ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ.ಶಿವಕುಮಾರ್‌ ಬಂಧನ ಪ್ರಕರಣ: ‘ಒಕ್ಕಲಿಗರ ಭಾವನೆ ಬಡಿದೆಬ್ಬಿಸುವ ಯತ್ನ’

ಬಿಜೆಪಿಯಲ್ಲಿರುವ ಒಕ್ಕಲಿಗ ನಾಯಕರ ದೂರು
Last Updated 7 ಸೆಪ್ಟೆಂಬರ್ 2019, 1:06 IST
ಅಕ್ಷರ ಗಾತ್ರ

ಬೆಂಗಳೂರು: ಜಾರಿ ನಿರ್ದೇಶನಾಲಯ ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಅವರನ್ನು ಕಸ್ಟಡಿಗೆ ತೆಗೆದುಕೊಂಡಿರುವ ಪ್ರಕರಣವನ್ನು ಮುಂದಿಟ್ಟುಕೊಂಡು ಒಕ್ಕಲಿಗರ ಭಾವೋದ್ವೇಗವನ್ನು ಬಡಿದೆಬ್ಬಿಸಲು ಕಾಂಗ್ರೆಸ್‌ನ ಕೆಲವರು ಪ್ರಯತ್ನ ನಡೆಸುತ್ತಿ
ದ್ದಾರೆ ಎಂದು ಬಿಜೆಪಿಯ ಕೆಲ ಒಕ್ಕಲಿಗ ನಾಯಕರು ದೂರಿದ್ದಾರೆ.

ಒಕ್ಕಲಿಗ ಸಮುದಾಯದಲ್ಲಿ ಶಿವಕುಮಾರ್‌ ಪರ ಅಭಿಪ್ರಾಯ ರೂಪಿಸುವ ಮೂಲಕ ಅನುಕಂಪ ಸೃಷ್ಟಿಸಲು ಹೊರಟಿದ್ದಾರೆ. ಆದರೆ, ಒಕ್ಕಲಿಗರು ಅವರು ಬೀಸುವ ಜಾತಿಯ ಬಲೆಗೆ ಸಿಕ್ಕಿಕೊಳ್ಳುವುದಿಲ್ಲ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದರು.

‘ನಮ್ಮ ಸಮುದಾಯದ ನಾಯಕನನ್ನು ಬಲಿಪಶು ಮಾಡಲು ಕುತಂತ್ರ ನಡೆಸಲಾಗಿದೆ ಎಂಬ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ನಡೆದಿದೆ. ಇದನ್ನು ಜಾತಿ ಮತ್ತು ಸಮುದಾಯದ ನೆಲೆಯಲ್ಲಿ ಬಿಂಬಿಸಬೇಕು ಎಂಬ ಪ್ರಯತ್ನ ಒಕ್ಕಲಿಗರ ಪ್ರಾಬಲ್ಯವಿರುವ ಕೆಲವು ಸಂಘಟನೆಗಳ ಮೂಲಕ ನಡೆಸಲಾಗುತ್ತಿದೆ’ ಎನ್ನುವ ಆರೋಪ ಬಿಜೆಪಿ ನಾಯಕರದು.

‘ಜಾರಿ ನಿರ್ದೇಶನಾಲಯ ಶಿವಕುಮಾರ್‌ ಅವರನ್ನು ವಶಕ್ಕೆ ತೆಗೆದುಕೊಂಡಿರುವುದು ಆರ್ಥಿಕ ಅಪರಾಧಗಳಿಗಾಗಿಯೇ ಹೊರತು, ರಾಜಕೀಯ ಕಾರಣಗಳಿಗಾಗಿ ಅಲ್ಲ. ಅಕ್ರಮ ಹಣ ಸಂಪಾದನೆ, ಹವಾಲಾ ಕುರಿತಾಗಿ ತನಿಖಾ ಸಂಸ್ಥೆಗಳು ಕೇಳುತ್ತಿರುವ ಪ್ರಶ್ನೆ
ಗಳಿಗೆ ಉತ್ತರ ನೀಡಲು ಹಿಂದೇಟು ಏಕೆ. ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾದ ವಿಷಯಕ್ಕೆ ಬಿಜೆಪಿ ನಾಯಕರನ್ನು ಬೊಟ್ಟು ಮಾಡುವುದರಲ್ಲೇ ರಾಜಕೀಯ ಅಡಗಿದೆ’ ಎನ್ನುತ್ತಾರೆ ಬಿಜೆಪಿ ನಾಯಕರು.

‘ಈ ವಿದ್ಯಮಾನದ ಕಾರಣ ಒಕ್ಕಲಿಗರು ಆಕ್ರೋಶಿತರಾಗಿದ್ದಾರೆ. ಬಿಜೆಪಿಗೆ ಇದರಿಂದ ಮುಂಬರುವ ದಿನಗಳಲ್ಲಿ ಬಿಜೆಪಿಗೆ ಭಾರಿ ಹಾನಿ ಆಗುತ್ತದೆ ಎಂಬ ವದಂತಿಗಳನ್ನು ಉದ್ದೇಶಪೂರ್ವಕವಾಗಿ ಹರಿಬಿಡಲಾಗುತ್ತದೆ. ಒಕ್ಕಲಿಗರಲ್ಲಿ ಶಿವಕುಮಾರ್‌ ಅವರನ್ನು ಇಷ್ಟಪಡುವವರೂ ಸಾಕಷ್ಟು ಜನ ಇರಬಹುದು. ಆದರೆ, ಅವರ ನಡವಳಿಕೆ, ಆರ್ಥಿಕ ಅಪರಾಧಗಳನ್ನು ಒಪ್ಪದಿರುವವರೂ ಇದ್ದಾರೆ. ಇವರೆಲ್ಲ ಜಾತಿಯ ಕಾರಣಕ್ಕೆ ಬೆಂಬಲಿಸುತ್ತಾರೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಶಾಸಕರೊಬ್ಬರು ತಿಳಿಸಿದರು.

‘ಒಕ್ಕಲಿಗರಲ್ಲೇ ಶೇ 99 ರಷ್ಟು ಜನಈ ಪ್ರಕರಣವನ್ನು ಜಾತಿ ಚೌಕಟ್ಟಿನಿಂದ ಹೊರಗಿಟ್ಟು ನೋಡುತ್ತಾರೆ. ಕೇವಲ ಆರ್ಥಿಕ ಅಪರಾಧವಾಗಿ ಪರಿಗಣಿಸುತ್ತಾರೆ’ ಎಂದು ಬಿಜೆಪಿಯ ಮತ್ತೊಬ್ಬ ನಾಯಕ ತಿಳಿಸಿದರು.

ಸೆ.9ರಂದು ಪ್ರತಿಭಟನೆ (ಮೈಸೂರು): ಶಾಸಕ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ, ಒಕ್ಕಲಿಗ ಸಂಘಟನೆಗಳ ವತಿಯಿಂದ ಮೈಸೂರಿನಲ್ಲಿ ಸೆ.9ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಜಿಲ್ಲಾ ಒಕ್ಕಲಿಗರ ಸಂಘ ತೀರ್ಮಾನಿಸಿದೆ.

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಘಟನೆಯ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಪ್ರಮುಖರು ಈ ನಿರ್ಣಯ ಕೈಗೊಂಡರು.

‘ಒಕ್ಕಲಿಗ ಸಮುದಾಯಕ್ಕೆ ಅಸಮಾಧಾನವಿಲ್ಲ’
‘ಶಿವಕುಮಾರ್‌ ಅವರದು ಆರ್ಥಿಕ ಅಪರಾಧ. ಅದಕ್ಕಾಗಿ ಇ.ಡಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ. ಇದರಿಂದ ಒಕ್ಕಲಿಗ ಸಮುದಾಯ ಸಿಟ್ಟಾಗಿದೆ ಎಂಬುದರಲ್ಲಿ ಹುರುಳಿಲ್ಲ’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಭ್ರಷ್ಟರನ್ನು ಸಹಿಸುವುದಿಲ್ಲ: ಆರಗ ಜ್ಞಾನೇಂದ್ರ
ತೀರ್ಥಹಳ್ಳಿ
: ಒಕ್ಕಲಿಗ ಸಮುದಾಯ ಭ್ರಷ್ಟರನ್ನು ಎಂದೂ ಸಹಿಸುವುದಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಒಕ್ಕಲಿಗರ ಹಿತರಕ್ಷಣಾ ವೇದಿಕೆಯ ಹೆಸರಿನಲ್ಲಿ ಹಿರಿಯರು ಕಟ್ಟಿದ ಸಂಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT