ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆಬಾವಿಯಲ್ಲಿ ನೀರು ಸಿಗದಿದ್ದರೆ ಕಾಯಿರಿ

Last Updated 12 ಏಪ್ರಿಲ್ 2019, 20:39 IST
ಅಕ್ಷರ ಗಾತ್ರ

ದಾವಣಗೆರೆ: ಕೊಳವೆ ಬಾವಿಯಲ್ಲಿ ನೀರು ಸಿಕ್ಕಿಲ್ಲ ಎಂದ ತಕ್ಷಣ ಕೇಸಿಂಗ್‌ ಪೈಪ್‌ ತೆಗೆದು ಮುಚ್ಚಿ ಬಿಡಬೇಡಿ. ಕನಿಷ್ಠ ಒಂದು ವಾರ ಕಾಯಿರಿ. ನೀರು ಬರುವ ಸಾಧ್ಯತೆ ಇದೆ ಎಂದು ಜಲ ಮರುಪೂರಣ ತಜ್ಞ ದೇವರಾಜ ರೆಡ್ಡಿ ಸಲಹೆ ನೀಡಿದ್ದಾರೆ.

ಅವರು ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು.

ಹಿಂದೆ ಕೊಳವೆಬಾವಿಯನ್ನು ನಿಧಾನವಾಗಿ ಕೊರೆಯಲಾಗುತ್ತಿತ್ತು. ಒಂದು ರಾಡ್‌ ಇಳಿಸಲು ಒಂದು ಗಂಟೆ ಬೇಕಿತ್ತು. ಈಗ ಎಲ್ಲವೂ ವೇಗವಾಗಿದೆ. ಐದೇ ನಿಮಿಷಕ್ಕೆ ರಾಡ್‌ ಇಳಿಸಲು ಸಾಧ್ಯವಾಗುತ್ತದೆ. ಆಗ ಅರ್ಧ ಇಂಚು, ಒಂದಿಂಚು ನೀರು ಸಿಕ್ಕಿದರೂ ಅದು ಹೊರಹಾಕುವ ಮಣ್ಣಿನ ದೂಳಿನೊಂದಿಗೆ ಬಂದು ಬಿಡುತ್ತದೆ. ಮಣ್ಣು ಕೆಸರಾದಂತೆ ಕಂಡರೂ ನೀರಿಲ್ಲ ಎಂದು ನಿರ್ಧರಿಸಿಬಿಡುವ ಅಪಾಯ ಇದೆ. ಒಂದಿಂಚು ನೀರು ಸಿಕ್ಕಿದರೆ ಒಂದು ಎಕರೆ ಜಾಗಕ್ಕೆ ಸಾಕಾಗುತ್ತದೆ.

ತಮಿಳುನಾಡಿನಲ್ಲಿ ಈ ಬಗ್ಗೆ ಕಾನೂನು ಇದೆ. ಕೊಳವೆಬಾವಿ ತೆಗೆದ ಬಳಿಕ ಕೇಸಿಂಗ್‌ ಪೈಪ್‌ ತೆಗೆಯಬೇಕಿದ್ದರೆ ಒಂದು ವಾರ ಕಾಯಲೇಬೇಕು. ಯಾಕೆಂದರೆ ಆಮೇಲೂ ಒರತೆಯ ಬರಬಹುದು.

ನೀರು ಸಿಗದ ಕೊಳವೆಬಾವಿಗೆ ಒಂದು ಟ್ಯಾಂಕರ್‌ ನೀರು ಬಿಡಬೇಕು. ಆ ನೀರನ್ನು ಕೊಳವೆಬಾವಿ ಹಿಡಿದಿಟ್ಟುಕೊಂಡರೆ ಅಲ್ಲಿ ನೀರು ಸಿಗಲು ಅವಕಾಶ ಇದೆ ಎಂದರ್ಥ. ನೀರು ಮರುಪೂರಣ ಮಾಡಲೂ ಸಾಧ್ಯವಿದೆ. ನೀರು ಹಿಡಿದಿಟ್ಟುಕೊಳ್ಳದಿದ್ದರೆ ಅಲ್ಲಿ ನೀರು ಮರುಪೂರಣವೂ ಸಾಧ್ಯವಿಲ್ಲ.

ಕೊಳವೆಬಾವಿ ವಿಫಲವಾಗುತ್ತಿದ್ದಂತೆ ಇನ್ನೊಂದು ತೆಗೆಯುತ್ತಾ ಹೋದರೆ ಹಣವೂ ವ್ಯರ್ಥ. ಭೂಮಿಯಲ್ಲೆಲ್ಲ ರಂಧ್ರವಾಗುತ್ತದೆ. ನೀರಿನ ಕಣ್ಣುಗಳನ್ನೆಲ್ಲ ಬಂದ್‌ ಮಾಡಿದಂತಾಗುತ್ತದೆ. ಅದರ ಬಗ್ಗೆ ಸೂಕ್ಷ್ಮ ಕಣ್ಣುಗಳು ನಮಗೆ ಇರಬೇಕು.

ವಿಫಲ ಕೊಳವೆಬಾವಿಗಳನ್ನು ಮುಚ್ಚಿಸುವ ಬದಲು ಉಳಿಸಲು ಪ್ರಯತ್ನ ಪಡಬೇಕು. ವಿಫಲವಾದ ಶೇ 80ರಷ್ಟು ಕೊಳವೆಬಾವಿಗಳನ್ನು ಮರುಪೂರಣ ಮೂಲಕ ಸಫಲಗೊಳಿಸಲು ಸಾಧ್ಯವಿದೆ. ಶೇ 20ರಷ್ಟು ಮಾತ್ರ ಮತ್ತೆ ಬಳಕೆಗೆ ಸಾಧ್ಯವಾಗುವುದಿಲ್ಲ.

ರೆಡ್ಡಿ ಹೇಳಿದ ಯಶೋಗಾಥೆಗಳು

ಹುಣಿಸೆಕೆರೆ ಮಲ್ಲೇಶಪ್ಪ ಎಂಬವರು 2001ರಿಂದ 2003ರ ನಡುವೆ ತಮ್ಮ 3 ಎಕರೆ ಜಮೀನಲ್ಲಿ ಏಳು ಕೊಳವೆಬಾವಿ ಕೊರೆಸಿದ್ದರು. ಏಳು ಕೂಡ ವಿಫಲವಾಗಿದ್ದವು. ಅವರು ಕೊಳವೆಬಾವಿಗಳ ಬಾಯಿ ಮುಚ್ಚಿ ಮೇಲಿಂದಷ್ಟೇ ಮಣ್ಣು ಹಾಕಿದ್ದರು. 2015ರಲ್ಲಿ ಅವರು ಈ ವಿಚಾರ ತಿಳಿಸಿದಾಗ ಎಲ್ಲಿದೆ ಬೋರು ಎಂದು ನಾನು ಹೋದೆ. ಅವರು ಮೇಲಿನ ಮಣ್ಣು ತೆಗೆದು ಅದರ ಬಾಯಿಯ ಮುಚ್ಚಳ ತೆಗೆದು ನೋಡಿದಾಗ ಕೇವಲ 50 ಅಡಿಯಲ್ಲಿ ನೀರಿತ್ತು. ಆನಂತರ ನೀರು ಎತ್ತಲು ಆರಂಭಿಸಿದರು.

ಮಾಯಕೊಂಡ ಹೊನ್ನನಾಯಕನಹಳ್ಳಿ ಆನಂದನಾಯ್ಕ ಅವರು ತಮ್ಮ ಜಮೀನಿನಲ್ಲಿ 12–13 ಕೊಳವೆಬಾವಿ ಕೊರೆಸಿದರೂ ನೀರು ಸಿಕ್ಕಿರಲಿಲ್ಲ. ಕೊನೆಗೆ 4 ಲಕ್ಷ ವಿಮೆ ಮಾಡಿಸಿ ಸಾಯುವುದು ಎಂದು ಅವರು ನಿರ್ಧರಿಸಿದ್ದರು. ಇದರ ನಡುವೆ ನನ್ನ ಸಂಪರ್ಕಕ್ಕೆ ಬಂದಿದ್ದರಿಂದ ನೀರು ಮರುಪೂರಣ ಮಾಡುವ ಸಲಹೆ ನೀಡಿದೆ. ₹ 30 ಸಾವಿರ ಖರ್ಚು ಮಾಡಿ ನೀರು ಮರುಪೂರಣ ಮಾಡಿದರು. ಸಾಯಲು ಹೊರಟವರ ಬದುಕೇ ಬದಲಾಗಿ ಹೋಯಿತು. ನಾನಾ ಬೆಳೆಗಳನ್ನು ಆದಾಯ ಗಳಿಸುತ್ತಿದ್ದಾರೆ. ಕೃಷಿ ‍ಪಂಡಿತ ಸಹಿತ ಹಲವು ಪ್ರಶಸ್ತಿ ಪಡೆದಿದ್ದಾರೆ.

ಚನ್ನಗಿರಿ ತಾಲ್ಲೂಕು ಲಿಂಗದಹಳ್ಳಿ ಸಿದ್ಧಾರ್ಥ ಅವರು ತನ್ನ 24 ಎಕರೆ ಭೂಮಿಯಲ್ಲಿ 16 ಬೋರುವೆಲ್‌ ತೋಡಿಸಿದ್ದರು. ಆದರೆ ನೀರು ಸಿಕ್ಕಿರಲಿಲ್ಲ. ಅಲ್ಲಿ ಐದು ಬೋರ್‌ವೆಲ್‌ಗಳನ್ನು ಮರುಪೂರಣ ಮಾಡಲಾಯಿತು. ಈಗ ಬೇಕಾದಷ್ಟು ನೀರು ಇದೆ.

ಕುಂದಾಪುರ ತಾಲ್ಲೂಕು ಮೂಡುಗೋಪಾಡಿಯಲ್ಲಿ ಬಾಲಕೃಷ್ಣ ಪೈ ಎಂಬವರು ಮೂರು ಮನೆ ಬಾಡಿಗೆ ನೀಡಿದ್ದಾರೆ. ಅವರಿಗೆ ನೀರಿನ ಸಮಸ್ಯೆ ಇತ್ತು. ಮನೆ ಚಾವಣಿಯ ಮಳೆ ನೀರನ್ನೇ ಸಂಗ್ರಹಿಸಿ ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ ಮಾಡಿದರು. ಈಗ ನೀರಿನ ಸಮಸ್ಯೆ ಇಲ್ಲ. ಮಳೆ ನೀರನ್ನು ಬಾವಿ, ಕೆರೆಗಳಿಗೆ ಬಿಡುವಾಗ ಸ್ವಲ್ಪ ಎಚ್ಚರ ವಹಿಸಿದರೆ ಆಯಿತು. ಮಳೆ ಆರಂಭವಾದ ಸ್ವಲ್ಪ ಹೊತ್ತು ಬಿಡಬೇಕು. ಕಲುಷಿತ ನೀರು ಹೋದ ಮೇಲೆ ಒಳ್ಳೆಯ ನೀರನ್ನು ಕಸಕಡ್ಡಿ, ಎಲೆಗಳು ಬೀಳದಂತೆ ಎಚ್ಚರವಹಿಸಿ ನೀರು ತುಂಬಬೇಕು.

ಚನ್ನಗಿರಿಯಲ್ಲಿ ಜ್ಞಾನೋದಯ

‘2000ನೇ ಇಸವಿವರೆಗೆ ನೀರು ಪಾಯಿಂಟ್‌ ಹೇಳುತ್ತಿದ್ದೆ. ಆನಂತರ ನಿಲ್ಲಿಸಿದೆ. ಅಲ್ಲಿಂದ ನೀರು ಮರುಪೂರಣದ ಬಗ್ಗೆ ಜಾಗೃತಿ ಉಂಟು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡೆ. ಅದಕ್ಕೆ ಚನ್ನಗಿರಿಯಲ್ಲಿ ಆದ ಜ್ಞಾನೋದಯ ಕಾರಣ’ ಎಂದು ಎನ್‌.ಜೆ. ದೇವರಾಜ ರೆಡ್ಡಿ ಅನುಭವ ಹಂಚಿಕೊಂಡರು.

ಕೊಳವೆಬಾವಿ ತೋಡಲು 25 ಸಾವಿರಕ್ಕೂ ಅಧಿಕ ಪಾಯಿಂಟ್‌ ನಾನು ಹೇಳಿರಬಹುದು. ಚನ್ನಗಿರಿಯಲ್ಲಿ ಸಮೃದ್ಧ ನೀರು ಸಿಗುತ್ತಿತ್ತು. ಕೊಳವೆಬಾವಿ ಕೊರೆಯುವ 65 ಮೆಶಿನ್‌ಗಳು ಆ ತಾಲ್ಲೂಕು ಒಂದರಲ್ಲಿಯೇ ಇದ್ದವು. ಆದರೂ ಬೇಡಿಕೆ ಇನ್ನಷ್ಟು ಇದ್ದವು. ನಾನು ತೋರಿಸಿದ ಜಾಗಗಳಲ್ಲೆಲ್ಲ ಬೇಕಾದಷ್ಟು ನೀರು ಸಿಗುತ್ತಿದ್ದವು. ಹಾರ ತಂದು ಹಾಕುವುದು, ಸಿಹಿ ಹಂಚುವುದೆಲ್ಲ ರೈತರು ಮಾಡುತ್ತಿದ್ದರು. ಆದರೆ ಒಂದುವಾರ, 15 ದಿನಗಳನ್ನು ಬಿಟ್ಟು ನೋಡಿದರೆ ನೀರು ಖಾಲಿ ಆಗುತ್ತಿದ್ದವು. 5 ಇಂಚು ನೀರು ಸಿಕ್ಕಿದ್ದು ಇಷ್ಟು ಬೇಗ ನಿಂತು ಹೋಯಿತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಬಳಿಕ ಅದರ ಅಧ್ಯಯನ ಮಾಡಬೇಕಾಯಿತು.

ಮಳೆ ನೀರು ನೇರವಾಗಿ ಅಂತರ್ಜಲ ಸೇರಲ್ಲ. ಹಾಗೆಯೇ ಭೂಮಿಯೊಳಗೆ ಸಾಗರ, ನದಿ, ಹೊಳೆಗಳಂತೆ ನೀರು ಹರಿಯುತ್ತಿರುತ್ತದೆ ಎಂಬ ನಂಬಿಕೆ ಕೂಡ ಸರಿಯಾದುದು ಅಲ್ಲ. ಶಿಲೆಗಳ ನಡುವೆ ಇರುವ ಬಿರುಕು, ಸೀಳುಗಳ ಮೂಲಕ ಒಂದೊಂದೇ ಹನಿ ನೀರು ಹೋಗಿ ಸಂಗ್ರಹವಾಗಿರುವುದೇ ಅಂತರ್ಜಲ. ಬೋರ್‌ವೆಲ್‌ ಹೆಚ್ಚೆಚ್ಚು ತೋಡಿದಷ್ಟು ನೀರು ಖಾಲಿ ಆಗುತ್ತಾ ಹೋಗುತ್ತದೆ. ಕೊಳವೆಬಾವಿಗಳನ್ನು ಮರುಪೂರಣ ಮಾಡುತ್ತಾ ಹೋದಂತೆ ಮತ್ತೆ ನೀರು ತುಂಬಿಕೊಳ್ಳುತ್ತದೆ ಎಂದು ತಿಳಿಸಿದರು.

ಜಲ ಹಾಳು ಮಾಡಿದ ಟ್ರ್ಯಾಕ್ಟರ್‌ ಸಂಸ್ಕೃತಿ

ಎತ್ತಿನ ಮೂಲಕ ಉಳುಮೆ ಮಾಡುತ್ತಿದ್ದಾಗ ನೀರಿನ ಕೊರತೆ ಅಷ್ಟೊಂದು ಇರಲಿಲ್ಲ. ಹೊಲಗದ್ದೆಗಳು ಪದರಪದರಗಳಾಗಿದ್ದವು. ಬದುಗಳಿದ್ದವು. ನೀರು ಭೂಮಿಯಲ್ಲಿ ಇಂಗುತ್ತಿತ್ತು. ಟ್ರ್ಯಾಕ್ಟರ್‌ ಉಳುಮೆ ಆರಂಭಗೊಂಡಾಗ ಎಲ್ಲ ಹೊಲಗದ್ದೆಗಳನ್ನು ಒಂದೇ ಸಮತಟ್ಟು ಮಾಡತೊಡಗಿದರು. ನೀರು ಇಂಗುವುದು ಕಡಿಮೆ ಆಯಿತು.

ಭೂ ವಿಜ್ಞಾನಿಗಳ ಕೊರತೆ

ರಾಜ್ಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇದೆ. ಆದರೆ ಭೂ ವಿಜ್ಞಾನಿಗಳ ಕೊರತೆ ಇದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಭೂವಿಜ್ಞಾನ ಅಧ್ಯಯನಕ್ಕೆ ಅವಕಾಶ ಇದೆ. ಆದರೆ ಬರುವವರೆಲ್ಲ ಕೇರಳಿಗರೇ ಆಗಿದ್ದಾರೆ. 80 ಸೀಟ್‌ನಲ್ಲಿ 75 ಅವರೇ ಇದ್ದಾರೆ.

ಭೂವಿಜ್ಞಾನಿಗಳು ಕಡ್ಡಿ ಹಿಡಿದು ನೀರಿನ ಬಗ್ಗೆ ಹೇಳುವುದಿಲ್ಲ. ಅವರು ಭೂಮಿ ಸ್ಕ್ಯಾನ್‌ ಮಾಡಿ ನೋಡಿ ಹೇಳುತ್ತಾರೆ. ಹಾಗಾಗಿ ಶೇ 95ರಷ್ಟು ಯಶಸ್ವಿಯಾಗುತ್ತಾರೆ. ಶೇ 5ರಷ್ಟು ಮಾತ್ರ ವಿಫಲವಾಗುತ್ತದೆ.

ಜಲ ಹಾಳು ಮಾಡಿದ ಟ್ರ್ಯಾಕ್ಟರ್‌ ಸಂಸ್ಕೃತಿ

ಎತ್ತಿನ ಮೂಲಕ ಉಳುಮೆ ಮಾಡುತ್ತಿದ್ದಾಗ ನೀರಿನ ಕೊರತೆ ಅಷ್ಟೊಂದು ಇರಲಿಲ್ಲ. ಹೊಲಗದ್ದೆಗಳು ಪದರಪದರಗಳಾಗಿದ್ದವು. ಬದುಗಳಿದ್ದವು. ನೀರು ಭೂಮಿಯಲ್ಲಿ ಇಂಗುತ್ತಿತ್ತು. ಟ್ರ್ಯಾಕ್ಟರ್‌ ಉಳುಮೆ ಆರಂಭಗೊಂಡಾಗ ಎಲ್ಲ ಹೊಲಗದ್ದೆಗಳನ್ನು ಒಂದೇ ಸಮತಟ್ಟು ಮಾಡತೊಡಗಿದರು. ನೀರು ಇಂಗುವುದು ಕಡಿಮೆ ಆಯಿತು.

ಅಂತರ್ಜಲ, ಮಳೆ ನೀರು ಪರಿಶುದ್ಧ

ಮಳೆ ನೀರು ಪರಿಶುದ್ಧವಾದುದು. ಅದನ್ನು ಕುಡಿಯಲು ಬಳಸಬಹುದು. ಮನೆಯ ಚಾವಣಿ ಮೇಲೆ ಬೀಳುವ ನೀರನ್ನು ಸಣ್ಣಮಟ್ಟದ ಸೋಸುವಿಕೆ ಬಳಸಿಕೊಂಡು ಕೆರೆಗೆ, ಬಾವಿಗೆ, ಸಂಪ್‌, ಕೊಳವೆಬಾವಿಗೆ ಬಿಡಬಹುದು. ಇದ್ಯಾವುದಕ್ಕೂ ಬೇಡದಿದ್ದರೆ ಇಂಗುಗುಂಡಿ ಮಾಡಿ ನೀರು ಇಂಗಿಸಬಹುದು. ತಮಿಳುನಾಡಿನ ಚೆನ್ನೈಯಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ನಿಯಮ ಇದೆ. ಹಾಗಾಗಿ ಅಲ್ಲಿ ಚಾವಣಿ ನೀರು ಸಂಗ್ರಹಿಸುತ್ತಾರೆ. ಕರ್ನಾಟಕದಲ್ಲಿಯೂ ಕ್ರಮೇಣ ಈ ನಿಯಮ ಬರಬಹುದು.

ಕೊಳವೆಬಾವಿ ನೀರಿನಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುವುದನ್ನು ಕಾಣುತ್ತೇವೆ. ಆದರೆ ಅಂತರ್ಜಲ ಶುದ್ಧವಾಗಿರುತ್ತದೆ. ಅದರಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುವುದಿಲ್ಲ. ಆದರೆ ನಾವು ತೋಡುವ ಕೊಳವೆಬಾವಿಗಳಿಗೆ ಅಳವಡಿಸಿದ ಕೇಸಿನ್‌ ಪೈಪ್‌ಗಳ ಮೂಲಕ ಕಬ್ಬಿಣದ ಅಂಶ ಸೇರಿಕೊಳ್ಳುತ್ತದೆ. ಆರಂಭದಲ್ಲಿ ಒಳ್ಳೆಯ ನೀರು ಸಿಕ್ಕಿದರೂ ಸಮಯ ಕಳೆದಂತೆ ಕಬ್ಬಿಣದಂಶ ಜಾಸ್ತಿಯಾಗುತ್ತದೆ. ಗುಣಮಟ್ಟದ ಕೇಸಿನ್‌ ಪೈಪ್‌ ಅಳವಡಿಸಿದರೆ ಈ ಸಮಸ್ಯೆಯ ಕಡಿಮೆಯಾಗುತ್ತದೆ. ನೀರು ಮರುಪೂರಣದ ಮೂಲಕ ನೀರು ಗಡಸು ಆಗುವುದನ್ನು ತಪ್ಪಿಸಲು ಸಾಧ್ಯ.

ನೀರು ಗೆಲ್ಲದೇ ನೀವು ಗೆಲ್ಲಲಾರಿರಿ

ನೀರನ್ನು ಗೆಲ್ಲುವುದು ಬಹಳ ಮುಖ್ಯ. ನೀರಿಗೆ ಬೋರ್‌ವೆಲ್‌ ಅನಿವಾರ್ಯವಲ್ಲ. ಕೃಷಿ ಹೊಂಡ, ಮಳೆ ನೀರು ಬಳಕೆ, ಚೆಕ್‌ಡ್ಯಾಂ, ಟ್ರೆಂಚ್‌ ಕಮ್‌ ಬಂಡ್‌ (ಉದಿ–ಬದು), ಮರುಪೂರಣಗಳ ಮೂಲಕ ನೀರನ್ನು ಗೆಲ್ಲಬಹುದು.

ಹೊಸದುರ್ಗದಂಥ ಒಂದು ತಾಲ್ಲೂಕನ್ನು ನೋಡಿದರೆ 2 ವರ್ಷ ಮಳೆ ಸರಾಸರಿಗಿಂತ ಬಹಳ ಕಡಿಮೆ ಇರುತ್ತದೆ. 4 ವರ್ಷ ಸರಾಸರಿಯಲ್ಲಿ ಇರುತ್ತದೆ. ಮತ್ತೆರಡು ವರ್ಷ ಸರಾಸರಿಗಿಂತ ಹೆಚ್ಚು ಮಳೆ ಇರುತ್ತದೆ. ಇವುಗಳನ್ನು ಅಧ್ಯಯನ ಮಾಡಿ ಆ ಮಳೆ ನೀರನ್ನು ವ್ಯರ್ಥವಾಗದಂತೆ ಹೇಗೆ ಬಳಸಬಹುದು ಎಂದು ಯೋಚಿಸಿದರೆ ಪರಿಹಾರ ಕಂಡುಕೊಳ್ಳಬಹುದು. ಒಮ್ಮೆಲೆ ಜೋರಾಗಿ ಸುರಿಯುವ ಮಳೆಗಿಂತ ನಿಧಾನಕ್ಕೆ ಹೆಚ್ಚು ಸಮಯ ಸುರಿಯುವ ಮಳೆಯಲ್ಲಿ ನೀರು ಇಂಗುವುದು ಹೆಚ್ಚು.

ಇಂಗು ಗುಂಡಿ ಮುಖ್ಯ

ಕರ್ನಾಟಕವು ಗಟ್ಟಿ ಶಿಲಾ ವಲಯವಾಗಿದೆ. ಇಲ್ಲಿ ವೈಜ್ಞಾನಿಕವಾಗಿ ಇಂಗುಗುಂಡಿಗಳನ್ನು ಮಾಡಿದರೆ ಅಂತರ್ಜಲ ಹೆಚ್ಚುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಂಜುಶ್ರೀ ಅವರು ಸಿಇಒ ಆಗಿದ್ದ ಸಮಯದಲ್ಲಿ ಕುಡಿಯುವ ನೀರಿನ ಬಳಕೆಯ ಕೊಳವೆಬಾವಿಗಳನ್ನು ಜಲಮರುಪೂರಣ ಮಾಡಲಾಯಿತು. ಒಂದೇ ವರ್ಷದಲ್ಲಿ 5 ಸಾವಿರ ಕೊಳವೆಬಾವಿಗಳು ಮರುಪೂರಣಕ್ಕೆ ಸಿದ್ಧವಾದವು. ಕೆಲವು ಸಣ್ಣಪುಟ್ಟ ಲೋಪ ಬಿಟ್ಟರೆ ಯಶಸ್ವಿಯಾಯಿತು.

ಬೋರ್‌ವೆಲ್‌ಗಿಂತ 30 ಅಡಿ ದೂರಲ್ಲಿ ಹೊಂಡ, ಕೃಷಿ ಹೊಂಡಗಳನ್ನು ಮಾಡಬೇಕು. ಅದರಲ್ಲಿ ನೀರು ತುಂಬಿದ ಬಳಿಕ ಬೋರ್‌ವೆಲ್‌ ಕಡೆಗೆ ನೀರು ಹರಿಯುವಂತೆ ಮಾಡಬೇಕು. ಬೋರ್‌ವೆಲ್‌ನ ಸುತ್ತ 8 ಅಡಿ ಆಳ, 8 ಅಡಿ ಉದ್ದ, 8 ಅಡಿ ಅಗಲದಲ್ಲಿ ಇಂಗುಗುಂಡು ನಿರ್ಮಿಸಬೇಕು. ದೊಡ್ಡಕಲ್ಲು, ಸಣ್ಣ ಕಲ್ಲು, ಜಲ್ಲಿ, ಮರಳು ಬಳಸಿ ನೀರು ಶುದ್ಧವಾಗುವಂತೆ ಮಾಡಬೇಕು. ಆ ನೀರು ಕೊಳವೆ ಬಾವಿಯೊಳಗೆ ಇಳಿಯಬೇಕು ಎಂದು ವಿವರಿಸಿದರು.

70ರ ದಶಕದಲ್ಲಿ ಆರಂಭ

70ರ ದಶಕದಲ್ಲಿ ಬಿ.ಪಿ. ರಾಧಾಕೃಷ್ಣ ಅವರ ಮೂಲಕ ಬೋರ್‌ವೆಲ್‌ ಸಂಸ್ಕೃತಿ ಆರಂಭಗೊಂಡಿತು. ಆರು ಅಡಿಯ ಬಾವಿಗಿಂತ 6 ಇಂಚಿನಲ್ಲಿ ನೀರು ಪಡೆಯಬಹುದು ಎಂದು ತೋರಿಸಿದರು. ಡೆನ್ಮಾರ್ಕ್‌ ಸರ್ಕಾರ ಇದಕ್ಕೆ ಬೆಂಬಲ ನೀಡಿತು. ಮೊದಲ ಬಾರಿ ರಿಗ್‌ ಬಂತು. ಅದರಲ್ಲಿ 24 ಮೀಟರ್‌ ಅಷ್ಟೇ ಕೊರೆಯಬಹುದಿತ್ತು. ಅದಕ್ಕೆ 2 ದಿನಗಳು ಹಿಡಿಯುತ್ತಿದ್ದವು. ಆನಂತರ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮನದಟ್ಟು ಮಾಡಲಾಯಿತು. ಹಾಗಾಗಿ 100ಕ್ಕೂ ಅಧಿಕ ಭೂವಿಜ್ಞಾನಿಗಳನ್ನು ಏಕಕಾಲದಲ್ಲಿ ನೇಮಕ ಮಾಡಿಕೊಳ್ಳಲಾಯಿತು. ಗಣಿ ಮತ್ತು ಅಂತರ್ಜಲ ಇಲಾಖೆ ಆರಂಭಗೊಂಡಿತು.

ಜಲಾಶಯ ಬಳಿಯ ಬೋರ್‌ವೆಲ್‌ನಲ್ಲೇ ನೀರಿಲ್ಲ

ಜಲಾಶಯ, ಕೆರೆಗಳ ಪಕ್ಕದಲ್ಲಿರುವ ಎಲ್ಲಾ ಕೊಳವೆಬಾವಿಗಳಲ್ಲೂ ನೀರು ಬರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇಂಗುವ ನೀರು ಕೊಳವೆಬಾವಿಯ ಜಲಸ್ತರದ (ಅಕ್ವಿಫರ್‌) ಜೊತೆಗೆ ಸಂಪರ್ಕ ಹೊಂದಿದ್ದರೆ ಮಾತ್ರ ನೀರು ಸಿಗಲಿದೆ ಎಂದು ಜಲತಜ್ಞ ದೇವರಾಜ ರೆಡ್ಡಿ ಅಭಿಪ್ರಾಯಪಟ್ಟರು.

‘ತುಂಗಭದ್ರಾ ಜಲಾಶಯದಲ್ಲಿ ನೀರು ಕಡಿಮೆಯಾದಾಗ ರೈತರು ಕಲ್ಲಂಗಡಿಯಂತಹ ಬೇಸಿಗೆ ಬೆಳೆ ಬೆಳೆಯಲು ಮುಂದಾಗುತ್ತಾರೆ. ಕೊಳವೆಬಾವಿ ಕೊರೆಸಿದರೆ ನೀರು ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ರೈತರು ನನ್ನನ್ನು ಬೋರ್‌ ಪಾಯಿಂಟ್‌ ಮಾಡಿಸಲು ಕರೆದುಕೊಂಡು ಹೋಗಿದ್ದರು. ಪರಿಶೀಲಿಸಿದ ಬಳಿಕ ಇಲ್ಲಿ 800 ಅಡಿಗೂ ನೀರು ಸಿಗಲ್ಲ ಎಂದು ಹೇಳಿದೆ. ಆದರೆ, ಆಶ್ಚರ್ಯಪಟ್ಟ ರೈತರು, ನೀವು ನಿಂತಿರುವುದು ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶ. ಇಲ್ಲಿ 50 ಅಡಿ ನೀರು ನಿಲ್ಲುತ್ತದೆ. ಇಲ್ಲೇ ನೀರು ಬೀಳುವುದಿಲ್ಲ ಎನ್ನುತ್ತಿದ್ದೀರಲ್ಲ ಎಂದು ಪ್ರಶ್ನಿಸಿದರು. ನಾನು ಒಂದು ಕಿ.ಮೀ ಸುತ್ತಲೂ ನೀರು ಸಿಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ನನ್ನ ಮಾತು ಕೇಳದೇ ಯಾರದ್ದೋ ಸಲಹೆ ಪಡೆದು ಕೊಳವೆಬಾವಿ ಕೊರೆಸಿದರು. ಬರಿ ಪೌಡರ್‌ ಬಂತೇ ವಿನಾ ನೀರು ಸಿಗಲಿಲ್ಲ’ ಎಂದು ತಮ್ಮ ಅನುಭವ ಹಂಚಿಕೊಂಡರು.

ಜಲಾಶಯಕ್ಕೂ ಅಂತರ್ಜಲಕ್ಕೂ ಸಂಬಂಧವಿಲ್ಲ. ಕಲ್ಲಿನಲ್ಲಿ ಪೊಟರೆಗಳಿದ್ದರೆ ಅವು ಜಲಸ್ತರಗಳ ಮೂಲಕ ಹೋಗಿ ಅಂತರ್ಜಲ ಮಟ್ಟ ಹೆಚ್ಚಾಗಬಹುದು. ಆದರೆ, ಜಲಸ್ತರಗಳೇ ಇಲ್ಲದಿದ್ದರೆ ನೀರಿನ ಮಟ್ಟ ಹೆಚ್ಚಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಷ್ಟೋ ವರ್ಷಗಳ ಹಿಂದೆ ಶೇಖರಣೆಗೊಂಡಿರುವ ನೀರು ಕೊಳವೆಬಾವಿಗಳಲ್ಲಿ ಸಿಗುತ್ತವೆ. ಕೆರೆಗಳಲ್ಲಿ ನೀರು ತುಂಬಿಸಿದ ತಕ್ಷಣ ಎಲ್ಲಾ ಕೊಳವೆಬಾವಿಗಳೂ ಮರುಪೂರಣಗೊಳ್ಳುವುದಿಲ್ಲ. ಮಳೆ, ಕೆರೆ ಹಾಗೂ ಜಲಸ್ತರಗಳಿಗೆ ನೇರವಾಗಿ ಸಂಪರ್ಕ ಇರುವುದಿಲ್ಲ ಎಂದರು.

‘ಜಲದ ಕಣ್ಣು ಮುಚ್ಚಬೇಡಿ’

‘ಕೊಳವೆಬಾವಿ ಕೊರೆಸುವಾಗ ಸಡಿಲ ಮಣ್ಣು ಇರುವವರೆಗೂ ಕೇಸಿಂಗ್‌ ಪೈಪ್‌ಗಳನ್ನು ವಿಜ್ಞಾನಿಗಳು ಹಾಕಿಸುತ್ತಿದ್ದಾರೆ. ಕಲ್ಲು ಬಂದ ಬಳಿಕ ಕೇಸಿಂಗ್‌ ಪೈಪ್‌ ನಿಲ್ಲಿಸಲಾಗುತ್ತಿದೆ. 80 ಅಡಿವರೆಗೂ ಮಣ್ಣು ಸ್ಪಂಜಿನಂತೆ ಇರಲಿದ್ದು, ಇದು ನೀರನ್ನು ಹೀರಿಕೊಳ್ಳುತ್ತದೆ. ಇಲ್ಲಿ ಕೇಸಿಂಗ್‌ ಪೈಪ್‌ ಹಾಕಿ, ಜಲದ ಸಣ್ಣ ಸಣ್ಣ ಕಣ್ಣುಗಳನ್ನು ಮುಚ್ಚುತ್ತಿದ್ದೇವೆ’ ಎಂದು ದೇವರಾಜ ರೆಡ್ಡಿ ಹೇಳಿದರು.

‘ಕಲ್ಲು ಬಂಡೆಗಳಲ್ಲಿರುವ ನೀರನ್ನು ಹುಡುತ್ತಿದ್ದೇವೆ. ಅದರ ಬದಲು ನೀರು ಒಳಗೆ ಹೋಗುವಂತಹ ರಂಧ್ರ ಇರುವ ಕೇಸಿಂಗ್‌ ಪೈಪ್‌ಗಳನ್ನು ಹಾಕಿದರೆ ಮಳೆನೀರು ಇಂಗಿ ಅರ್ಧ ಇಂಚು ನೀರಾದರೂ ಕೊಳವೆಬಾವಿಗಳಲ್ಲಿ ಬರಲು ಸಾಧ್ಯವಿದೆ. ಇರುವ ಹಳೆಯ ಕೇಸಿಂಗ್‌ ಪೈಪ್‌ಗಳ ಒಳಗೆ ಯಂತ್ರವನ್ನು ಬಿಟ್ಟು ಸಣ್ಣ ಸಣ್ಣ ರಂದ್ರ ಮಾಡುವ ಹೊಸ ತಂತ್ರಜ್ಞಾನ ಬಂದಿದೆ. ರಂಧ್ರ ಮಾಡುತ್ತಿರುವಾಗಲೇ ನೀರು ಬಂದಿರುವಂತಹ ಉದಾಹರಣೆಗಳೂ ನಮ್ಮೆದುರಿಗೆ ಇವೆ. ಮೇಲ್ಪದರದ ನೀರನ್ನು ಬಿಟ್ಟು ಅಂತರ್ಜಲವನ್ನು ತೆಗೆಯಲು ಹೋಗುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಶ್ನೋತ್ತರ

* 480 ಅಡಿ ಕೊಳವೆಬಾವಿ ಕೊರೆದು ಒಂದು ವರ್ಷ ಆಯ್ತು. ಮೊದಲು ನೀರು ಇರಲಿಲ್ಲ. ಈಗ ಅರ್ಧ ಇಂಚು ನೀರು ಇದೆ. ನೀರಿನ ಸಮಸ್ಯೆ ಹೆಚ್ಚಿದೆ.

–ರಾಜು, ಶನಿವಾರಸಂತೆ, ಕೊಡಗು ಜಿಲ್ಲೆ, ಕೃಷ್ಣ, ನರಸಗೊಂಡನಹಳ್ಳಿ, ಹೊನ್ನಾಳಿ ತಾಲ್ಲೂಕು

ಇಂತಹ ಸಮಸ್ಯೆಗೆ ಉತ್ತಮ ಪರಿಹಾರ ಜಲಮರುಪೂರಣ ಮಾಡುವುದು. ಕೊಳವೆಬಾವಿಗೆ 30 ಅಡಿ ದೂರದಲ್ಲಿ ಕೃಷಿ ಹೊಂಡ ನಿರ್ಮಿಸಬೇಕು. ಕೃಷಿ ಹೊಂಡದ ನೀರು ಕೊಳವೆಬಾವಿಗೆ ಹೋಗಿ ಸಂಗ್ರಹವಾಗುವಂತಿರಬೇಕು. ಕೊಳವೆಬಾವಿ ಬಳಿ 8 ಅಡಿ ಅಗಲ, 8 ಅಡಿ ಉದ್ದ, 8 ಅಡಿ ಆಳದ ಇಂಗುಗುಂಡಿ ನಿರ್ಮಿಸಬೇಕು. ಕೊಳವೆಬಾವಿ ಕೇಸಿಂಗ್‌ ಪೈಪ್‌ಗೆ 120 ರಂಧ್ರಗಳನ್ನು ಮಾಡಬೇಕು. ಇದಕ್ಕೆ 3 ಮೆಶ್‌ ಹಾಕಬೇಕು (ಅಕ್ವಾ, ನೈಲಾನ್, ಸ್ಯಾಂಡ್‌ ಫಿಲ್ಟರ್‌ ಮೆಶ್‌ಗಳನ್ನು ಬಳಸಬೇಕು). ಬಳಿಕ ದಪ್ಪ ಕಲ್ಲು, ದಪ್ಪ ಜಲ್ಲಿ, ಮರಳು ಅಥವಾ ಸಣ್ಣ ಜಲ್ಲಿ ಬಳಸಿ ಜಲ ಮರುಪೂರಣ ವ್ಯವಸ್ಥೆ ಮಾಡಿಕೊಳ್ಳಬೇಕು. ಇದರಿಂದ 12 ಲಕ್ಷ ಲೀಟರ್‌ ನೀರು ಸಂಗ್ರಹಿಸಬಹುದು. ಹೀಗೆ ಮಾಡಿದರೆ ಕೃಷಿಯಲ್ಲಿನ ನೀರಿನ ಸಮಸ್ಯೆ ಪರಿಹರಿಸಿಕೊಳ್ಳಬಹುದು.

* ಮಳೆಗಾಲದಲ್ಲಿ ಕೊಳವೆಬಾವಿಯಲ್ಲಿ ನೀರು ಇರುತ್ತದೆ. ಆದರೆ ಬೇಸಿಗೆ ಬಂತೆಂದರೆ ನೀರು ಖಾಲಿಯಾಗುತ್ತದೆ. ಇದಕ್ಕೇನು ಪರಿಹಾರ? ಜಲ ಮರುಪೂರಣ ಮಾಡುವುದು ಹೇಗೆ?

ಅಶೋಕ್‌, ಹೊಸನಳ್ಳಿ, ಹೊಸದುರ್ಗ ತಾಲ್ಲೂಕು, ವಿನಯ್‌ ಮಾಡಲಗೆರೆ, ಹರಪನಹಳ್ಳಿ ತಾ.

ಇಂತಹ ಸಂದರ್ಭಗಳಲ್ಲಿ ಕೊಳವೆಬಾವಿಗಳಿಗೆ ರೀಚಾರ್ಜ್‌ (ಜಲಮರುಪೂರಣ) ಮಾಡಿಸುವುದು ಸೂಕ್ತ. ಹರಪನಹಳ್ಳಿಯಂತಹ ಪ್ರದೇಶಗಳಲ್ಲಿ ಜಲ ಮರುಪೂರಣ ವ್ಯವಸ್ಥೆಗೆ 8 ಅಡಿ ಆಳದ ಇಂಗುಗುಂಡಿ ನಿರ್ಮಿಸಬೇಕು ಎಂದೇನಿಲ್ಲ. 5 ಅಡಿ ಆಳ ಮಾಡಿಸಿದರೂ ಸಾಕು. ನೀರು ಕೊಳವೆಬಾವಿಗೆ ಬರುವ ಕಡೆ ಲಾವಂಚ ಬೆಳೆಸಬೇಕು. ಇದರಿಂದ ಕೊಳವೆಬಾವಿಗೆ ತಿಳಿನೀರು ಬರುತ್ತದೆ. ಲಾವಂಚಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಈ ಬಗ್ಗೆ ರೈತರು ಗಮನಹರಿಸಬೇಕು.

*ಮೂರು ಕೊಳವೆಬಾವಿ ಕೊರೆಸಿದ್ದೇನೆ. ಅದರಲ್ಲಿ ಎರಡು ಫೇಲ್‌ ಆಗಿವೆ. ಇರುವ ಒಂದು ಕೊಳವೆಬಾವಿಯಲ್ಲಿ ಸಮರ್ಪಕ ನೀರು ಬಂದಿಲ್ಲ. ಏನು ಮಾಡಬೇಕು.

–ಅಶೋಕ್‌, ನೆರಳಿನ ಕೊಪ್ಪ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

ಇಂತಹ ಕೊಳವೆಬಾವಿಗಳಿಗೆ ಜಲಮರುಪೂರಣ ಮಾಡುವುದು ಉತ್ತಮ. ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳಿ.

*ಪ್ರತಿ ಮನೆಯಲ್ಲೂ ಕೊಳವೆಬಾವಿ ಕೊರೆಸುತ್ತಿದ್ದಾರೆ. ಮಲೆನಾಡಿನಂತಹ ಪ್ರದೇಶಗಳಲ್ಲೂ ನೀರಿನ ಸಮಸ್ಯೆ ಇದೆ. ನೀರು ಉಳಿಸುವ ಬಗೆ ಹೇಗೆ?

ಗೋವಿಂದಪ್ಪ, ಶಿವಮೊಗ್ಗ ನಗರ

ಯಥೇಚ್ಛವಾಗಿ ಮಳೆ ಬೀಳುವ ಮಲೆನಾಡಿನಂತಹ ಪ್ರದೇಶಗಳಲ್ಲಿ ಕೊಳವೆಬಾವಿ ಕೊರೆಸುವುದಕ್ಕಿಂತ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳುವುದು ಹೆಚ್ಚು ಸೂಕ್ತ. ನೀರಿನ ಸಮಸ್ಯೆಗೆ ಕೊಳವೆಬಾವಿ ಕೊರೆಸುವುದು ಒಂದೇ ಪರಿಹಾರವಲ್ಲ. ಇತರ ವಿಧಾನಗಳತ್ತಲೂ ಜನರು ಗಮನ ಹರಿಸಬೇಕು. ಮಳೆ ನೀರು ಅತ್ಯಂತ ಶುದ್ಧ. ನನ್ನ ಮನೆಯ ಹಾಲ್‌ನಲ್ಲಿಯೇ 50 ಸಾವಿರ ಲೀಟರ್‌ ಸಾಮರ್ಥ್ಯದ ಮಳೆ ನೀರು ಸಂಗ್ರಹದ ಟ್ಯಾಂಕ್‌ ನಿರ್ಮಿಸಿ 9 ವರ್ಷಗಳಿಂದ ಮಳೆ ನೀರನ್ನೇ ಕುಡಿಯುತ್ತಿದ್ದೇನೆ. ಇನ್ನೂ ಖಾಲಿಯಾಗಿಲ್ಲ.

*ಆಗುಂಬೆಯಂತಹ ಮಳೆ ಬೀಳುವ ಪ್ರದೇಶದಲ್ಲೂ ಎರಡು ದಿನಕ್ಕೊಮ್ಮೆ ನೀರು ಬರುತ್ತಿದೆ.

–ಶ್ರೀಪಾಲ್‌ ಹೆಗಡೆ, ಆಗುಂಬೆ

ಇಂದು ಎಲ್ಲೆಡೆ ನೀರಿನ ಸಮಸ್ಯೆ ಹೆಚ್ಚಿದೆ. ಇದಕ್ಕೆ ನಾವು ಎಚ್ಚೆತ್ತುಕೊಂಡು ಜಲ ಮರುಪೂರಣ, ಮಳೆ ನೀರು ಸಂಗ್ರಹದಂತಹ ವಿಧಾನ ಅಳವಡಿಸಿಕೊಳ್ಳಬೇಕು.

*ಗ್ರಾಮದಲ್ಲಿ ಕುಡಿಯುವ ನೀರು ರುಚಿ ಇಲ್ಲ. ಉಪ್ಪು ನೀರು ಬರುತ್ತಿದೆ.

–ಚಂದ್ರಪ್ಪ, ಹುಣಸವಾಡಿ, ಶಿವಮೊಗ್ಗ

ಇಂತಹ ನೀರನ್ನು ಮೊದಲು ಪರೀಕ್ಷೆಗೆ ಒಳಪಡಿಸಬೇಕು. ನೀರಿನಲ್ಲಿ ಲವಣಾಂಶ ಇದೆಯೇ, ಕುಡಿಯಲು ಯೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷೆ ಮಾಡಿಯೇ ನೋಡಬೇಕು. ಹತ್ತಿರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿ, ಬಳಿಕ ವರದಿ ನೀಡಿದರೆ ಸಮಸ್ಯೆ ಪತ್ತೆ ಹಚ್ಚಬಹುದು.

*800 ಅಡಿ ಆಳ ಕೊರೆದರೂ ಕೊಳವೆಬಾವಿ ಫೇಲ್‌ ಆಗುತ್ತಿದೆ. ಅಂತರ್ಜಲ ಕುಸಿತಕ್ಕೆ ಕಾರಣ ಏನು?

–ಬೈಲಪ್ಪ, ಹೊಸದುರ್ಗ

ಹೊಸದುರ್ಗದಂತಹ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿಯಲು ಹೆಚ್ಚು ಹೆಚ್ಚು ಕೊಳೆವೆಬಾವಿ ಕೊರೆಸಿದ್ದೇ ಕಾರಣ. ದಾಳಿಂಬೆ ಬೆಳೆಗಾಗಿ ಬೋರ್‌ವೆಲ್‌ಗಳನ್ನು ವ್ಯಾಪಕವಾಗಿ ಕೊರೆಸಿದರು. ಇಂತಹ ಪ್ರದೇಶಗಳಲ್ಲಿ ತೆಂಗು ಬೆಳೆ ಹೆಚ್ಚು ಸೂಕ್ತ. ಅಲ್ಲದೇ ಇದು ಶಾಶ್ವತ ಬೆಳೆ. ಅಡಿಕೆಯೂ ಇಲ್ಲಿನ ಮಣ್ಣಿಗೆ ಸೂಕ್ತವಲ್ಲ. ಜನರು ಇದನ್ನು ಅರ್ಥಮಾಡಿಕೊಂಡು ಪಾರಂಪರಿಕ ಪದ್ಧತಿಯಲ್ಲಿ ತೆಂಗು ಬೆಳೆಯಬೇಕು.

*ಮೇ ತಿಂಗಳಲ್ಲೇ ಬಾವಿ ನೀರು ಕಡಿಮೆಯಾಗುತ್ತಿದೆ. ಬಾವಿಗೆ ರಿಂಗ್‌ ಹಾಕುವುದರಿಂದ ಸಮಸ್ಯೆ ಇದೆಯೇ?

ನೇತ್ರಾವತಿ ಗುಡ್ಡೇಕೆರೆ, ತೀರ್ಥಹಳ್ಳಿ

ಜನವಸತಿ ಪ್ರದೇಶಗಳಲ್ಲಿ ಕೊಳವೆಬಾವಿ ಕೊರೆದರೆ ನೀರಿನ ಸಮಸ್ಯೆ ಉಲ್ಬಣವಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹ ಉತ್ತಮ ವಿಧಾನ, ಮಳೆ ನೀರನ್ನು ಬಾವಿಗೆ ಬಿಡಿ. ವರ್ಷಕ್ಕೊಂದು ಬಾರಿ ಬಾವಿಯ ರಿಂಗ್‌ಗೆ ಸುಣ್ಣ ಲೇಪನ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT