ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಬಾವಿ: ಊರು ಬಿಡುತ್ತಿರುವ ಜನ

ತುಮಕೂರು: ಉದ್ಯೋಗ ಅರಸಿ ನಗರಗಳತ್ತ ವಲಸೆ
Last Updated 19 ಮೇ 2019, 19:13 IST
ಅಕ್ಷರ ಗಾತ್ರ

ತುಮಕೂರು: ದಿನದಿಂದ ದಿನಕ್ಕೆ ರೈತರ ಕೊಳವೆ ಬಾವಿಗಳು ಬತ್ತುತ್ತಿವೆ. ಕೃಷಿಗೆ ಆಧಾರವಾಗಿದ್ದ ಕೊಳವೆಬಾವಿಗಳಲ್ಲಿ ನೀರಿನ ಒರತೆ ಕಣ್ಮರೆ ಆಗುತ್ತಿದ್ದಂತೆ ಜಿಲ್ಲೆಯ ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.

‘ಶಾಶ್ವತ ಬರ’ ಎನ್ನುವ ಹಣೆಪಟ್ಟಿ ಹೊಂದಿರುವ ಪಾವಗಡ ತಾಲ್ಲೂಕಿನ ಈ ಬಾರಿ ಬರ ‘ಅಧಿಕ’ವಾಗಿದೆ. ಬರ ಎದುರಿಸಲು ಸಾಧ್ಯವಾಗದೆ ಊರು ಬಿಟ್ಟವರ ಕಥೆಗಳು ಜಿಲ್ಲೆಯಲ್ಲಿ ಹೇರಳವಾಗಿವೆ.

ವಯಸ್ಸಾದವರನ್ನು ಮನೆಗಳಲ್ಲಿ ಬಿಟ್ಟು ದುಡಿಯುವ ಶಕ್ತಿಇದ್ದವರು ಬೆಂಗಳೂರಿನ ಕಾರ್ಖಾನೆಗಳು, ಗಾರ್ಮೆಂಟ್‌ಗಳನ್ನು ಸೇರಿದ್ದಾರೆ. ಹಳ್ಳಿಗಳನ್ನು ಒಮ್ಮೆ ಸುತ್ತಿದರೆ ವೃದ್ಧರ ಸಂಖ್ಯೆ ಢಾಳಾಗಿ ಕಾಣುತ್ತದೆ!

ಕಳೆದ ಹತ್ತು ವರ್ಷಗಳಿಂದಲೂ ಪಾವಗಡ ತಾಲ್ಲೂಕಿನಲ್ಲಿ ಬರ ಇದೆ.ಆದರೆ ಈ ವರ್ಷ ಪ್ರಮಾಣ ತೀವ್ರವಾಗಿಹೆಚ್ಚಿದೆ. ತಾಲ್ಲೂಕಿನ ಇತರ ಹೋಬಳಿಗಳಿಗೆ ಹೋಲಿಸಿದರೆ ನಿಡಗಲ್ ಹೋಬಳಿಯ ಗ್ರಾಮಗಳ ಕೊಳವೆಬಾವಿಗಳಲ್ಲಿ ನೀರು ಉತ್ತಮವಾಗಿತ್ತು. ರೈತರು ಒಳ್ಳೆಯ ವ್ಯವಸಾಯ ಮಾಡುತ್ತಿದ್ದರು. ಆದರೆ ಈ ವರ್ಷ ಹೋಬಳಿಯ ರಾಮಯ್ಯನಪಾಳ್ಯ, ಶೈಲಾಪುರ, ದೇವಲಕೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೊಳವೆಬಾವಿಗಳು ಬತ್ತಿವೆ.

ರಾಮಯ್ಯನಪಾಳ್ಯದಶೇ 90ರಷ್ಟು ಜನರು ಬೆಂಗಳೂರು ಸೇರಿದ್ದಾರೆ. ‌‘ಮೂರು ಎಕರೆಯಲ್ಲಿ ಅಡಿಕೆ, ಬಾಳೆ ಬೆಳೆದಿದ್ದೆವು. ಜೀವನ
ನೆಮ್ಮದಿಯಾಗಿತ್ತು. ಆರು ತಿಂಗಳ ಹಿಂದೆ ನೀರು ಕೊಡುತ್ತಿದ್ದ ಒಂದು ಕೊಳವೆ ಬಾವಿ ಬತ್ತಿತು. ಮತ್ತೆ ನಾಲ್ಕು ಬಾವಿ ಕೊರೆಸಿದರೂ ನೀರು ದೊರೆಯಲಿಲ್ಲ. ಸಾಲ ಹೆಚ್ಚಿತು. ತೋಟ ಪೂರ್ಣವಾಗಿ ಒಣಗಿತು. ತೋಟ ಮಾರಾಟ ಮಾಡಿಸಾಲ ತೀರಿಸಬೇಕಾದ ಸ್ಥಿತಿಗೆ ಬಂದೆ. ಸಾಲ ತೀರಿಸಲು ಸಂಸಾರದ ಜೊತೆ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದೆ’ ಎನ್ನುವರು ರಾಮಯ್ಯನಪಾಳ್ಯದ ರೈತಹನುಮಂತರಾಯ. ಅವರ ಕುಟುಂಬ ಈಗ ಬೆಂಗಳೂರಿನಲ್ಲಿ ಕಾರ್ಮಿಕರು!

ತಿಪಟೂರು ತಾಲ್ಲೂಕಿನ ಚಿಕ್ಕಬಿದರೆ, ಗೌಡನಕಟ್ಟೆ, ಗುರುಗದಹಳ್ಳಿ, ಬೇಲೂರನಹಳ್ಳಿ, ಶಿವರ, ಅಳಲೇಹಳ್ಳಿ, ಬೆಣ್ಣೇನಹಳ್ಳಿ, ಹೊನ್ನೇನಹಳ್ಳಿ, ಬನ್ನಿಹಳ್ಳಿ,ಅನಗೊಂಡನಹಳ್ಳಿ, ಹೊಸಹಳ್ಳಿ, ನಾಗತಿಹಳ್ಳಿಗಳಲ್ಲಿಯೂ ನೀರು ಸಿಗದೆಊರು ಬಿಟ್ಟವರ ಕಥೆಗಳು ಮತ್ತಷ್ಟು ಸಿಗುತ್ತವೆ.

ಚಿಕ್ಕಬಿದರೆಯ 180 ಮನೆಗಳಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ಬೀಗ ಬಿದ್ದಿದೆ. ಈ ಮನೆಗಳ ಜನರು ಉದ್ಯೋಗ ಅರಸಿ ಬೆಂಗಳೂರು ಸೇರಿದ್ದಾರೆ. ಗ್ರಾಮದ ಶೇ 95ಕ್ಕೂ ಹೆಚ್ಚು ಕೊಳವೆಬಾವಿಗಳಲ್ಲಿ ನೀರಿಲ್ಲ. ‘ಒಂದು ಸಾವಿರ ಅಡಿಗೂ ಹೆಚ್ಚು ಕೊರೆದರೆ ಸ್ವಲ್ಪ ಮಟ್ಟಿಗೆ ನೀರು ದೊರೆಯುತ್ತದೆ’ ಎನ್ನುವರು ಗ್ರಾಮಸ್ಥರು.

‘ಪ್ರತಿ ದಿನ ಒಂದಲ್ಲಾ ಒಂದು ಕುಟುಂಬ ಗಂಟು ಮೂಟೆ ಸಮೇತ ಉದ್ಯೋಗ ಅರಸಿ ಬೆಂಗಳೂರಿಗೆ ನಮ್ಮ ಬಸ್‌ನಲ್ಲಿ ಬರುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಹಳ್ಳಿಗಳಲ್ಲಿ ಜನರೇ ಇರುವುದಿಲ್ಲ’ ಎನ್ನುತ್ತಾರೆ ಪಾವಗಡ ತಾಲ್ಲೂಕು ವೈ.ಎನ್‌.ಹೊಸಕೋಟೆಯ ಖಾಸಗಿ ಬಸ್ ಏಜೆಂಟ್ ಟಿ.ವಿ.ರತ್ನಯ್ಯಶೆಟ್ಟಿ.

40 ಎಕರೆಯಲ್ಲಿ ಆದಾಯವಿಲ್ಲ

‘ನಮ್ಮದು 40 ಎಕರೆ ತೋಟ ಇದೆ. ಈಗಾಗಲೇ ನೀರಿಲ್ಲದ ಕಾರಣಕ್ಕೆ ಒಂದೂವರೆ ಸಾವಿರ ಅಡಿಕೆ ಮರಗಳನ್ನು ಕತ್ತರಿಸಿದ್ದೇವೆ. ಒಂದೂವರೆ ಸಾವಿರ ತೆಂಗಿನ ಮರಗಳಿದ್ದು ಬಹುತೇಕ ಒಣಗಿವೆ’ ಎನ್ನುವ ಚಿಕ್ಕಬಿದರೆಯ ಕಾಂತರಾಜ್ ಅವರ ಮಾತು ಕೇಳುತ್ತಿದ್ದರೆ ಕಣ್ಣಲ್ಲಿ ನೀರು ಜಿನುಗುತ್ತದೆ.

‘ತೋಟದಿಂದ ಬದುಕು ಸಾಧ್ಯವಿಲ್ಲ ಎನ್ನುವುದು ಅರಿವಾದ ತಕ್ಷಣ ಸಂಸಾರ ಸಮೇತ ಮೈಸೂರಿಗೆ ದುಡಿಯಲು ತೆರಳಿದೆ. ಖಾಸಗಿ ಕಂಪನಿಯವರು ನೀಡುವ ಅಲ್ಪ ಸಂಬಳದಲ್ಲಿ ನಗರದಲ್ಲಿ ಅಪ್ಪ ಅಮ್ಮನನ್ನು ಸಾಕುವುದು ಕಷ್ಟ. ಆ ಕಾರಣಕ್ಕೆ ಅವರು ಊರಿನಲ್ಲಿಯೇ ಇದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT