ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಡಕಲ್‌ ಜಲಾಶಯದಿಂದ ಕೃಷ್ಣಾ ನದಿಗೆ ಹರಿಯಲಿದೆ ನೀರು!

ಸೋಮವಾರದಿಂದಲೇ ನೀರು ಬಿಡಲು ಆದೇಶ;
Last Updated 18 ಮೇ 2019, 15:29 IST
ಅಕ್ಷರ ಗಾತ್ರ

ಬೆಳಗಾವಿ: ಮಹಾರಾಷ್ಟ್ರ ಸರ್ಕಾರವು ಕೃಷ್ಣಾ ನದಿಗೆ ನೀರು ಹರಿಸದ ಕಾರಣ ಜಿಲ್ಲೆಯ ಹಿಡಕಲ್‌ ಜಲಾಶಯದಿಂದ 1 ಟಿಎಂಸಿ ಅಡಿ ನೀರನ್ನು ಹರಿಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅಧಿಕಾರಿಗಳಿಗೆ ಶನಿವಾರ ಸೂಚನೆ ನೀಡಿದರು.

ಸಚಿವರ ಸೂಚನೆಯ ಮೇರೆಗೆ ಪ್ರಾದೇಶಿಕ ಆಯುಕ್ತ ತುಷಾರ್‌ ಗಿರಿನಾಥ ಅವರು ಸೋಮವಾರ ಬೆಳಿಗ್ಗೆಯಿಂದಲೇ ನೀರು ಹರಿಸುವಂತೆ ನೀರಾವರಿ ನಿಗಮದ ಎಂಜಿನಿಯರ್‌ಗಳಿಗೆ ಆದೇಶ ನೀಡಿದ್ದಾರೆ. ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ನೀರಾವರಿ ನಿಗಮದ ಅಧಿಕಾರಿಗಳು, ಪೊಲೀಸ್‌, ಹೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದ ಅವರು, ನೀರು ಹರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

94 ಕಿ.ಮೀ ದೂರ:

‘ಹಿಡಕಲ್‌ ಜಲಾಶಯದಿಂದ ಬಿಡುವ ನೀರು ಮುಖ್ಯ ಕಾಲುವೆಯ ಮೂಲಕ 22 ಕಿ.ಮೀ. ದೂರದ ಧೂಪದಾಳ ಸೇರಬೇಕು. ಅಲ್ಲಿಂದ 50 ಕಿ.ಮೀ. ಕಾಲುವೆಯ ಮೂಲಕ ಮುಗಳಖೋಡ ವಿತರಣಾ ಕೇಂದ್ರ ತಲುಪಬೇಕು. ಇಲ್ಲಿ ಮತ್ತು ನಿಡಗುಂದಿ ವಿತರಣಾ ಕೇಂದ್ರದಿಂದ ಅಥಣಿ ತಾಲ್ಲೂಕಿನ ಶೇಗುಣಸಿವರೆಗೆ ಮತ್ತೆ 22 ಕಿ.ಮೀ. ಸಾಗಬೇಕು. ಹೀಗೆ 94 ಕಿ.ಮೀ ಸಾಗಿದ ನಂತರ ಕೃಷ್ಣಾ ನದಿಗೆ ಸೇರುತ್ತದೆ. ಇದಕ್ಕೆ ನಾಲ್ಕು ದಿನಗಳ ಸಮಯಾವಕಾಶ ಬೇಕಾಗುತ್ತದೆ’ ಎಂದು ಕರ್ನಾಟಕ ನೀರಾವರಿ ನಿಗಮದ ಘಟಪ್ರಭಾ ಯೋಜನೆಯ ಮುಖ್ಯ ಎಂಜಿನಿಯರ್‌ ಅರವಿಂದ ಕಣಗಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಸಾಧುವೇ?:

‘ಇದೇ ಮೊದಲ ಬಾರಿಗೆ ಇಂತಹ ಸಾಹಸಕ್ಕೆ ಕೈ ಹಾಕಲಾಗಿದೆ. ಇದು ಎಷ್ಟು ಕಾರ್ಯಸಾಧು ಎನ್ನುವ ಪ್ರಶ್ನೆ ಎದ್ದಿದೆ. ಜಲಾಶಯದಿಂದ ಹೊರಬಿಡಲಾಗುವ 1 ಟಿಎಂಡಿ ಅಡಿ ನೀರು 94 ಕಿ.ಮೀ ಸಂಚರಿಸಿದ ನಂತರ ಎಷ್ಟು ಪ್ರಮಾಣದಲ್ಲಿ ಕೃಷ್ಣಾ ನದಿಗೆ ಸೇರಿಕೊಳ್ಳುತ್ತದೆ ಎನ್ನುವುದನ್ನು ಗಮನಿಸಬೇಕಾಗಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

ಹಿಡಕಲ್‌ ಜಲಾಶಯದಲ್ಲಿ ಸದ್ಯಕ್ಕೆ 4 ಟಿಎಂಸಿ ಅಡಿ ನೀರಿದೆ. ಜುಲೈ ಅಂತ್ಯದವರೆಗೆ ಬೆಳಗಾವಿ, ಹುಕ್ಕೇರಿ, ಸಂಕೇಶ್ವರ ಹಾಗೂ ಇತರ ಹಳ್ಳಿಗಳಿಗೆ ಕುಡಿಯುವುದಕ್ಕಾಗಿ 1 ಟಿಎಂಸಿ ಅಡಿ ನೀರು ಬೇಕು. ಇದೇ ಮೇ 24 ಕ್ಕೆ ಬಾಗಲಕೋಟೆಗೆ 2 ಟಿಎಂಸಿ ಅಡಿ ಬಿಡಲು ಈಗಾಗಲೇ ನಿರ್ಧಾರ ಕೈಕೊಳ್ಳಲಾಗಿದೆ. ಅಂದರೆ ನೀರಿನ ಸಂಗ್ರಹ 1 ಟಿಎಂಸಿ ಅಡಿಗೆ ಇಳಿಯಲಿದೆ. ಡೆಡ್ ಸ್ಟೋರೇಜ್ 2 ಟಿಎಂಸಿ ಅಡಿ ನೀರಿದೆ. ಚಿಕ್ಕೋಡಿ, ಅಥಣಿ, ರಾಯಬಾಗ ಹಾಗೂ ಜಮಖಂಡಿ ತಾಲ್ಲೂಕುಗಳ ಕೃಷ್ಣಾ ತೀರದ ಜನತೆಯ ನೀರಿನ ದಾಹ ತಣಿಸಲು 1 ಟಿಎಂಸಿ ಅಡಿ ನೀರು ಸಾಕಾಗುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT