ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2,498 ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

ಸದನ ಸಮಿತಿ ರಚನೆಗೆ ಬಿಜೆಪಿ ಪಟ್ಟು
Last Updated 9 ಜುಲೈ 2018, 15:43 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 2,498 ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಮಹಾಂತೇಶ ಕವಟಗಿಮಠ ಪ್ರಶ್ನೆಗೆ ಉತ್ತರಿಸಿ, ’ಸ್ಥಗಿತಗೊಂಡ ಘಟಕಗಳನ್ನು ದುರಸ್ತಿಗೊಳಿಸುವ ಉದ್ದೇಶದಿಂದ ಕೆಆರ್‌ಐಡಿಎಲ್‌ಗೆ ₹ 3 ಕೋಟಿ ಹಾಗೂ ಪ್ರತಿ ಜಿಲ್ಲಾ ಪಂಚಾಯಿತಿಗೆ ₹1 ಕೋಟಿ ನೀಡಲಾಗಿದೆ. ಇದೇ 15ರೊಳಗೆ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

‘ಘಟಕಗಳ ಮೇಲ್ವಿಚಾರಣೆಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ. ಮುಂದಿನ ತಿಂಗಳಿಂದ ಇದರ ನಿರ್ವಹಣೆ ಹೊಣೆಯನ್ನು ಗುತ್ತಿಗೆದಾರರಿಗೆ ನೀಡಲಾಗುವುದು’ ಎಂದು ಅವರು ಹೇಳಿದರು.

ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಪೊದೆಗಳ ನಡುವೆ ಘಟಕಗಳನ್ನು ಸ್ಥಾಪಿಸಲಾಗಿದೆ. ಇನ್ನೂ ಕೆಲವು ಘಟಕಗಳ ಬೀಗವನ್ನೇ ತೆರೆದಿಲ್ಲ. ಶೇ 50ರಷ್ಟು ಕೆಟ್ಟು ನಿಂತಿವೆ. ಸದನ ಸಮಿತಿ ರಚಿಸಿ ವಾಸ್ತವಾಂಶ ಅಧ್ಯಯನ ಮಾಡಬೇಕು’ ಎಂದು ಪಟ್ಟು ಹಿಡಿದರು. ಇದಕ್ಕೆ ಬಿಜೆಪಿಯ ಮಹಾಂತೇಶ ಕವಟಗಿಮಠ, ರಘುನಾಥ ಮಲ್ಕಾಪುರೆ, ಎನ್‌.ರವಿಕುಮಾರ್‌, ಪ್ರದೀಪ್‌ ಶೆಟ್ಟರ್‌ ಧ್ವನಿಗೂಡಿಸಿದರು. ಘಟಕಗಳ ನಿರ್ವಹಣೆ ಸರಿಯಾಗಿಲ್ಲ ಎಂದು ಕಾಂಗ್ರೆಸ್‌ನ ಬಸವರಾಜ ಇಟಗಿ, ಪಿ.ಆರ್‌. ರಮೇಶ್‌ ಗಮನ ಸೆಳೆದರು.

ಕೃಷ್ಣ ಬೈರೇಗೌಡ, ‘ಗ್ರಾಮೀಣಾಭಿವೃದ್ಧಿ ಇಲಾಖೆಯ ಬಗ್ಗೆ ಚರ್ಚಿಸಲು ಮುಂದಿನ ವಾರ ಪರಿಷತ್‌ನ 25 ಸದಸ್ಯರ (ಸ್ಥಳೀಯ ಸಂಸ್ಥೆಗಳು) ಸಭೆ ಕರೆದಿದ್ದೇನೆ. ಅಲ್ಲಿ ಈ ವಿಷಯದ ಬಗ್ಗೆ ವಿಸ್ತೃತ ಚರ್ಚೆ ನಡೆಸೋಣ. ಅಲ್ಲಿಯೂ ನಿಮಗೆ ಸಮಾಧಾನ ಆಗದಿದ್ದರೆ ಸದನ ಸಮಿತಿ ರಚಿಸಲು ಸಿದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT