ಮಂಗಳವಾರ, ಮಾರ್ಚ್ 2, 2021
29 °C

ವಿಟಿಯು ಇಬ್ಭಾಗಕ್ಕೆ ತೀವ್ರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಇಬ್ಭಾಗ ಮಾಡಲು ತೀರ್ಮಾನ ಕೈಗೊಂಡಿರುವ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳು ಉಗ್ರ ಹೋರಾಟ ನಡೆಸಲು ಅಣಿಯಾಗಿವೆ.

ಜೆ.ಎಚ್‌. ಪಟೇಲ್‌ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1998ರಲ್ಲಿ ಬೆಳಗಾವಿ ಸಮೀಪದ ಮಚ್ಚೆಯಲ್ಲಿ ವಿಟಿಯು ಅಸ್ತಿತ್ವಕ್ಕೆ ಬಂದಿತ್ತು. 20 ವರ್ಷಗಳ ಅವಧಿಯಲ್ಲಿ ವಿಶ್ವವಿದ್ಯಾಲಯವು ಬೆಳಗಾವಿಯ ಹೆಮ್ಮೆಯ ಪ್ರತೀಕವಾಗಿ ಬೆಳೆದುನಿಂತಿದೆ. ಅದನ್ನು ಒಡೆಯುವ ಮೂಲಕ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೊರಟಿದ್ದಾರೆ ಎನ್ನುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹೋರಾಟ– ಎಬಿವಿಪಿ:

‘ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೇವೆ’ ಎಂದು ಎಬಿವಿಪಿ ಕಾರ್ಯದರ್ಶಿ ಗಿರೀಶ ಬಡಿಗೇರ ಹೇಳಿದರು.

ಇನ್ನೊಬ್ಬ ಕಾರ್ಯಕರ್ತ ಪೃಥ್ವಿಕುಮಾರ್‌ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಬೆಳಗಾವಿ ದೂರವಾಗುತ್ತದೆ ಎನ್ನುವುದು ಸಂಪೂರ್ಣ ಸುಳ್ಳು. ಬೆಂಗಳೂರು, ಕಲ್ಬುರ್ಗಿ, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಪಿ.ಜಿ ಕೇಂದ್ರಗಳ ಮೂಲಕ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಬಹಳಷ್ಟು ಕಾರ್ಯಗಳು ಈಗ ಆನ್‌ಲೈನ್‌ ಮೂಲಕವೇ ನಡೆಯುತ್ತಿದ್ದು, ವಿದ್ಯಾರ್ಥಿಗಳು ಬೆಳಗಾವಿಗೆ ಬರುವ ಅವಶ್ಯಕತೆ ಇಲ್ಲ’ ಎಂದರು.

‘ಇಬ್ಭಾಗ ಮಾಡಿ, ಇನ್ನೊಂದೆಡೆ ಸ್ಥಾಪಿಸಬೇಕು ಎನ್ನುವ ಇಚ್ಛೆ ಇದ್ದಿದ್ದರೆ ಮುದ್ದೇನಹಳ್ಳಿಯಲ್ಲಿ ಏಕೆ ಮಾಡಬಾರದು? ಹಾಸನವೇ ಏಕಾಗಬೇಕಾಗಿತ್ತು. ಇದರ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆ’ ಎಂದು ಆರೋಪಿಸಿದರು.

ಇಂದು ಸಭೆ:

‘ಸರ್ಕಾರದ ಈ ನಿರ್ಧಾರ ಗಡಿಭಾಗಕ್ಕೆ ಮಾಡಿದ ಅನ್ಯಾಯವಾಗಿದೆ. ಕನ್ನಡ ಪರ ಸಂಘಟನೆಗಳು ಹಲವು ವರ್ಷಗಳ ಕಾಲ ನಡೆಸಿದ ಹೋರಾಟದ ಫಲವಾಗಿ ವಿಟಿಯು ಬೆಳಗಾವಿಯಲ್ಲಿ ಸ್ಥಾಪನೆಯಾಗಿತ್ತು. ಅದನ್ನು ಈಗ ಏಕಾಏಕಿ ಇಬ್ಭಾಗ ಮಾಡಲು ಹೊರಟಿರುವ ಎಚ್‌.ಡಿ. ಕುಮಾರಸ್ವಾಮಿ ಅವರ ನಿರ್ಧಾರ ಖಂಡನೀಯ. ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಭಾನುವಾರ ಜಿಲ್ಲೆಯ ಎಲ್ಲ ಕನ್ನಡ ಪರ ಸಂಘಟನೆಗಳ ಸಭೆ ಕರೆಯಲಾಗಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಪ್ರತಿಕ್ರಿಯಿಸಿದರು.

‘ವಿಟಿಯು ಇಬ್ಭಾಗ ಮಾಡಿದಂತೆ ಬೆಂಗಳೂರಿನಲ್ಲಿರುವ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನೂ ಇಬ್ಭಾಗ ಮಾಡಿ, ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ– ಧಾರವಾಡ ಅಥವಾ ವಿಜಯಪುರದಲ್ಲಿ ಸ್ಥಾಪಿಸಲಿ’ ಎಂದು ಸವಾಲು ಹಾಕಿದರು.

ಸರ್ವ ಪಕ್ಷಗಳ ಸಭೆ:

‘ವಿಟಿಯು ಇಬ್ಭಾಗವಾದರೆ ಬೆಳಗಾವಿಯ ಗೌರವಕ್ಕೆ ಚ್ಯುತಿ ಆದಂತೆ. ಇದನ್ನು ತಡೆಗಟ್ಟಲು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಸರ್ಕಾರದ ಮೇಲೆ ಒತ್ತಡ ಹೇರಲು ಎಲ್ಲ ಪಕ್ಷಗಳ ಮುಖಂಡರ ಸಭೆಯನ್ನು ಭಾನುವಾರ ಕರೆದಿದ್ದೇನೆ. ಇಲ್ಲಿ ಚರ್ಚಿಸಿದ ನಂತರ ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ’ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.