ವಿಎಸ್‌ಕೆ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಶುರು

7
ಯುಜಿಸಿ ಸೂಚನೆ ಮೀರಿ ನೇಮಕಾತಿ ಪ್ರಕ್ರಿಯೆ ಚುರುಕು

ವಿಎಸ್‌ಕೆ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಶುರು

Published:
Updated:

ಬಳ್ಳಾರಿ: ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ, ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ಜುಲೈ 18ರಂದು ಪತ್ರ ಬರೆದಿದ್ದರೂ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಸಂಬಂಧ ಸಂದರ್ಶನ ಮತ್ತು ಪ್ರಮಾಣ ಪತ್ರಗಳ ಪರಿಶೀಲನೆ ಬುಧವಾರದಿಂದ ಆರಂಭವಾಗಿದೆ.

ವಿಭಾಗವಾರು ಮೀಸಲಾತಿ ಸಂಬಂಧ ಅಲಹಾಬಾದ್‌ ಹೈಕೋರ್ಟ್‌ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಮತ್ತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ಸುಪ್ರೀಂ ಕೋರ್ಟ್‌ಗೆ  ಮೇಲ್ಮನವಿ ಸಲ್ಲಿಸಿದ್ದು, ಅರ್ಜಿ ಇತ್ಯರ್ಥವಾಗುವವರೆಗೂ ನೇಮಕಾತಿ ನಡೆಸಬಾರದು ಎಂದು ಯುಜಿಸಿ ಪತ್ರ ಬರೆದಿತ್ತು. 17 ಪ್ರಾಧ್ಯಾಪಕರು, 28 ಸಹ ಪ್ರಾಧ್ಯಾಪಕರು ಮತ್ತು 44 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಸಲುವಾಗಿ ಜೂನ್‌ 14ರಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಅಧಿಸೂಚನೆ ಪ್ರಕಟಿಸಿತ್ತು. ಅದು, ಎರಡು ವರ್ಷಗಳಲ್ಲಿ ವಿಶ್ವವಿದ್ಯಾಲಯ ಪ್ರಕಟಿಸಿದ್ದ ನಾಲ್ಕನೇ ಅಧಿಸೂಚನೆಯಾಗಿತ್ತು. 

ನೇಮಕಾತಿ ವಿವಾದ: ‘ಪರೀಕ್ಷಾಂಗ ಕುಲಸಚಿವರ ನೇತೃತ್ವದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂಬ ನಿಯಮವನ್ನು ಕುಲಪತಿ ಉಲ್ಲಂಘಿಸಿದ್ದು, ಸಿಬ್ಬಂದಿ ಸುಧಾರಣೆ ಸಮಿತಿಯನ್ನು ರಚಿಸಿ ಅದರ ಮೂಲಕ ಪ್ರಕ್ರಿಯೆ ನಡೆಸಿದ್ದಾರೆ’ ಎಂದು ಕುಲಸಚಿವ ಪ್ರೊ.ಹೊನ್ನು ಸಿದ್ಧಾರ್ಥ ಅವರು ಕುಲಾಧಿಪತಿಯಾದ ರಾಜ್ಯಪಾಲರಿಗೆ ಜುಲೈನಲ್ಲಿ ಪತ್ರ ಬರೆದಿದ್ದರು. 

ಜುಲೈನಲ್ಲಿ ವಿಶ್ವವಿದ್ಯಾಲಯ ನಡೆಸಿದ್ದ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆಯ ನೆರಳಚ್ಚು ಪ್ರತಿ ನೀಡಿರಲಿಲ್ಲ. ಆ ಬಗ್ಗೆಯೂ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಲಪತಿ ಪ್ರೊ.ಎಂ.ಎಸ್‌. ಸುಭಾಷ್,‘ಸುಪ್ರೀಂಕೋರ್ಟ್‌ ಆದೇಶಕ್ಕೆ ಬದ್ಧರಾಗಿರಬೇಕು ಎಂಬ ಷರತ್ತು ವಿಧಿಸಿ ನೇಮಕಾತಿ ಪತ್ರ ನೀಡಲಾಗುವುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !