ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಹಳ್ಳಿಗಳಲ್ಲಿ ಜಲಕ್ಷಾಮ

ರಾಜ್ಯದ 20 ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತತ್ವಾರ
Last Updated 13 ಮಾರ್ಚ್ 2019, 19:54 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತ ರಾಜಕೀಯ ಪಕ್ಷಗಳು ಲೋಕಸಭೆ ಚುನಾವಣೆಗೆ ಬಿರುಸಿನ ಸಿದ್ಧತೆಯಲ್ಲಿ ತೊಡಗಿದ್ದರೆ, ಅತ್ತ ರಾಜ್ಯದ 20 ಜಿಲ್ಲೆಗಳ 1,000ಕ್ಕೂ ಹೆಚ್ಚು ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ.

ಮುಂದಿನ ಕೆಲವೇ ದಿನಗಳಲ್ಲಿ 600 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಬಹುದೆಂದು
ರಾಜ್ಯ ತುರ್ತು ನಿರ್ವಹಣಾ ಕೇಂದ್ರ ಅಂದಾಜಿಸಿದೆ. ಅಷ್ಟೆ ಅಲ್ಲ, ಪ್ರಸಕ್ತ ವರ್ಷ ಇಡೀ ರಾಜ್ಯದಲ್ಲಿ 2,300 ಗ್ರಾಮಗಳು, ನಗರ ಪ್ರದೇಶಗಳ 661 ವಾರ್ಡ್‌ಗಳು ಜಲಕ್ಷಾಮಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಪರಿಸ್ಥಿತಿ ಅವಲೋಕಿಸಿದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅಧ್ಯಕ್ಷತೆಯ ರಾಜ್ಯ ಕಾರ್ಯಕಾರಿ ಸಮಿತಿ (ವಿಪತ್ತು ನಿರ್ವಹಣೆ), ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ. ಅಲ್ಲದೆ, ಬಿಸಿಗಾಳಿಯಿಂದ ಜನ – ಜಾನುವಾರು ಉಂಟಾಗಬಹುದಾದ ಅನಾಹುತ, ಜೀವಹಾನಿಯನ್ನು ‘ವಿಪತ್ತು’ ಎಂದು ಪರಿಗಣಿಸಿ ಅಗತ್ಯ ನೆರವು ಮತ್ತು ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲು ಸಮಿತಿ ನಿರ್ಧರಿಸಿದೆ.

ಸದ್ಯ 513 ಗ್ರಾಮಗಳಿಗೆ 948 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. 453 ಗ್ರಾಮಗಳಿಗೆ 557 ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ನಗರ ಪ್ರದೇಶಗಳ 181 ವಾರ್ಡ್‌ಗಳ ಜನರು ಟ್ಯಾಂಕರ್‌ ನೀರು ಅವಲಂಬಿಸಿದ್ದಾರೆ.

ಭತ್ತ ಬೆಳೆಯುವ ರಾಯಚೂರು, ಮಂಡ್ಯ, ಬಳ್ಳಾರಿ, ಯಾದಗಿರಿ ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶಗಳಿಂದ ಮೇವು ಕಟ್ಟುಗಳನ್ನು ಸಂಗ್ರಹಿಲಾಗುತ್ತಿದೆ. ಗಡಿ ಜಿಲ್ಲೆಗಳ ಮೂಲಕ ಹೊರ ರಾಜ್ಯಗಳಿಗೆ ಮೇವು ಸಾಗಣೆ ನಿಷೇಧಿಸಲಾಗಿದೆ. ಮಿನಿಕಿಟ್‌ ಖರೀದಿಸಲು ಪಶು ಸಂಗೋಪನೆ ಇಲಾಖೆಗೆ ₹ 30 ಕೋಟಿ ಬಿಡುಗಡೆ ಮಾಡಲಾಗಿದೆ.

ಹಾಲು ಸಹಕಾರ ಸಂಘಗಳು ಮತ್ತು ಹಾಲು ಒಕ್ಕೂಟಗಳ ಮೂಲಕ ಈಗಾಗಲೇ 8.11 ಲಕ್ಷ ಕಿಟ್‌ಗಳನ್ನು ವಿತರಿಸಲಾಗಿದೆ. ಇದರಿಂದ 30 ಲಕ್ಷ ಟನ್‌ ಹಸಿ ಹುಲ್ಲು (ಮೇವು) ಇಳುವರಿ ನಿರೀಕ್ಷಿಸಲಾಗಿದೆ.

ಜಿಲ್ಲಾಧಿಕಾರಿಗಳ ಪಿ.ಡಿ (ವೈಯಕ್ತಿಕ ಠೇವಣಿ) ಖಾತೆಯಲ್ಲಿ ತಲಾ ₹ 6 ಕೋಟಿಗಿಂತಲೂ ಹೆಚ್ಚು ಮೊತ್ತ ಇದೆ.

ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಲು ಈ ಮೊತ್ತ ಬಳಸಿಕೊಳ್ಳುವಂತೆ ಕಂದಾಯ ಇಲಾಖೆ ಸೂಚಿಸಿದೆ. ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ವರ್ಷ ಈವರೆಗೆ 9.5 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಗುಳೆ ತಪ್ಪಿಸುವ ಉದ್ದೇಶದಿಂದ ಇನ್ನಷ್ಟು ಉದ್ಯೋಗ ಸೃಷ್ಟಿಗೆ ಅವಕಾಶ ಮಾಡಿಕೊಡಲಾಗಿದೆ.

ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ನೆರೆ, ಭೂಕುಸಿತ ಮತ್ತು ತೀವ್ರ ಬರದಿಂದ ಒಟ್ಟು ₹ 32,335 ಕೋಟಿ ನಷ್ಟ ಅಂದಾಜಿಸಲಾಗಿದೆ. ಮುಂಗಾರು ಅವಧಿಯಲ್ಲಿ ಬರ ಪೀಡಿತ 100 ತಾಲ್ಲೂಕುಗಳಿಗೆ ಕೇಂದ್ರ ಸರ್ಕಾರ ₹ 949.49 ಕೋಟಿ ನೆರವು ಘೋಷಿಸಿದ್ದು, ಈ ಮೊತ್ತದಲ್ಲಿ ₹ 434 ಕೋಟಿ ಬಿಡುಗಡೆ ಆಗಿದೆ. ಹಿಂಗಾರು ಅವಧಿಯಲ್ಲಿ ಬರ ಪೀಡಿತ 156 ತಾಲ್ಲೂಕುಗಳಲ್ಲಿ ಉಂಟಾದ ನಷ್ಟಕ್ಕೆ ₹ 2,064.30 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ.

10 ಗೋ ಶಾಲೆ, 35 ಮೇವು ಬ್ಯಾಂಕು

ಕೊಪ್ಪಳ ಜಿಲ್ಲೆಯಲ್ಲಿ ಐದು, ಚಿತ್ರದುರ್ಗದಲ್ಲಿ ನಾಲ್ಲು ಬಳ್ಳಾರಿಯಲ್ಲಿ ಒಂದು ಹೀಗೆ 10 ಗೋ ಶಾಲೆಗಳನ್ನು ತೆರೆಯಲಾಗಿದೆ. ಅವುಗಳಲ್ಲಿ 3,760 ಜಾನುವಾರುಗಳು ಆಶ್ರಯ ಪಡೆದಿವೆ. 35 ಮೇವು ಬ್ಯಾಂಕುಗಳನ್ನು (ಬೆಳಗಾವಿ–10, ಯಾದಗಿರಿ–5, ಕೊಪ್ಪಳ–5, ತುಮಕೂರು–2, ವಿಜಯಪುರ–8, ಚಿತ್ರದುರ್ಗ–5) ಆರಂಭಿಸಲಾಗಿದೆ. ರೈತರಿಗೆ ಸಬ್ಸಿಡಿಯಲ್ಲಿ ಕಿಲೋ ಒಂದಕ್ಕೆ ₹ 2 ದರದಲ್ಲಿ ಮೇವು ವಿತರಿಸಲಾಗುತ್ತಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT