ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಂತ್ರದ ಹಬ್ಬದಲ್ಲಿ ಮತದಾರರ ಸಂಭ್ರಮ

ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಬಿರುಸಿನ ಮತದಾನ
Last Updated 23 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಜನತಂತ್ರದ ಹಬ್ಬವಾದ ಲೋಕಸಭಾ ಚುನಾವಣೆಯಲ್ಲಿಮಂಗಳವಾರ ಮತದಾರರು ಹಕ್ಕು ಚಲಾಯಿಸಿ ಸಂಭ್ರಮಿಸಿದರು.

ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು. ಅಲ್ಲಲ್ಲಿ ವಿದ್ಯುನ್ಮಾನ ಮತಯಂತ್ರಗಳು ಕೆಲ ಕಾಲ ಕೈಕೊಟ್ಟು ಗೊಂದಲ ಉಂಟಾಗಿದ್ದು ಹೊರತುಪಡಿಸಿದರೆ ಚುನಾವಣೆ ಬಹುತೇಕ ಸುಗಮವಾಗಿ ನಡೆಯಿತು. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತದಾರರು ಸರದಿಯಲ್ಲಿ ನಿಂತು ಮತದಾನ ಮಾಡುವ ಮೂಲಕ, ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ಬರೆದರು.

ಎರಡೂ ಕ್ಷೇತ್ರಗಳಲ್ಲೂ ಮತದಾನ ಬಿರುಸಿನಿಂದ ನಡೆಯಿತು. ಹಳ್ಳಿಗಳಲ್ಲಿನ ಮತದಾರರು ಹೆಚ್ಚಿನ ಉತ್ಸಾಹದಿಂದ ಬಂದು ಜವಾಬ್ದಾರಿ ನಿರ್ವಹಿಸಿದರು. ಮತಗಟ್ಟೆಗಳ ಬಳಿ ವೃದ್ಧರು, ಅಂಧರು, ಅಂಗವಿಕಲರು, ಅಶಕ್ತರಿಗೆ ಗಾಲಿ ಕುರ್ಚಿ, ಭೂತಕನ್ನಡಿ ಮೊದಲಾದ ವ್ಯವಸ್ಥೆ ಮಾಡಲಾಗಿತ್ತು. ಅಶಕ್ತರನ್ನು ಮತಗಟ್ಟೆಯೊಳಕ್ಕೆ ಗಾಲಿಕುರ್ಚಿಗಳಲ್ಲಿ ಕೂರಿಸಿ ಕರೆದುಕೊಂಡು ಹೋಗಲು ಹಲವು ಕಡೆಗಳಲ್ಲಿ ಸ್ಕೌಟ್‌ ಮತ್ತು ಗೈಡ್ಸ್‌ ಕೆಡೆಟ್‌ಗಳು ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದು ವಿಶೇಷವಾಗಿತ್ತು.

‘ಸಖಿ’ಗಾಗಿ ತಳಿರು ತೋರಣ:ಮಹಿಳಾ ಮತದಾರರು ಹೆಚ್ಚಿರುವ 18 ಮತಗಟ್ಟೆಗಳನ್ನು ‘ಸಖಿ’ ಮಹಿಳಾ ಮತದಾರ ಸ್ನೇಹಿ ಕೇಂದ್ರಗಳನ್ನಾಗಿ ರೂಪಿಸಲಾಗಿತ್ತು. ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸಂಕೇಶ್ವರದ ಪುರಸಭೆ ಸಭಾಭವನದ ಮತಗಟ್ಟೆ ಸಂಖ್ಯೆ 60ರಲ್ಲಿ ಸ್ಥಾಪಿಸಿದ್ದ ‘ಸಖಿ’ ಮಹಿಳಾ ಸ್ನೇಹಿ ಕೇಂದ್ರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ದ್ವಾರದಿಂದ ಮತಗಟ್ಟೆವರೆಗೆ ಹಸಿರುಹಾಸು ಹಾಸಲಾಗಿತ್ತು. ಎರಡೂ ಬದಿಯಲ್ಲಿ ಬಿಳಿಬಟ್ಟೆಯನ್ನು ಕಟ್ಟಿ, ಅಲ್ಲಲ್ಲಿ ತೆಂಗಿನ ಗರಿಗಳು ಹಾಗೂ ಮಾವಿನ ಸೊಪ್ಪನ್ನು ಕಟ್ಟಿ ತಳಿರುತೋರಣಗಳಿಂದ ಸಿಂಗರಿಸಿ, ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು. ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಗಾಲಿಕುರ್ಚಿ ವ್ಯವಸ್ಥೆ ಮಾಡಲಾಗಿತ್ತು.

ಇಲ್ಲಿ ಮಹಿಳೆಯರಿಗಷ್ಟೇ ಅಲ್ಲದೇ ಪುರುಷರಿಗೂ ಮತದಾನ ಮಾಡುವುದಕ್ಕೆ ಅವಕಾಶವಿತ್ತು. ಆದರೆ, ಅಲ್ಲಿ ಕರ್ತವ್ಯ ನಿರ್ವಹಿಸಿದ ಬಹುತೇಕ ಸಿಬ್ಬಂದಿ ಮಹಿಳೆಯರೇ ಆಗಿದ್ದು ವಿಶೇಷವಾಗಿತ್ತು.

ಆರೋಗ್ಯ ಸೇವೆ:ಈ ಕೇಂದ್ರದಲ್ಲಿ ಆರೋಗ್ಯ ಸೇವೆಯನ್ನು ಕೂಡ ಒದಗಿಸಿದ್ದು ವಿಶೇಷವಾಗಿತ್ತು., ಒಬ್ಬ ವೈದ್ಯಾಧಿಕಾರಿ ನೇತೃತ್ವದಲ್ಲಿ ನಾಲ್ವರ ತಂಡ ನಿಯೋಜಿಸಲಾಗಿತ್ತು. ಹಲವರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

‘ಇಲ್ಲಿ ರಕ್ತದೊತ್ತಡ, ಸಕ್ಕರೆ ಪ್ರಮಾಣ ಮೊದಲಾದ ಪರೀಕ್ಷೆ ಮಾಡಲಾಗುವುದು. ಅಗತ್ಯ ಬಿದ್ದರೆ ತುರ್ತು ಸಂದರ್ಭಗಳಿಗೆಂದು ಔಷಧ ವ್ಯವಸ್ಥೆಯನ್ನೂ ಮಾಡಲಾಗಿದೆ. ಎಲ್ಲ ಮತದಾರರು ಕೂಡ ಈ ಸೌಲಭ್ಯ ಪಡೆದುಕೊಳ್ಳಬಹುದು’ ಎಂದು ವೈದ್ಯಾಧಿಕಾರಿ ಡಾ.ಪೂರ್ಣಿಮಾ ತಲ್ಲೂರ ತಿಳಿಸಿದರು.

ಬಿರುಬಿಸಿಲಲ್ಲೂ ಕುಂದದ ಉತ್ಸಾಹ:ನೆತ್ತಿಸುಡುವ ಬಿರುಬಿಸಿಲಲ್ಲೂ ಮತದಾರರು ಉತ್ಸಾಹ ಕಳೆದುಕೊಳ್ಳಲಿಲ್ಲ. ಬೆಳಗಾವಿ ಲೋಕಸಭಾ ವ್ಯಾಪ್ತಿಗೆ ಬರುವ ಮಲ್ಲಾಪುರ ಪಿ.ಜಿ. ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿ ಯುವಕರಿಗೆ ಪ್ರೇರಣೆ ನೀಡಿದ್ದು ವಿಶೇಷವಾಗಿತ್ತು. ಕೆಲವರು ನಡೆದು ಬಂದಿದ್ದರೆ, ಕೆಲವರು ಕುಟುಂಬದವರೊಂದಿಗೆ ವಾಹನಗಳಲ್ಲಿ ಬಂದಿದ್ದರು.

ನಡೆದುಕೊಂಡೇ ಬಂದಿದ್ದ 90ರ ಹರೆಯದ ಕಾಶವ್ವ ಕೊಂಕಣಿ ಮತದಾನ ಮಾಡಿ ಗಮನಸೆಳೆದರು. ‘ಈವರೆಗೆ ಎಲ್ಲ ಚುನಾವಣೆಯಲ್ಲೂ ಮತದಾನ ಮಾಡಿದ್ದೇನೆ’ ಎಂದು ತಿಳಿಸಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದ ತೋಟದ 12 ಮಂದಿ ನಿವಾಸಿಗಳು ವಾಹನದಲ್ಲಿ ಬಂದು ಮತ ಚಲಾಯಿಸಿದರು. ‘ನಾವು ತೋಟದಲ್ಲಿರುತ್ತೇವೆ. ಹೀಗಾಗಿ, ಒಂದೇ ವಾಹನದಲ್ಲಿ ಒಮ್ಮೆಯೇ ಬಂದಿದ್ದೇವೆ’ ಎಂದು ತಿಳಿಸಿದರು. ಈ ಊರಿನ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ವೃದ್ಧರು ಹಾಗೂ ಮತದಾರರಿಗೆ ಸಹಾಯ ಮಾಡುತ್ತಿದ್ದುದು ವಿಶೇಷವಾಗಿತ್ತು.

ನವ ಮತದಾರರು ಹಕ್ಕು ಚಲಾಯಿಸಿ ಸಂಭ್ರಮಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಹಕ್ಕು ಚಲಾಯಿಸಿದ ‘ಅವಳಿ–ಜವಳಿ’
ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಂಕೇಶ್ವರದಲ್ಲಿ ಅವಳಿ-ಜವಳಿಗಳಾದ ಸರಸ್ವತಿ ಸಮ್ಮಣ್ಣವರ ಹಾಗೂ ಲಕ್ಷ್ಮಿ ಸಮ್ಮಣ್ಣವರ ಜೊತೆಯಾಗಿ ಬಂದು ಮತ ಚಲಾಯಿಸಿ ಗಮನಸೆಳೆದರು.

ಇವರಿಬ್ಬರೂ ಬಿ.ಎಸ್ಸಿ. ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ‘ಮತದಾನ ಮಾಡಿದ್ದಕ್ಕೆ ಖುಷಿ ಹಾಗೂ ಹೆಮ್ಮೆಯಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಕ್ಕಿರುವ ಈ ಅವಕಾಶವನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ಒಳ್ಳೆಯ ಅಭ್ಯರ್ಥಿಗೆ ಮತ ಹಾಕಬೇಕು. ಪ್ರತಿ ಮತಕ್ಕೂ ತನ್ನದೇ ಆದ ಮೌಲ್ಯವಿದೆ ಎನ್ನುವುದನ್ನು ಮರೆಯಬಾರದು’ ಎಂದು ಪ್ರತಿಕ್ರಿಯಿಸಿದರು.

ಪೊಲೀಸರ ನಿರ್ಲಕ್ಷ್ಯ: ನಿಯಮ ಗಾಳಿಗೆ!
ಮತಗಟ್ಟೆಗಳ 100 ಮೀ. ವ್ಯಾಪ್ತಿಯಲ್ಲಿ ಗುಂಪು ಸೇರುವಂತಿಲ್ಲ, ರಾಜಕೀಯ ಪಕ್ಷದವರು ಪ್ರಚಾರ ಮಾಡುವಂತಿಲ್ಲ ಎನ್ನುವುದು ನಿಯಮ. ಆದರೆ, ಬಹುತೇಕ ಕಡೆಗಳಲ್ಲಿ ಈ ನಿಯಮ ಅನುಷ್ಠಾನಕ್ಕೆ ತರುವಲ್ಲಿ ಜಿಲ್ಲಾ ಪೊಲೀಸರು ಸಂಪೂರ್ಣ ವಿಫಲವಾದರು! ಆದರೆ, ಮತ ಚಲಾಯಿಸಲು ಬಂದವರಿಗೆ ‘ಬೇಗ ಬೇಗ ಹೊರಡಿ’ ಎಂದು ಗದರಿಸುತ್ತಿದ್ದುದು ಸಾಮಾನ್ಯವಾಗಿತ್ತು!

ಹಲವು ಕಡೆಗಳಲ್ಲಿ ಮತಗಟ್ಟೆಯೊಳಗೇ ರಾಜಕೀಯ ಪಕ್ಷದವರು ನೆರೆದಿದ್ದರು. ಪ್ರಚಾರವನ್ನೂ ಮಾಡುತ್ತಿದ್ದರು. ಗೋಕಾಕದಲ್ಲಿ 15ಕ್ಕೂ ಹೆಚ್ಚು ಮಂದಿ ಯುವಕರು ಮತಗಟ್ಟೆ ಸಮೀಪವೇ ನಿಂತಿದ್ದರು. ಪೊಲೀಸರು ಕಂಡರೂ ಕಾಣದಂತೆ ವರ್ತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT