ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ; ವಿಭಜನೆ ನಿರ್ಧಾರ ಹಿಂಪಡೆಯಲು ಒತ್ತಾಯ

ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ
Last Updated 10 ಫೆಬ್ರುವರಿ 2019, 14:56 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು’ ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದರು.

‌ನಗರದಲ್ಲಿ ಭಾನುವಾರ ನಡೆದ ವಿವಿಧ ಕನ್ನಡಪರ ಸಂಘಟನೆಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕನ್ನಡಪರ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘ವಿಶ್ವವಿದ್ಯಾಲಯವನ್ನು ವಿಭಜಿಸಲು ಹೊರಟಿರುವ ಸರ್ಕಾರದ ಕ್ರಮವು, ಉತ್ತರ ಕರ್ನಾಟಕದ ಜನರಲ್ಲಿ ಪ್ರತ್ಯೇಕತೆಯ ಭಾವ ಮೂಡಿಸುವಂತಿದೆ. ಜನರ ಆಕ್ರೋಶದ ಕಿಚ್ಚು ಹೊತ್ತಿ ಉರಿಯಲು ಅವಕಾಶ ನೀಡಬಾರದು’ ಎಂದು ಎಚ್ಚರಿಸಿದರು.

‘ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಧಿವೇಶನದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಗೆಸ್ಟ್‌ಹೌಸ್‌ನಲ್ಲಿ ವಾಸ್ತವ್ಯ ಮಾಡಿದ್ದರು. ಅಲ್ಲಿಯೇ ಅವರು ವಿಶ್ವವಿದ್ಯಾಲಯವನ್ನು ವಿಭಜಿಸುವ ಸಂಚು ರೂಪಿಸಿ, ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬೆಳಗಾವಿಯಲ್ಲಿದ್ದ ಕೆ–ಶಿಪ್‌ ಕಚೇರಿಯನ್ನು ಹಾಸನಕ್ಕೆ, ಆಯುಷ್‌ ಇಲಾಖೆಯ ಔಷಧಿ ತಯಾರಿಕಾ ಕಚೇರಿಯನ್ನು ಬೆಂಗಳೂರಿಗೆ ಈಗಾಗಲೇ ಸ್ಥಳಾಂತರ ಮಾಡಿದ್ದಾರೆ. ಆಗ ನಾವು ಪ್ರತಿಭಟನೆ ಮಾಡಿ ಸುಮ್ಮನಾಗಿದ್ದೆವು.ಆದರೆ, ನಮ್ಮ ತಾಳ್ಮೆಯನ್ನು ದುರುಪಯೋಗಪಡಿಸಿಕೊಂಡಿರುವ ಸರ್ಕಾರ, ಈಗ ಜಿಲ್ಲೆಯ ಕಳಶಪ್ರಾಯವಾಗಿರುವ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯವನ್ನು ವಿಭಜನೆ ಮಾಡುವ ಹಂತಕ್ಕೆ ತಲುಪಿದೆ. ನಾವು ಇನ್ನು ಸುಮ್ಮನಿರಲ್ಲ. ನಿರ್ಣಯ ವಾಪಸ್‌ ಪಡೆಯುವವರೆಗೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ರೇವಣ್ಣ ವಿರುದ್ಧ ಆಕ್ರೋಶ:

ಮುಖಂಡ ಸಿದ್ದನಗೌಡ ಪಾಟೀಲ ಮಾತನಾಡಿ, ‘ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಎಲ್ಲ ಯೋಜನೆಗಳನ್ನು ಹಾಸನಕ್ಕೆ ಒಯ್ಯುತ್ತಿದ್ದಾರೆ. ವಿಟಿಯು ಕುಲಪತಿ ಕರಿಸಿದ್ದಪ್ಪ ಅವರು ವಿಭಜನೆಯಬಗ್ಗೆ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ. ಅವರು ಸಂಪರ್ಕಕ್ಕೂ ಸಿಗುತ್ತಿಲ್ಲ. ಕೂಡಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ತಳವಾರ ಹಾಗೂ ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ‘ಜಿಲ್ಲೆಯ ರಾಜಕಾರಣಿಗಳು ಇದರ ವಿರುದ್ಧ ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ಇಲ್ಲದಿದ್ದರೇ ಎಲ್ಲ ಶಾಸಕರು ಹಾಗೂ ಸಚಿವರ ಮನೆಯ ಎದುರು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರತಿಭಟನೆ:ಸಭೆಯ ನಂತರ ಚನ್ನಮ್ಮ ವೃತ್ತದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಸರ್ಕಾರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಚಿಕ್ಕನಗೌಡರ, ಮುಖಂಡರಾದ ಎಂ.ಜಿ. ಮಕಾನದಾರ, ಗಣೇಶ ರೋಕಡೆ, ಯಶೋಧಾ ಬಿರಡೆ, ಕಸ್ತೂರಿ ಬಾವಿ, ಸಾಗರ ಬೋರಗಲ್ ಸೇರಿ ನೂರಾರು ಜನರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT