7
ಕೆಂಪೇಗೌಡ ಜಯಂತಿಯಲ್ಲಿ ಒಕ್ಕಲಿಗ ಮಠಾಧೀಶರ ಎಚ್ಚರಿಕೆ

‘ಎಚ್‌ಡಿಕೆ ಸರ್ಕಾರ ಉರುಳಿಸಲು ಯತ್ನಿಸಿದರೆ ಸುಮ್ಮನಿರಲ್ಲ’

Published:
Updated:
ನಾಡಪ್ರಭು ಕೇಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ನಿರ್ಮಾಲಾನಂದನಾಥ ಸ್ವಾಮೀಜಿ ಸನ್ಮಾನಿಸಿದರು. ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹಾಗೂ ನಂಜಾವಧೂತ ಸ್ವಾಮೀಜಿ ಇದ್ದಾರೆ-ಪ್ರಜಾವಾಣಿ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಒಕ್ಕಲಿಗ ಸಮಾಜದ ಮಠಾಧೀಶರು ಎಚ್ಚರಿಕೆ ನೀಡಿದ್ದಾರೆ.

ನಗರದ ಅರಮನೆ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೂ ಸ್ಪಷ್ಟ ಸಂದೇಶ ನೀಡಿದರು.

ಒಕ್ಕಲಿಗ ಸಮಾಜದ ಮೂವರು ಪ್ರಮುಖ ಸ್ವಾಮೀಜಿಗಳಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ರಾಜಕೀಯವನ್ನು ಪ್ರಸ್ತಾಪಿಸಲಿಲ್ಲ. ಆದರೆ, ಸ್ಪಟಿಕಪುರಿ ಮಹಾಸಂಸ್ಥಾನದ ಮಠದ ನಂಜಾವಧೂತ ಸ್ವಾಮೀಜಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಚ್ಚರಿಕೆ ನೀಡಿದರು. ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಕುಮಾರಸ್ವಾಮೀ ಮುಖ್ಯಮಂತ್ರಿಯಾಗಿ ಐದು ವರ್ಷ ಅವಧಿ ಪೂರ್ಣಗೊಳಿಸಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಸೂಚಿಸಿದರು.

ಆರಂಭದಲ್ಲಿ ಕುಮಾರಸ್ವಾಮಿಯವರ ಗುಣಗಾನ ಮಾಡಿದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ‘ಕರ್ನಾಟಕ ಕಂಡ ಮುಖ್ಯಮಂತ್ರಿಗಳಲ್ಲಿ ಅತ್ಯುತ್ತಮ ಆಡಳಿತ ನೀಡಿದವರು  ಎಚ್‌.ಡಿ.ಕುಮಾರಸ್ವಾಮಿ. ಮತ್ತೊಮ್ಮೆ ಮುಖ್ಯಮಂತ್ರಿ ಆಗಿದ್ದಾರೆ. ರಾಜ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಶಕ್ತಿ ಅವರಿಗಿದೆ. ಅವರು ಐದು ವರ್ಷ ಅವಧಿಯನ್ನು ಪೂರ್ಣ ಮಾಡಬೇಕು. ಅದಕ್ಕಾಗಿ ಇಲ್ಲಿ ಸೇರಿರುವ ಎಲ್ಲರೂ ಸಂಕಲ್ಪ ಮಾಡಬೇಕು’ ಎಂದರು.

ಹೆಚ್ಚು–ಕಮ್ಮಿ ಆದ್ರೆ ಸುಮ್ಮನಿರಲ್ಲ:  ನಂಜಾವಧೂತ ಸ್ವಾಮೀಜಿ ಮಾತನಾಡಿ, ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಸ್ವಲ್ಪ ಹೆಚ್ಚು– ಕಮ್ಮಿ ಆದರೂ ನಾವು ಸುಮ್ಮನಿರೋದಿಲ್ಲ. ಅಂತಹವರನ್ನು ನಮ್ಮ ಸಮಾಜ (ಒಕ್ಕಲಿಗ) ಕ್ಷಮಿಸು
ವುದಿಲ್ಲ’ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

‘ಕೇಂದ್ರ ಸಚಿವ ಸದಾನಂದಗೌಡರು ಸಭೆಗೆ ಬಂದಿದ್ದರೆ, ಅವರ ಮೂಲಕ ದೆಹಲಿಗೆ ಒಂದು ಸಂದೇಶ ಕಳುಹಿಸಬೇಕು ಎಂದುಕೊಂಡಿದ್ದೆ. ಪರವಾಗಿಲ್ಲ, ಬಹಿರಂಗವಾಗಿ ಹೇಳುತ್ತೇನೆ. ಈ ಸರ್ಕಾರವನ್ನು ಪತನ ಮಾಡುವ ಪ್ರಯತ್ನ ನಡೆಸಿದರೆ ಸಹಿಸುವುದಿಲ್ಲ. ಈ ಎಚ್ಚರಿಕೆಯನ್ನು ಪ್ರಧಾನಿ ಮೋದಿಯವರಿಗೂ ನೀಡುತ್ತಿದ್ದೇನೆ. ಅಂತಹ ಕೆಲಸಕ್ಕೆ ಕೈ ಹಾಕಬಾರದು’ ಎಂದರು.

‘ಮೈತ್ರಿ ಸರ್ಕಾರ ರಚನೆ ವೇಳೆ ಡಿ.ಕೆ.ಶಿವಕುಮಾರ್‌ ಓಡಾಡಿದರು ಎಂಬ ಕಾರಣಕ್ಕೆ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ಒಪ್ಪುವುದಿಲ್ಲ. ನಾನು ಈಗ ನೀಡಿರುವ ಎಚ್ಚರಿಕೆ ಬಿಜೆಪಿ ಮಾತ್ರವಲ್ಲ, ಎಲ್ಲ ಪಕ್ಷಗಳಿಗೂ ಅನ್ವಯಿಸುತ್ತದೆ. ಕುಮಾರಸ್ವಾಮಿ ಅವರ ಆರೋಗ್ಯ ಚೆನ್ನಾಗಿರಲಿ. ಎಷ್ಟು ದಿನ, ಎಷ್ಟು ತಿಂಗಳು ಸರ್ಕಾರ ನಡೆಸುತ್ತಾರೆ ಎಂಬುದು ಮುಖ್ಯ ಅಲ್ಲ. ಎಷ್ಟು ಉತ್ತಮ ಆಡಳಿತ ನೀಡುತ್ತಾರೆ ಎನ್ನುವುದು ಮುಖ್ಯ’ ಎಂದು ಹೇಳಿದರು

ಪಠ್ಯದಲ್ಲಿ ಕೆಂಪೇಗೌಡ:  ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಪಠ್ಯದಲ್ಲಿ ಕೆಂಪೇಗೌಡರ ವಿಷಯವನ್ನು ಅಳವಡಿಸಬೇಕು. ಇವರು ಮಕ್ಕಳಿಗೆ ರೋಲ್‌ ಮಾಡೆಲ್‌ ಆಗಬೇಕು ಎಂದರು.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, ಕೆಂಪೇಗೌಡರು ಯಾವುದೇ ಜಾತಿ, ಸಮುದಾಯಕ್ಕೆ ಸೀಮಿತ ಅಲ್ಲ. ಬೆಂಗಳೂರಿನ ಒಂದು ವಿಶ್ವವಿದ್ಯಾಲಯಕ್ಕೆ ಅವರ ಹೆಸರು ಇಡಬೇಕು ಎಂದು ಸಲಹೆ ನೀಡಿದರು.

ಅಖಂಡ ಕರ್ನಾಟಕದ ಅಭಿವೃದ್ಧಿ
‘ನಮ್ಮ ಸರ್ಕಾರ ರಚನೆ ಆಗಿ ಒಂದು ತಿಂಗಳು ಕಳೆದಿದೆ. ಅಷ್ಟರಲ್ಲೇ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿಲ್ಲ ಎಂಬ ಟೀಕೆ–ಟಿಪ್ಪಣಿ ಆರಂಭವಾಗಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ರಾಜ್ಯದ ಯಾವುದೋ ಒಂದು ಭಾಗವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸ ಮಾಡುವುದಿಲ್ಲ. ಸಮಗ್ರ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತೇವೆ. ನಮ್ಮದು ಅಖಂಡ ಕರ್ನಾಟಕದ ಅಭಿವೃದ್ಧಿಗೆ ಸ್ಥಾಪನೆಯಾದ ಸರ್ಕಾರ’ ಎಂದು ಹೇಳಿದರು.

ನಾಡಿನ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಕೆಂಪೇಗೌಡರ ಹೆಸರಿನಲ್ಲಿ ಕೌಶಲ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಉದ್ದೇಶಿಸಿರುವುದಾಗಿಯೂ ಅವರು ತಿಳಿಸಿದರು. 

‘ಕೆಂಪೇಗೌಡ ಪ್ರಾಧಿಕಾರ ರಚನೆ’
ಚಿಕ್ಕಮಗಳೂರು/ಬೆಂಗಳೂರು: ನಾಡಪ್ರಭು ಕೆಂಪೇಗೌಡ ಪ್ರಾಧಿಕಾರ ರಚನೆ ಮಾಡಿ ಮಂಗಳವಾರವೇ ಆದೇಶ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಾಧಿಕಾರ ರಚಿಸಲು ಹಿಂದಿನ ಸರ್ಕಾರ ನಿರ್ಣಯ ಕೈಗೊಂಡಿತ್ತು. ಈಗ ರಚನೆ ಮಾಡಲಾಗಿದೆ. ಕೆಂಪೇಗೌಡ ಜಯಂತ್ಯುತ್ಸವ ಆಚರಣೆಗೆ 2017ರಲ್ಲಿ ಕ್ರಮ ವಹಿಸಲಾಗಿತ್ತು’ ಎಂದರು.

‘ಬೆಂಗಳೂರಿನ ಅಭಿವೃದ್ಧಿಗಾಗಿ ಕೆಂಪೇಗೌಡ ಅವರು ಮಾಡಿದ ಕೆಲಸಗಳನ್ನು ಸ್ಮರಿಸುವುದು ಆದ್ಯ ಕರ್ತವ್ಯ. ಕೆಂಪೇಗೌಡರಿಗೆ ಸಂಬಂಧಿಸಿದ ಸ್ಥಳಗಳು ಮತ್ತು ಸ್ಮಾರಕಗಳನ್ನು ಅಂತರರಾಷ್ಟ್ರೀಯ ಮಟ್ಟದ ಪರಂಪರೆ, ಸಾಂಸ್ಕೃತಿಕ ಮತ್ತು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಅವರ ಇತಿಹಾಸ ಪರಿಚಯ, ಪರಂಪರೆ ರಕ್ಷಣೆಯಂತಹ ಕಾರ್ಯಕ್ರಮಗಳನ್ನು ಪ್ರಾಧಿಕಾರ ನಿರ್ವಹಿಸಲಿದೆ’ ಎಂದರು.

‘ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ಈ ಪ್ರಾಧಿಕಾರಕ್ಕೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಕಂದಾಯ ಸಚಿವರು ಮತ್ತು ಕನ್ನಡ-ಸಂಸ್ಕೃತಿ ಸಚಿವರು, ಬೆಂಗಳೂರು ಗ್ರಾಮಾಂತರ ಸಂಸದರು, ಬೆಂಗಳೂರು ನಗರದ ರಾಜ್ಯಸಭಾ ಸದಸ್ಯರು, ಯಲಹಂಕ ಮತ್ತು ಮಾಗಡಿ ಶಾಸಕರು, ಮೇಯರ್, ಕಂದಾಯ, ಹಣಕಾಸು ಇಲಾಖೆ ಮತ್ತು ಕನ್ನಡ-ಸಂಸ್ಕೃತಿ ಇಲಾಖೆಗಳ ಹೆಚ್ಚುವರಿ ಮುಖ್ಯ ಮುಖ್ಯ ಕಾರ್ಯದರ್ಶಿಗಳು ಅಥವಾ ಪ್ರಧಾನ ಕಾರ್ಯದರ್ಶಿಗಳು ಅಥವಾ ಕಾರ್ಯದರ್ಶಿಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸದಸ್ಯರಾಗಿರುತ್ತಾರೆ. ಕೆಂಪೇಗೌಡರ ಇತಿಹಾಸ ಮತ್ತು ಪರಂಪರೆಯ ಬಗ್ಗೆ ವಿದ್ವತ್ತನ್ನುಳ್ಳ ಆರು ಪರಿಣತರನ್ನು ಪ್ರಾಧಿಕಾರಕ್ಕೆ ಅಧಿಕಾರೇತರ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ’ ಎಂದು ಅವರು ಹೇಳಿದರು. 

**

ಕುಮಾರಸ್ವಾಮಿ ಮತ್ತು ಶಿವಕುಮಾರ್‌ ಮಹಾನ್‌ ಶಕ್ತಿಗಳು, ಇವರಿಂದ ದೇಶದಲ್ಲಿ ಕ್ಷಿಪ್ರ ಕ್ರಾಂತಿ ಆಗುತ್ತದೆ
- ನಂಜಾವಧೂತ ಸ್ವಾಮೀಜಿ

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !