7

‘ರೈತರ ಸಾಲ ಮನ್ನಾ ಮಾಡಿ; ಇಲ್ಲವೇ ಕುರ್ಚಿ ಖಾಲಿ ಮಾಡಿ’: ಶಂಕರಗೌಡ ಪಾಟೀಲ  

Published:
Updated:

ಕಲಬುರ್ಗಿ: ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಇಲ್ಲವೇ ಕುರ್ಚಿ ಖಾಲಿ ಮಾಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಒತ್ತಾಯಿಸಿದರು.
‘ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ಸಾಲ ಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ ಈಗ ಅವರ ಮಾತಿನ ವರಸೆ ಬದಲಾಗಿದೆ. ಆರಂಭದಲ್ಲಿ ₹53ಸಾವಿರ ಕೋಟಿ ಸಾಲ ಎಂದು ಹೇಳಿದ್ದರು. ಈಗ ₹6 ಸಾವಿರ, ₹9ಸಾವಿರ ಕೋಟಿ ಎಂದು ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಸಹಕಾರ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ₹1.20 ಲಕ್ಷ ಕೋಟಿ ಇದೆ. ಇದೆಲ್ಲವನ್ನು ಮನ್ನಾ ಮಾಡಬೇಕು. ಬಜೆಟ್‌ನಲ್ಲಿ ಈ ಬಗ್ಗೆ ಘೋಷಿಸದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಕೇಂದ್ರ ಸರ್ಕಾರದಿಂದ ವಿವಿಧ ಇಲಾಖೆಗಳ ಮೂಲಕ ರಾಜ್ಯ ಸರ್ಕಾರಕ್ಕೆ ಬಂದಿರುವ ಅನುದಾನದ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಇಂಗಿನ ಮಾತನಾಡಿ, ‘ಜನಾಭಿಪ್ರಾಯ ಬಿಜೆಪಿ ಪರವಾಗಿದ್ದರೂ ಕುಮಾರಸ್ವಾಮಿ ಅಪವಿತ್ರ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿದ್ದಾರೆ. ರೆಸಾರ್ಟ್ ರಾಜಕಾರಣ ಈಗ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಗೊಂಡಿದೆ. ಸಮ್ಮಿಶ್ರ ಸರ್ಕಾರದ ಗಲಾಟೆ ಮಧ್ಯೆ ರೈತರ ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ರೈತರ ಸಾಲವನ್ನು ಕೂಡಲೇ ಮನ್ನಾ ಮಾಡಬೇಕು. ಇಲ್ಲವಾದಲ್ಲಿ ಖುರ್ಚಿ ಬಿಟ್ಟು ಕೆಳಗಿಳಿಯಬೇಕು’ ಎಂದು ಆಗ್ರಹಿಸಿದರು.

ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಕರೆಕಲ್, ಮುಖಂಡರಾದ ಗುರುಲಿಂಗನಗೌಡ, ಮಲ್ಲಿನಾಥ ಪಾಟೀಲ, ರಮೇಶ ಇದ್ದರು.

ಬರಹ ಇಷ್ಟವಾಯಿತೆ?

 • 8

  Happy
 • 3

  Amused
 • 2

  Sad
 • 2

  Frustrated
 • 5

  Angry

Comments:

0 comments

Write the first review for this !