ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಾಸ’ಕ್ಕೆ ಸಿದ್ಧರಾಗದ ‘ದೋಸ್ತಿ’: ಪಟ್ಟು ಸಡಿಲಿಸದ ಅತೃಪ್ತರು

ಸರ್ಕಾರ ಉಳಿಸಿಕೊಳ್ಳಲು ಕಾರ್ಯತಂತ್ರ ಚುರುಕು
Last Updated 21 ಜುಲೈ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಏನೇ ಆದರೂ ಸೋಮವಾರವೇ ವಿಶ್ವಾಸ ಮತ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಮಾಡಿರುವ ‘ಪ್ರತಿಜ್ಞೆ’ ಮತ್ತು ಬಿಜೆಪಿಯ ಒತ್ತಡ ತಂತ್ರಗಳನ್ನು ವಿಧಾನಸಭೆಯಲ್ಲಿ ನಿರರ್ಥಕಗೊಳಿಸಲು ‘ದೋಸ್ತಿ’ ಪಕ್ಷಗಳು ಕಾರ್ಯತಂತ್ರವನ್ನು ಹೆಣೆದಿವೆ.

ಇದರಿಂದ ಸೋಮವಾರವೂ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುವ ಪ್ರಕ್ರಿಯೆ ನಡೆಯುವ ಸಾಧ್ಯತೆ ಇಲ್ಲ. ಶತಾಯಗತಾಯ ಎರಡು–ಮೂರು ದಿನಗಳ ಕಾಲ ಚರ್ಚೆ ಮುಂದುವರಿಯುವಂತೆ ನೋಡಿಕೊಳ್ಳಲು ‘ದೋಸ್ತಿ’ ನಾಯಕರು ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಸಲ್ಲಿಸಿರುವ ಅರ್ಜಿ ಸೋಮವಾರ ವಿಚಾರಣೆಗೆ ಬರುವುದರಿಂದ ವಿಶ್ವಾಸಮತದಿಂದ ತಪ್ಪಿಸಿಕೊಳ್ಳಲು ಆಸರೆಯಾಗುವ ಅಂಶಗಳೇನಾದರೂ ಆದೇಶದಲ್ಲಿ ಸಿಗಬಹುದು ಎಂಬ ನಿರೀಕ್ಷೆ ಮೈತ್ರಿ ಪಕ್ಷಗಳದ್ದಾಗಿದೆ. ಹಾಗೊಂದು ವೇಳೆ ಸಿಕ್ಕರೆ, ಅದನ್ನು ಬಳಸಿಕೊಂಡು ವಿಶ್ವಾಸಮತದಿಂದ ತಪ್ಪಿಸಿಕೊಳ್ಳುವ ದಾರಿಗಳನ್ನು ಹುಡುಕುವುದು ಜೆಡಿಎಸ್‌ನ ತಂತ್ರದ ಭಾಗವಾಗಿದೆ.

ಆದರೆ, ರಾಜೀನಾಮೆ ನೀಡಿ ಮುಂಬೈನಲ್ಲಿ ಬೀಡುಬಿಟ್ಟಿರುವ ಶಾಸಕರು ತಾವು ಯಾವುದೇ ಕಾರಣಕ್ಕೂ ಹಿಂದಕ್ಕೆ ಬರುವುದಿಲ್ಲ. ಸರ್ಕಾರದ ಪತನದ ಬಳಿಕವೇ ವಾಸ್ತವ ಸಂಗತಿಯನ್ನು ಜನರ ಮುಂದೆ ಬಹಿರಂಗಪಡಿಸುವುದಾಗಿ ವಿಡಿಯೊ ಸಂದೇಶವೊಂದನ್ನು ಕಳಿಸಿದ್ದಾರೆ.

‘ಸುಪ್ರೀಂ ಕೋರ್ಟ್‌ ಯಾವ ರೀತಿ ಆದೇಶ ನೀಡುತ್ತದೆ ಎಂಬುದರ ಆಧಾರದ ಮೇಲೆ ಸೋಮವಾರ ಬೆಳವಣಿಗೆಗಳು ನಡೆಯುತ್ತವೆ. ಸಭಾಧ್ಯಕ್ಷರ ನಡೆಯನ್ನು ಆಧರಿಸಿಯೂ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರದ ಪತನಕ್ಕೆ ಅವಕಾಶ ನೀಡುವ ಬೆಳವಣಿಗೆ ನಡೆಯುವುದಿಲ್ಲ’ ಎಂದು ಜೆಡಿಎಸ್‌ ಮುಖಂಡರೊಬ್ಬರು ತಿಳಿಸಿದರು.

‘ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಪತನ ಆಗದಂತೆ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಲು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ತೀರ್ಮಾನಿಸಿದ್ದರು. ಕಾಂಗ್ರೆಸ್‌ ಪಕ್ಷವೇ ಸರ್ಕಾರದ ನೇತೃತ್ವವನ್ನು ವಹಿಸುವುದಿದ್ದರೆ ಅದಕ್ಕೆ ಬೆಂಬಲ ನೀಡಲು ಸಿದ್ಧ ಎಂಬ ಸಂದೇಶವನ್ನೂ ಮತ್ತೊಮ್ಮೆ ಕಳುಹಿಸಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನಿಂದ ಯಾರೇ ಮುಖ್ಯಮಂತ್ರಿ ಆಗುವುದಿದ್ದರೂ ಅಭ್ಯಂತರ ಇಲ್ಲವೆಂದು ಗೌಡರು ತಿಳಿಸಿದರು’ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ದೇವೇಗೌಡರು ಈ ಸಂದೇಶ ನೀಡಿದ ಬಳಿಕ ಚುರುಕಾದ ಡಿ.ಕೆ.ಶಿವಕುಮಾರ್‌ ಅವರು ಜಿ.ಪರಮೇಶ್ವರ ಜತೆ ಚರ್ಚೆ ನಡೆಸಿದರು. ಸಚಿವ ಜಮೀರ್‌ ಅಹಮದ್‌, ಮುಖಂಡ ನಜೀರ್‌ ಅಹಮದ್‌ ಅವರನ್ನು ಕರೆಸಿಕೊಂಡು ಸಿದ್ದರಾಮಯ್ಯ ಅವರೂ ಅಜ್ಞಾತ ಸ್ಥಳದಲ್ಲಿ ಮಾತುಕತೆ ನಡೆಸಿದರು. ದೇವೇಗೌಡರ ಕಳಿಸಿರುವ ಹೊಸ ಪ್ರಸ್ತಾವದ ಬಗ್ಗೆ ಕಾಂಗ್ರೆಸ್‌ನಲ್ಲಿ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

‘ವಿಶ್ವಾಸ ಮತದ ಪ್ರಹಸನವನ್ನು ತುಂಬ ದಿನಗಳ ಕಾಲ ಎಳೆಯದೇ, ಪೂರ್ಣ ವಿರಾಮ ಹಾಕಲು ಪಕ್ಷದ ಬಹುತೇಕ ನಾಯಕರು ತೀರ್ಮಾನಕ್ಕೆ ಬಂದಿದ್ದರೂ, ದೇವೇಗೌಡರು ತಮ್ಮ ಪಟ್ಟು ಬಿಡುತ್ತಿಲ್ಲ. ಹೀಗಾಗಿ ಮೈತ್ರಿ ಧರ್ಮ ಪಾಲಿಸಲು ಗೌಡರ ಒತ್ತಡಕ್ಕೆ ನಮ್ಮ ನಾಯಕರೂ ಕೈಜೋಡಿಸಲೇಬೇಕಾಗಿದೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಶುಕ್ರವಾರ ಕಲಾಪದ ವೇಳೆ ವಿಶ್ವಾಸಮತ ಪ್ರಕ್ರಿಯೆ ಸೋಮವಾರವೇ ಪೂರ್ಣಗೊಳಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಮಾತುಕೊಟ್ಟಿದ್ದಾರೆ. ಆ ಪ್ರಕಾರವೇ ನಡೆದುಕೊಳ್ಳಬೇಕು ಎಂದು ಬಿಜೆಪಿ ಪಟ್ಟು ಹಿಡಿಯಲಿದೆ.

ಇಬ್ಬರು ಪಕ್ಷೇತರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸೋಮವಾರವೇ ಮತದಾನಕ್ಕೆ ಸೂಚನೆ ನೀಡುವಂತೆ ಕೋರಿದ್ದಾರೆ. ಈ ಅರ್ಜಿ ಪರಿಗಣಿಸಿದರೆ, ಸಕಾರಾತ್ಮಕ ತೀರ್ಪು ಬರಬಹುದು ಎಂಬ ನಿರೀಕ್ಷೆಯನ್ನು ಬಿಜೆಪಿ ಹೊಂದಿದೆ.

‘ಕೈ’ಗೆ ನಾಯಕತ್ವ ಜೆಡಿಎಸ್‌ ಒಲವು

ರಾಜ್ಯದಲ್ಲಿ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಸೇರಿ ಯಾವುದೇ ನಾಯಕರು ಮುಖ್ಯಮಂತ್ರಿ ಆಗುವುದಾದರೂ ಅದನ್ನು ಒಪ್ಪಿಕೊಳ್ಳುವುದಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಭಾನುವಾರ ‘ಕೈ’ ಪಾಳೆಯಕ್ಕೆ ಸಂದೇಶ ಕಳಿಸಿದರು.

ಈ ಕುರಿತು ಜೆಡಿಎಸ್‌ ಮುಖಂಡ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಮುಖಂಡರು ಸಿದ್ದರಾಮಯ್ಯ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ‘ನನಗೆ ಮುಖ್ಯಮಂತ್ರಿ ಆಗುವ ಆಸಕ್ತಿ ಇಲ್ಲ. ಮೊದಲಿಗೆ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ’ ಎಂದು ಹೇಳಿ ಸಾಗ ಹಾಕಿದರು.

ಈ ನಾಯಕರು ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ ಜತೆಗೂ ಮಾತಕತೆ ನಡೆಸಿ ದೇವೇಗೌಡರ ಇಂಗಿತವನ್ನು ತಿಳಿಸಿದರು.

ಬೆನ್ನಿಗೆ ಚೂರಿ ಹಾಕಿದರು: ಸಿದ್ದರಾಮಯ್ಯ

‘ನಾನು ಮುಖ್ಯಮಂತ್ರಿ ಆಗಿದ್ದಾಗ ಕೆಲಸ ಮಾಡಿಸಿಕೊಂಡ ಶಾಸಕರೇ ಈಗ ನನ್ನ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಅಸಮಾಧಾನ ಹೊರ ಹಾಕಿದರು.

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅತೃಪ್ತ ಶಾಸಕರು ರಾಜೀನಾಮೆ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮುನಿರತ್ನ ಅವರು ಹೇಳಿದ ಕೆಲಸಗಳನ್ನೆಲ್ಲ ಮಾಡಿಕೊಟ್ಟೆ. ಅವರೇ ಈಗ ಚೂರಿ ಹಾಕಿದರು’ ಎಂದು ಬೇಸರಗೊಂಡರು.

‘ರಾಜಕೀಯದಲ್ಲಿ ಯಾರನ್ನು ನಂಬಬೇಕು ಎನ್ನುವುದು ತಿಳಿಯುತ್ತಿಲ್ಲ. ನಂಬಿಕೆ ಎಂಬ ಪದಕ್ಕೆ ಇಲ್ಲಿ ಅರ್ಥವೇ ಇಲ್ಲದಂತಾಗಿದೆ’ ಎಂದು ಬೇಸರ ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಕೆಲ ಶಾಸಕರು ನನಗೆ ಆಪ್ತರು. ನಾನೇ ಅವರನ್ನು ಹೊರಗೆ ಕಳುಹಿಸಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.‌ ನಿಮ್ಮಲ್ಲಿ ಯಾರಿಗಾದರೂ ಬಿಜೆಪಿಗೆ ಹೋಗುವಂತೆ ಹೇಳಿದ್ದೇನಾ‘ ಎಂದು ಸಭೆಯಲ್ಲಿದ್ದ ಶಾಸಕರನ್ನು ಪ್ರಶ್ನಿಸಿದ ಅವರು, ‘ಅಂತಹ ನೀಚ ಕೆಲಸ ಮಾಡುವುದಿಲ್ಲ. ಇವರು ಮಾಡಿದ ಕೆಲಸದಿಂದ ನೋವಾಗಿದೆ’ ಎಂದರು.

‘ಶಾಸಕ ಶ್ರೀಮಂತ ಪಾಟೀಲ ಒಮ್ಮೆ ಫೋನ್ ಮಾಡಿ, ನನ್ನದೊಂದು ಸಕ್ಕರೆ ಕಾರ್ಖಾನೆ ಇದ್ದು, ಅದರ ಕೆಲಸ ಮಾಡಿಕೊಟ್ಟಿಲ್ಲ ಎಂದು ಹೇಳಿದರು. ತಕ್ಷಣ ಕರೆಮಾಡಿ ಮುಖ್ಯಮಂತ್ರಿಗೆ ತಿಳಿಸಿದ್ದೆ. ಅವರು ಕೆಲಸ ಮಾಡಿಕೊಡಲು ಒಪ್ಪಿಕೊಂಡಿದ್ದರು’ ಎಂದು ನೆನಪಿಸಿಕೊಂಡರು.

ಮೈತ್ರಿ ಬೆಂಬಲಿಸಲು ಮಹೇಶ್‌ಗೆ ಸೂಚನೆ

ಬಿಎಸ್‌ಪಿ ಶಾಸಕ ಎನ್‌.ಮಹೇಶ್‌ ಅವರು ವಿಶ್ವಾಸಮತದ ಸಂದರ್ಭದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಪರವಾಗಿ ಮತ ಚಲಾಯಿಸುವಂತೆ ಬಿಎಸ್‌ಪಿ ವರಿಷ್ಠೆ ಮಾಯಾವತಿ ಟ್ವೀಟ್‌ ಮೂಲಕ ಸೂಚಿಸಿದ್ದಾರೆ.

ವಿಶ್ವಾಸ ನಿರ್ಣಯದ ಮೇಲಿನ ಮತದಾನದ ವೇಳೆ ತಟಸ್ಥರಾಗಿ ಉಳಿಯುವುದಾಗಿ ಮಹೇಶ್‌ ತಿಳಿಸಿದ್ದರು. ಜೆಡಿಎಸ್‌ ಮುಖಂಡರು ತಕ್ಷಣವೇ ಮಾಯಾವತಿಯನ್ನು ಸಂಪರ್ಕಿಸಿ ಕುಮಾರಸ್ವಾಮಿ ಪರ ಮತ ಚಲಾಯಿಸಲು ಮಹೇಶ್ ಅವರಿಗೆ ಸೂಚಿಸುವಂತೆ ಮನವೊಲಿಸಿದರು ಎಂದು ಮೂಲಗಳು ತಿಳಿಸಿವೆ. ಪಕ್ಷದ ವರಿಷ್ಠರ ನಿರ್ದೇಶನದ ಮೇಲೆ ತಾವು ತಟಸ್ಥರಾಗಿ ಉಳಿಯಲು ನಿರ್ಧರಿಸಿದ್ದು, ಎರಡು ದಿನ ವಿಧಾನಸಭೆ ಕಲಾಪಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಎಚ್‌.ಡಿ.ದೇವೇಗೌಡರು ಮಾಯಾವತಿಯನ್ನು ಸಂಪರ್ಕಿಸಿದರು ಎನ್ನಲಾಗಿದೆ.

* ಬಿಜೆಪಿಯು ನೈತಿಕತೆಯ ಕುರಿತು ಮಾತನಾಡುತ್ತಲೇ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೂಲತತ್ವ, ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿದೆ

– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

* ಸದನದಲ್ಲಿ ಚಂದ್ರಗುಪ್ತ ಮೌರ್ಯನ ಕಾಲದಿಂದ ಇವತ್ತಿನವರೆಗಿನ ಕಥೆಗಳನ್ನು ಹೇಳಿ ಸದನದ ಅಮೂಲ್ಯ ಸಮಯ ವ್ಯರ್ಥ ಮಾಡಬೇಡಿ

–ಕೆ.ಎಸ್‌.ಈಶ್ವರಪ್ಪ, ಶಾಸಕ, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT