ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಕರ ಬರಗಾಲ; ಗುಳೆ ಹೋದ ರೈತರು

Last Updated 19 ಮೇ 2019, 19:07 IST
ಅಕ್ಷರ ಗಾತ್ರ

ಹಳೇಬೀಡು: ಬರಗಾಲದ ಭೀಕರತೆಯಿಂದ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿ ಗಂಗೂರು ಗ್ರಾಮದರೈತ ಕುಟುಂಬಗಳು ಗುಳೆ ಹೋಗಿವೆ.

ಬೇಲೂರು ತಾಲ್ಲೂಕಿನಲ್ಲಿ ಸತತಐದು ವರ್ಷಗಳಿಂದ ಬರಗಾಲ ಆವರಿಸಿದ ಪರಿಣಾಮ ಜಾನುವಾರುಗಳಿಗೆ ಮೇವು, ನೀರು ದೊರಕುತ್ತಿಲ್ಲ. ಹೀಗಾಗಿ, ರೈತರು ಬದುಕು ಅರಸಿ ನಗರದತ್ತ ಹೆಜ್ಜೆ ಹಾಕಿದ್ದಾರೆ.

‘ಜಮೀನಿನಲ್ಲಿ ಬೆಳೆ ಇಲ್ಲ, ಕುಡಿಯಲು ನೀರು ಇಲ್ಲ. ಜಾನುವಾರು ಸಾಕಿಕೊಂಡು ಜೀವನ ನಡೆಸಲು ಆದಾಯಕ್ಕಿಂತ ಹೆಚ್ಚಿನ ವೆಚ್ಚ ತಗಲುತ್ತಿದೆ. ಹೀಗಾಗಿ,ಸಿಕ್ಕಿದಷ್ಟು ಹಣಕ್ಕೆ ಜಾನುವಾರುಮಾರಾಟ ಮಾಡಲಾಗುತ್ತಿದೆ’ ಎಂದು ಗ್ರಾಮಸ್ಥರು ಸಮಸ್ಯೆ ಬಿಚ್ಚಿಡುತ್ತಾರೆ.

ಗ್ರಾಮದ ರಮೇಶ, ರಾಜಾ ನಾಯ್ಕ, ಹುಲೀಗೌಡ ಹಾಗೂ ಶೇಖರಪ್ಪ ಅವರು ತಮ್ಮ ಹಸುಗಳನ್ನು ಕೈಗೆ ಬಂದ ಬೆಲೆಗೆ ಮಾರಿ ಊರು ತೊರೆದಿದ್ದಾರೆ. ನಾಲ್ಕು ಕುಟುಂಬಗಳು ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿವೆ. ಮಳೆಬಿದ್ದು ಕೆರೆ, ಕಟ್ಟೆ ತುಂಬಿದಾಗ ಜಮೀನಿನಲ್ಲಿ ದುಡಿಯುತ್ತಿದ್ದರು. ಜಮೀನಿನಿಂದ ಬರುವ ಆದಾಯ ಕೂಡ ಜೀವನ ನಡೆಸಲು ಸಾಕಾಗುತ್ತಿರಲಿಲ್ಲ. ಉಪ ಕಸುಬಾಗಿ ಹೈನುಗಾರಿಕೆಅವಲಂಬಿಸಿದ್ದರು.

‘ದೂರದ ಊರುಗಳಿಂದ ದುಪ್ಪಟ್ಟು ಹಣ ನೀಡಿ ಒಣಹುಲ್ಲು ತಂದು ಹೈನುಗಾರಿಕೆ ನಡೆಸುವುದು ಕಷ್ಟವಾಗಿದೆ. ಸರ್ಕಾರ ಕೈಹಿಡಿದರೆ ಮಾತ್ರ ಊರಿನಲ್ಲಿ ಬದುಕಬಹುದು’ ಎಂದು ಗ್ರಾಮದ ಮಹಿಳೆ ಪಾರ್ವತಮ್ಮ ಹೇಳುತ್ತಾರೆ.

ಹೊಲ, ಗದ್ದೆ ಬಯಲು ಸುತ್ತಾಡಿದರೂ ಹಿಡಿ ಮೇವು ದೊರಕುತ್ತಿಲ್ಲ. ಕೆರೆ– ಕಟ್ಟೆ ಬರಿದಾಗಿದ್ದರಿಂದ ಸಾವಿರ ಅಡಿ ವರೆಗೂ ಕೊಳವೆಬಾವಿ ಕೊರೆಸಿದ ರೈತರಲ್ಲೀಗ ಬಿಡಿಗಾಸು ಇಲ್ಲದಂತಾಗಿದೆ.

‘ಮಳೆ ಬೀಳದಿದ್ದರೆ ಮತ್ತಷ್ಟುಕುಟುಂಬಗಳು ಗುಳೆ ಹೋಗುವ ಸಾಧ್ಯತೆ ಇದೆ’ ಎಂದು ಗ್ರಾಮಸ್ಥ ಕೆಂಪೇಗೌಡ ಆತಂಕದಿಂದಲೇ ಹೇಳಿದರು.

‘ಗ್ರಾಮಕ್ಕೆ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಬಂದು ರೈತರ ನೆರವಿಗೆ ನಿಲ್ಲಬೇಕು. ಪರಿಹಾರ ಕಾರ್ಯ ಕೈಗೊಂಡು ಗ್ರಾಮ ತೊರೆಯದಂತೆ ಕ್ರಮ ವಹಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗೂರಿನ ರಂಗೇಗೌಡ ಮನವಿ ಮಾಡಿದರು.

**

ಆಡಳಿತ ವೈಫಲ್ಯ: ರೈತರು ಗುಳೆ

‘ಬರ ನಿರ್ವಹಣೆ ಕೈಗೊಳ್ಳುವಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಗ್ರಾಮೀಣ ರೈತ ಕುಟುಂಬಗಳಿಗೆ ದಿಕ್ಕಿಲ್ಲದಂತಾಗಿದೆ. ಬೆಳೆ ಬಂದಿಲ್ಲ, ಜೊತೆಗೆ ಜಾನುವಾರುಗಳಿಗೆ ಮೇವು, ನೀರು ಇಲ್ಲ. ಹೀಗಾಗಿ, ಬೇಲೂರು ತಾಲ್ಲೂಕಿನ ಹಳ್ಳಿಗಳು ರೈತರು ಗುಳೆ ಹೋಗುತ್ತಿದ್ದಾರೆ’ ಎನ್ನುತ್ತಾರೆ ಶಾಸಕ ಕೆ.ಎಸ್‌.ಲಿಂಗೇಶ್‌.

**

ರೈತರು ಗುಳೆ ಹೋಗುತ್ತಿರುವುದು ಇದೇ ಮೊದಲಲ್ಲ. ಎರಡು ವರ್ಷಗಳಿಂದ 15ಕ್ಕೂ ಹೆಚ್ಚು ಕುಟುಂಬಗಳು ಜಾನುವಾರು ಮಾರಿ ಹೊಟ್ಟೆಪಾಡಿಗೆ ನಗರ ಸೇರಿವೆ
- ಕೆಂಪೇಗೌಡ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT