕ್ಕಾಗಿ ಅಂಧ ತಾಯಿ ಅಲೆದಾಟ

ಹಾಸ್ಟೆಲ್‌ ವಾರ್ಡನ್ ಹಲ್ಲೆಯಿಂದ 4ನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಪ್ರಕರಣ
Last Updated 27 ಡಿಸೆಂಬರ್ 2019, 1:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಾಸ್ಟೆಲ್ ವಾರ್ಡನ್ ಹಲ್ಲೆಯಿಂದ ಎರಡು ತಿಂಗಳ ಹಿಂದೆ ಮೃತಪಟ್ಟ ಮಗನ ಸಾವಿನ ನ್ಯಾಯಕ್ಕಾಗಿ ಹುಬ್ಬಳ್ಳಿಯ ಅಂಧ ತಾಯಿ ಹಾಗೂ ಅವರ ಪತಿ ಅಲೆದಾಡುತ್ತಿದ್ದಾರೆ.

ಹುಟ್ಟು ಅಂಧರಾಗಿರುವ ಸುಜಾತ ಹಿರೇಮಠ ಹಾಗೂ ಪೂಜೆ ಮಾಡಿ ಹೊಟ್ಟೆ ಹೊರೆಯುವ ಪತಿ ಮೃತ್ಯುಂಜಯ ಹಿರೇಮಠ, ನ್ಯಾಯಕ್ಕಾಗಿ ಬೆಂಗಳೂರಿನವರೆಗೆ ಹೋಗಿ ಬಂದಿದ್ದಾರೆ. 4ನೇ ತರಗತಿ ಓದುತ್ತಿದ್ದ ತಮ್ಮ ಕಿರಿಯ ಮಗ ವಿಜಯ ಮೃತ್ಯುಂಜಯ ಹಿರೇಮಠನನ್ನು ದಂಪತಿ, ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿರುವ ಸೇವಾ ಭಾರತಿ ಟ್ರಸ್ಟ್‌ನ ದಯಾನಂದ ಛಾತ್ರಾಲಯಕ್ಕೆ ಸೇರಿಸಿದ್ದರು.

‘ಮೂರು ತಿಂಗಳ ಹಿಂದೆಯಷ್ಟೇ ಹಾಸ್ಟೆಲ್‌ಗೆ ಸೇರಿದ್ದ ಮಗ ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡ ಎಂಬ ಕಾರಣಕ್ಕಾಗಿ, ವಾರ್ಡನ್ ಶ್ರವಣಕುಮಾರ ಕಾಲಿನಿಂದ ಹೊಟ್ಟೆಗೆ ಒದ್ದು ಹಲ್ಲೆ ನಡೆಸಿದ್ದ. ಹೊಟ್ಟೆಯಲ್ಲಿ ಊತವಾಗಿ ಹಾಸಿಗೆ ಹಿಡಿದಿದ್ದ ಮಗನನ್ನು ಕಿಮ್ಸ್‌ ಆಸ್ಪತ್ರೆಯಲ್ಲಿ 40 ದಿನ ದಾಖಲಿಸಿದ್ದೆವು’ ಎಂದು ಬಾಲಕನ ತಾಯಿ ಸುಜಾತಾ ಹಿರೇಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಹಣವಿಲ್ಲದೆ ಬೆಂಗಳೂರಲ್ಲೇ ಅಂತ್ಯ ಸಂಸ್ಕಾರ: ‘ಕಿಮ್ಸ್‌ನಲ್ಲಿ ಚೇತರಿಕೆ ಕಾಣದಿದ್ದರಿಂದ ವೈದ್ಯರ ಸಲಹೆ ಮೇರೆಗೆ, ದಾನಿಯೊಬ್ಬರ ನೆರವಿನಿಂದ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ, ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲೂ ಚಿಕಿತ್ಸೆಗೆ ಸ್ಪಂದಿಸದೆ ಅ.27ರಂದು ಮೃತಪಟ್ಟ. ಊರಿಗೆ ಮೃತದೇಹ ತರಲು ಹಣವಿಲ್ಲದಿದ್ದರಿಂದ, ಮರಣೋತ್ತರ ಪರೀಕ್ಷೆ ಮುಗಿದ ಬಳಿಕ, ಅಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿದೆವು’ ಎಂದು ಕಣ್ಣೀರಿಟ್ಟರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ ಪೊಲೀಸರು, ಕಿಮ್ಸ್ ಆಸ್ಪತ್ರೆಯಲ್ಲಿದ್ದಾಗ ಮಗ, ಪತ್ನಿ ಹಾಗೂ ನನ್ನ ಹೇಳಿಕೆ ಪಡೆದಿದ್ದರು. ಜತೆಗೆ, ಖಾಲಿ ಹಾಳೆಗೆ ಸಹಿ ಪಡೆದುಕೊಂಡು ಹೋದರು. ಆದರೆ, ಇಲ್ಲಿಯವರೆಗೆ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಮಗನ ಕೊಂದವನ ಬಂಧನವೂ ಆಗಿಲ್ಲ’ ಎಂದು ಬಾಲಕನ ತಂದೆ ಮೃತ್ಯುಂಜಯ ಹಿರೇಮಠ ದೂರಿದರು.

‘ಮಡದಿಯೊಂದಿಗೆ ಮುಖ್ಯಮಂತ್ರಿಯವರ ಜನತಾ ದರ್ಶನದಲ್ಲಿ, ನ್ಯಾಯ ಕೇಳಿದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಅರ್ಧದಲ್ಲೇ ಕೈ ಬಿಟ್ಟರು: ‘ನನ್ನ ಮಗನ ಸಾವಿಗೆ ನ್ಯಾಯ ಕೊಡಿಸುವುದಾಗಿ, ಕೆಲವರು ನಮ್ಮೊಂದಿಗೆ ಕೆಲ ದಿನ ಓಡಾಡಿದರು. ನಮ್ಮಿಂದ ಪತ್ರಿಕಾಗೋಷ್ಠಿ ಕೂಡ ಮಾಡಿಸಿದರು. ಆದರೆ, ಅರ್ಧದಲ್ಲೇ ಕೈಬಿಟ್ಟು ಹೋದರು. ಹಾಗಾಗಿ, ಯಾರನ್ನೂ ನಂಬದೆ ನಾನು ಮತ್ತು ಪತ್ನಿ ಇಬ್ಬರೇ ಓಡಾಡುತ್ತಿದ್ದೇವೆ. ಸದ್ಯದಲ್ಲೇ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೂರುತ್ತೇವೆ’ ಎಂದು ಮೃತ್ಯುಂಜಯ ಹಿರೇಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT