ವಿಟಿಯು ಸಂಸ್ಥಾಪನಾ ದಿನಾಚರಣೆ: ₹ 60 ಲಕ್ಷ ವೆಚ್ಚ

7
ಕಾರ್ಯಕ್ರಮ ಇಂದು: ರಾಜ್ಯಪಾಲರು ಭಾಗಿ

ವಿಟಿಯು ಸಂಸ್ಥಾಪನಾ ದಿನಾಚರಣೆ: ₹ 60 ಲಕ್ಷ ವೆಚ್ಚ

Published:
Updated:
ಪ್ರೊ.ಕರಿಸಿದ್ದಪ್ಪ

ಬೆಳಗಾವಿ: ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 20ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ₹ 60 ಲಕ್ಷ ವೆಚ್ಚ ಮಾಡಲಾಗುತ್ತಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ತಿಳಿಸಿದರು.

‘ಶುಕ್ರವಾರ ( ಜೂನ್‌ 29) ನಡೆಯುವ ಈ ಕಾರ್ಯಕ್ರಮ ಕುರಿತು ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಪರಿಷತ್‌ (ಇಸಿ) ಸಭೆಯಲ್ಲಿ ಚರ್ಚಿಸಲಾಗಿದೆ. ಹಣಕಾಸು ಸಮಿತಿಯ ಅನುಮೋದನೆ ಕೂಡ ಪಡೆದಿದ್ದೇವೆ. ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಿರುವುದಕ್ಕೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ದುಂದು ವೆಚ್ಚ ಮಾಡುತ್ತಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

‘20ನೇ ವಾರ್ಷಿಕೋತ್ಸವವನ್ನು ದೊಡ್ಡದಾಗಿ ನಡೆಸದಿದ್ದರೆ ಹೇಗೆ? ಇತರ ವಿ.ವಿಗಳಲ್ಲಿ ಮಾಡುವುದಿಲ್ಲವೇ? ವಿಶ್ವವಿದ್ಯಾಲಯದಲ್ಲಿ ಕನಿಷ್ಠ ಸೌಲಭ್ಯವಿದ್ದಾಗ ದುಡಿದ ನಿವೃತ್ತರನ್ನು ಸನ್ಮಾನಿಸುತ್ತಿದ್ದೇವೆ. ಬೋಧಕರು ಹಾಗೂ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಉಪನ್ಯಾಸ ಕೊಡಿಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯಪಾಲ ವಜುಭಾಯಿ ವಾಲಾ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಬರುತ್ತಿಲ್ಲ’ ಎಂದು ಖಚಿತಪಡಿಸಿದರು.

ದುಂದು ವೆಚ್ಚ ಸರಿಯಲ್ಲ: ‘ಆರ್ಥಿಕ ಸಂಕಷ್ಟವಿದೆ ಎನ್ನುವ ವಿಶ್ವವಿದ್ಯಾಲಯದ ಒಂದು ದಿನದ ಕಾರ್ಯಕ್ರಮಕ್ಕಾಗಿ ಇಷ್ಟು ದೊಡ್ಡ ಮೊತ್ತ ಖರ್ಚು ಮಾಡುವುದು ಸರಿಯಲ್ಲ. ವಿ.ವಿಯದ್ದೇ ಅತಿಥಿಗೃಹವಿದ್ದರೂ ಆಹ್ವಾನಿತರಿಗೆ ಹೋಟೆಲುಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಸ್ಥಾಪನಾ ದಿನಾಚರಣೆಗೆ ನಮ್ಮ ವಿರೋಧವಿಲ್ಲ. ಆದರೆ, ಅದ್ಧೂರಿತನ ಪ್ರದರ್ಶಿಸಿ ದುಂದುವೆಚ್ಚ ಮಾಡಬಾರದು. ರಾಜ್ಯಪಾಲರು ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು’ ಎಂದು ಎಬಿವಿಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ ಒತ್ತಾಯಿಸಿದರು.

**

ವಿದ್ಯಾರ್ಥಿಗಳು ಸಿದ್ಧಪಡಿಸಿದ 129 ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಗುತ್ತಿದೆ. ನಮ್ಮ ಆರ್ಥಿಕ ಪರಿಸ್ಥಿತಿಯ ಮಿತಿಯಲ್ಲಿಯೇ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ.
ಪ್ರೊ.ಕರಿಸಿದ್ದಪ್ಪ, ಕುಲಪತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !