ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ ಟಿ.ವಿ ಕಣ್ಗಾವಲು

ಕಾಲೇಜುಗಳಿಗೆ ವಿಟಿಯು ಸೂಚನೆ
Last Updated 15 ನವೆಂಬರ್ 2018, 16:27 IST
ಅಕ್ಷರ ಗಾತ್ರ

ಬೆಳಗಾವಿ: ಎಂಜಿನಿಯರಿಂಗ್‌ ಪದವಿಯ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯದಂತೆ ತಡೆಗಟ್ಟಲು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕೆಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಅಧೀನದ ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಿದೆ.

ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ನಿರ್ದೇಶನದಂತೆ ಕ್ಯಾಮೆರಾ ಅಳವಡಿಸಲು ವಿಟಿಯು ಮುಂದಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ, ನಕಲು ಯತ್ನ ಸೇರಿದಂತೆ ಹಲವು ಆರೋಪಗಳು ಇತ್ತೀಚೆಗೆ ಪರೀಕ್ಷೆ ವೇಳೆ ಕೇಳಿಬಂದಿದ್ದವು. ಇವುಗಳನ್ನು ತಡೆಗಟ್ಟಲು ವಿಟಿಯು, ಕ್ಯಾಮೆರಾ ಮೊರೆಹೋಗಿದೆ.

ನೇರ ವೀಕ್ಷಣೆಗೆ ಅವಕಾಶ:

ಪರೀಕ್ಷಾ ಕೇಂದ್ರಗಳಲ್ಲಿರುವ ಎಲ್ಲ ಕೊಠಡಿಗಳಲ್ಲಿ ಕ್ಯಾಮೆರಾ ಅಳವಡಿಸಬೇಕು. ಕ್ಯಾಮೆರಾಗಳ ನಿರ್ವಹಣೆಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಕ್ಯಾಮೆರಾ ಸೆರೆಹಿಡಿದ ದೃಶ್ಯಾವಳಿಗಳನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಬೇಕು. ಪರೀಕ್ಷೆಯ ಉಸ್ತುವಾರಿ ಹೊತ್ತಿರುವವರು ಹಾಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯವರಿಗೆ ತಾವಿರುವ ಸ್ಥಳದಿಂದಲೇ ದೃಶ್ಯಾವಳಿಗಳನ್ನು ನೋಡಲು ಅವಕಾಶ ದೊರೆಯುವಂತಿರಬೇಕು ಎಂದು ವಿಟಿಯು ಹೇಳಿದೆ.

ತನ್ನ ಅಧೀನದ ಎಲ್ಲ ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿರುವ ವಿಶ್ವವಿದ್ಯಾಲಯದ ಕುಲಸಚಿವ ಜಗನ್ನಾಥ ರೆಡ್ಡಿ ಅವರು, ಇದೇ ತಿಂಗಳ 28ರೊಳಗೆ ಕ್ಯಾಮೆರಾಗಳನ್ನು ಅಳವಡಿಸಬೇಕು ಹಾಗೂ 30ರೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು 6 ತಿಂಗಳವರೆಗೆ ಸಂಗ್ರಹ ಮಾಡಿಟ್ಟುಕೊಳ್ಳಬೇಕು. ಅವಶ್ಯಕತೆ ಬಿದ್ದಾಗ ತಕ್ಷಣ ಅವು ಕೈಗೆ ಸಿಗುವಂತಿರಬೇಕು ಎಂದು ಹೇಳಿದ್ದಾರೆ.

ಕ್ಯಾಮೆರಾ ಅಳವಡಿಸುವ ಕೆಲಸವನ್ನು ಆಯಾ ಕಾಲೇಜುಗಳ ಪ್ರಿನ್ಸಿಪಾಲರಿಗೆ ವಹಿಸಲಾಗಿದೆ. ಮೌಲ್ಯಮಾಪನ ಕುಲಸಚಿವರ ಗಮನಕ್ಕೆ ತಾರದೇ ಬೇರಾರಿಗೂ ಈ ಹೊಣೆಯನ್ನು ವರ್ಗಾಯಿಸಬಾರದೆಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT