ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪರಂಪರೆ ನಾಶ ಅಸಾಧ್ಯ: ಸುದರ್ಶನ್‌

'ಸಮರ್ಥ ಆಡಳಿತ ನೀಡವಲ್ಲಿ ಮೋದಿ ಸಂಪೂರ್ಣ ವಿಫಲ'
Last Updated 17 ಏಪ್ರಿಲ್ 2019, 13:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಆಡಳಿತದಲ್ಲಿ ಸುಧಾರಣೆ ತಂದಿದ್ದೇವೆ, ಕಾಂಗ್ರೆಸ್‌ ಸಂಸ್ಕೃತಿಯನ್ನು ನಾಶ ಮಾಡಿದ್ದೇವೆ’ ಎಂದು ಬಿಜೆಪಿಯವರು ಹೋದಲ್ಲಿ, ಬಂದಲ್ಲಿ ಹೇಳುತ್ತಿದ್ದಾರೆ. ಆದರೆ, ದೇಶದಲ್ಲಿರುವ ಕಾಂಗ್ರೆಸ್‌ ಸಂಸ್ಕೃತಿಯನ್ನು ಬದಲಾವಣೆ ಮಾಡಲು ಯಾರಿಗೂ ಸಾಧ್ಯವಿಲ್ಲ. ಏಕೆಂದರೆ, ಈ ದೇಶದ ಪರಂಪರೆ ಮತ್ತು ಇತಿಹಾಸವೇ ಕಾಂಗ್ರೆಸ್‌ ಪರಂಪರೆಯಾಗಿದೆ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಉಪಾಧ್ಯಕ್ಷ ವಿ.ಆರ್‌.ಸುದರ್ಶನ್‌ ಹೇಳಿದರು.

ದೇಶದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿರುವುದು ಹಾಗೂ ದೇಶದ ವೈವಿಧ್ಯತೆಯಲ್ಲಿ ನಂಬಿಕೆ ಇಟ್ಟುಕೊಂಡು, ಅವರವರ ಆಚಾರ–ವಿಚಾರಗಳಂತೆ ಬದುಕುಲು ಅವಕಾಶ ಕಲ್ಪಿಸಿರುವುದು ಕಾಂಗ್ರೆಸ್‌ ಸಂಸ್ಕೃತಿಯಾಗಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಸಮರ್ಥಿಸಿಕೊಂಡರು.

ಐದು ವರ್ಷಗಳ ಮೋದಿ ಆಡಳಿತಾವಧಿಯಲ್ಲಿ ಅವರು ನೀಡಿದ್ದ ಯಾವೊಂದು ಆಶ್ವಾಸನೆಗಳೂ ಈಡೇರಿಲ್ಲ. ಕೇಂದ್ರ–ರಾಜ್ಯಗಳ ನಡುವಿನ ಸಂಬಂಧಗಳು ಸುಧಾರಣೆಯಾಗುವ ಬದಲು ಮತ್ತಷ್ಟು ಹದಗೆಟ್ಟಿವೆ. ಬಿಜೆಪಿ ಆಡಳಿತ ಇರದ ರಾಜ್ಯಗಳ ಮೇಲೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಇದೇನಾ ಬಿಜೆಪಿ ತಂದಿರುವ ಆಡಳಿತ ಸುಧಾರಣೆ ಎಂದು ಪ್ರಶ್ನಿಸಿದರು.

ಮೋದಿ ಅವರು ಸಮರ್ಥ ಆಡಳಿತ ನೀಡವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ನೀಡಿಲ್ಲ. ಮಹಿಳೆಯರು, ಮಕ್ಕಳು, ಯುವಜನ, ಕಾರ್ಮಿಕರ ವಿರೋಧಿ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಿದರು.

ರೈತರ ಸಾಲ ಮನ್ನಾ ವಿಚಾರದಲ್ಲಿ ರಾಷ್ಟ್ರೀಯ ಸಮಗ್ರ ನೀತಿ ಜಾರಿಗೆ ತರಲು ಮೋದಿಗೆ ಸಾಧ್ಯವಾಗಿಲ್ಲ. ಐದು ವರ್ಷದಲ್ಲಿ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಎಲ್ಲಿ ದ್ವಿಗುಣವಾಗಿದೆ ಎಂಬುದರ ಲೆಕ್ಕಕೊಡಿ ಎಂದು ಅವರು ಒತ್ತಾಯಿಸಿದರು.

ಸಂಸತ್ತಿನ ಅಧಿವೇಶನ, ಚರ್ಚೆಗಳಲ್ಲಿ ಒಮ್ಮೆಯೂ ಭಾಗವಹಿಸದ ಹಾಗೂ ವಿರೋಧ ಪಕ್ಷದವರ ಪ್ರಶ್ನೆಗಳಿಗೆ ಉತ್ತರಿಸದ ಮೋದಿ ಅವರು ಸಾರ್ವಜನಿಕ ಸ್ಥಳಗಳಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಆರೋಪಿಸಿದರು.

ಆರ್‌ಬಿಐ ಅಧಿಕಾರಿಗಳು ಮತ್ತು ಹಣಕಾಸು ತಜ್ಞರ ಜೊತೆ ಚರ್ಚಿಸದೇ ಏಕಾಏಕಿ ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸಿದರು. ಇದರಿಂದ ಕಪ್ಪುಹಣ ಮತ್ತು ನಕಲಿ ನೋಟುಗಳ ಹಾವಳಿ ತಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಆದಾಯ ತೆರಿಗೆ ಇಲಾಖೆ ಸೇರಿದಂತೆ ಪ್ರಮುಖ ಸ್ವಾಯತ್ತಾ ಸಂಸ್ಥೆಗಳನ್ನು ಮೋದಿ ಅವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿದರು.

ಯುಪಿಎ ಅವಧಿಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ವಿರುದ್ಧ ಎಂಟು ಬಾರಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದರೂ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಎಲ್ಲಿಯೂ ಬಹಿರಂಗಪಡಿಸಲಿಲ್ಲ. ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ. ಆದರೆ, ಮೋದಿ ಅವಧಿಯಲ್ಲಿ ಸೇನೆಯು ಎರಡು ಬಾರಿ ಸರ್ಜಿಕಲ್‌ ಸ್ಟ್ರೈಕ್‌ ಮಾಡಿರುವುದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದರು.

ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ ಎಂದು ಬಿಜೆಪಿಯವರು ಬೀಗುತ್ತಿದ್ದಾರೆ. ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಮೊತ್ತದ ಹಗರಣ ಎಲ್ಲೆಡೆ ಚರ್ಚೆಯಾಗುತ್ತಿದೆ ಎಂದು ಹೇಳಿದರು.

ದೇಶ ಹಿತದೃಷ್ಟಿಯಿಂದ ಈ ಬಾರಿಯ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಪ್ರಸ್ತುತ ನಡೆಯುತ್ತಿರುವುದು ವಿಚಾರಗಳ ನಡುವಿನ ಹೋರಾಟವೇ ಹೊರತು, ಪಕ್ಷಗಳ ನಡುವಿನ ಚುನಾವಣೆಯಲ್ಲ ಎಂದು ಹೇಳಿದರು.

ಮುಖಂಡರಾದ ಅನಿಲ್‌ಕುಮಾರ್‌ ಪಾಟೀಲ, ಅಲ್ತಾಫ್‌ ಕಿತ್ತೂರ, ಎ.ಎಂ.ಹಿಂಡಸಗೇರಿ, ಮಹೇಂದ್ರ ಸಿಂಘಿ, ಸದಾನಂದ ಡಂಗನವರ, ಎಫ್‌.ಎಚ್‌.ಜಕ್ಕಪ್ಪನವರ, ರಾಜಾ ದೇಸಾಯಿ, ಮೋಹನ ಹಿರೇಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT