ಭಾನುವಾರ, ಜುಲೈ 25, 2021
28 °C
ಅಂಚೆ ಇಲಾಖೆಯಿಂದ ಕ್ರಮ

ಬೆಳಗಾವಿ | ಉದ್ಯೋಗ ಖಾತ್ರಿ ಯೋಜನೆ: ಶ್ರಮಿಕರ ಮನೆ ಬಾಗಿಲಿಗೆ ‘ಕೂಲಿ’ ಹಣ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಅವರವರ ಊರುಗಳಿಗೇ ತೆರಳಿ ಕೂಲಿ ಪಾವತಿಸುವ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ.

ಅಂಚೆ ಇಲಾಖೆಯ ಐಪಿಪಿಬಿ (ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌) ಯೋಜನೆಯ ಮೂಲಕ ಈ ಕಾರ್ಯ ಅನುಷ್ಠಾನಗೊಳಿಸಲಾಗುತ್ತಿದೆ. ಎಇಪಿಎಸ್–ಆಧಾರ್‌ ಆಧಾರಿತ ಪಾವತಿ ವಿಧಾನದ ಮೂಲಕ ಕೂಲಿಕಾರರಿಗೆ ಹಣ ನೀಡಲಾಗುತ್ತದೆ. ಇದರಿಂದಾಗಿ, ಕೂಲಿಕಾರರು ಹಣ ಡ್ರಾ ಮಾಡಿಕೊಂಡು ಬರುವುದಕ್ಕಾಗಿ ಬ್ಯಾಂಕ್‌ ಶಾಖೆಗಳಿಗೆ ಹೋಗಬೇಕಾದ ತಾಪತ್ರಯ ತಪ್ಪಿದೆ. ಕೆಲವು ಕಡೆಗಳಲ್ಲಿ ಅವರು ಪಟ್ಟಣ, ತಾಲ್ಲೂಕು ಕೇಂದ್ರಗಳಿಗೆ ಬರಬೇಕಾಗುತ್ತಿತ್ತು. ಇದಕ್ಕೆ ಆಗುತ್ತಿದ್ದ ವೆಚ್ಚ ಹಾಗೂ ಸಮಯವನ್ನು ಹೊಸ ವ್ಯವಸ್ಥೆಯಿಂದಾಗಿ ಉಳಿಸಬಹುದಾಗಿದೆ. ಈ ಕ್ರಮ ಗ್ರಾಮೀಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಬ್ಯಾಂಕ್‌ಗಳಿಗೆ ಅಲೆದಾಟ ತಪ್ಪಿದೆ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕುಟುಂಬವೊಂದಕ್ಕೆ ಆರ್ಥಿಕ ವರ್ಷದಲ್ಲಿ 100 ದಿನಗಳ ಕೆಲಸ ನೀಡಲಾಗುತ್ತದೆ. ಪ್ರಸ್ತುತ ದಿನದ ಕೂಲಿಯನ್ನು ₹ 275 ನಿಗದಿಪಡಿಸಲಾಗಿದೆ. ಕೆಲಸ ನಿರ್ವಹಿಸಿದ 15 ದಿನಗಳ ಒಳಗೆ ಹಣ ಸಂದಾಯ ಮಾಡಬೇಕು ಎನ್ನುವುದು ನಿಯಮ. ಹಣವನ್ನು ಅವರವರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ಹೀಗೆ ದೊರೆತ ಹಣವನ್ನು ಈವರೆಗೆ ಬ್ಯಾಂಕ್‌ಗೆ ಹೋಗಿಯೇ ಪಡೆಯಬೇಕಾಗುತ್ತಿತ್ತು. ಕೆಲವೊಮ್ಮೆ ಇಡೀ ದಿನವನ್ನು ಈ ಕಾರ್ಯಕ್ಕೆ ವಿನಿಯೋಗಿಸಬೇಕಾಗುತ್ತಿತ್ತು.

‘ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ಅವರಿದ್ದ ಸ್ಥಳಕ್ಕೇ ಹೋಗಿ ಕೂಲಿ ಹಣ ನೀಡುವ ವ್ಯವಸ್ಥೆ ಇದಾಗಿದೆ. ಅವರ ಬಳಿ ಆಧಾರ್‌ ಸಂಖ್ಯೆ ಇರಬೇಕು. ಅದನ್ನು ಬ್ಯಾಂಕ್‌ ಖಾತೆಗೆ ಜೋಡಿಸಿರಬೇಕು. ನೋಂದಾಯಿಸಿದ ಮೊಬೈಲ್‌ ಜೊತೆಗಿರಬೇಕು. ಆ ಮೊಬೈಲ್‌ಗೆ ಬ್ಯಾಂಕ್‌ನಿಂದ ಬರುವ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ಬಳಸಬೇಕಾಗುತ್ತದೆ. ಯಾವುದೇ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೂ ಎಇಪಿಎಸ್ ಮೂಲಕ ಹಣ ಡ್ರಾ ಮಾಡಿಕೊಡಲಾಗುವುದು’ ಎಂದು ಐಪಿಪಿಬಿಯ ಜಿಲ್ಲಾ ವ್ಯವಸ್ಥಾಪಕ ಮನೀಶ್ ತಿವಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಕೆಲಸವನ್ನು ಆಯಾ ಅಂಚೆ ಕಚೇರಿಯ ಸಿಬ್ಬಂದಿ ನಿರ್ವಹಿಸುತ್ತಾರೆ. ಅವರಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ. ಈಗಾಗಲೇ ಹಲವು ಕಡೆಗಳಲ್ಲಿ ಈ ಸೇವೆ ಆರಂಭಿಸಲಾಗಿದೆ. ಕೋವಿಡ್–19 ಲಾಕ್‌ಡೌನ್‌ ಅವಧಿಯಲ್ಲಿ ಎಇಪಿಎಸ್ ಮೂಲಕ ಜಿಲ್ಲೆಯಲ್ಲಿ ಒಟ್ಟು ₹ 11 ಕೋಟಿ ನೀಡಲಾಗಿದೆ’ ಎಂದರು.

ಜಿಲ್ಲೆಯಲ್ಲಿ 506 ಗ್ರಾಮ ಪಂಚಾಯಿತಿಗಳಿವೆ. 630 ಅಂಚೆ ಕಚೇರಿಗಳಿವೆ. ಪ್ರಸ್ತುತ 80ಸಾವಿರಕ್ಕೂ ಹೆಚ್ಚಿನ ಮಂದಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು