ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯ: ತುಂಗೆಯಲ್ಲೂ ‘ಗಂಗೆ’ ಇಲ್ಲ

ತೀರ್ಥಕ್ಷೇತ್ರಗಳಲ್ಲಿ ಜಲದ ಬವಣೆ, ಭಕ್ತರ ಸಂಖ್ಯೆಯಲ್ಲಿ ಗಣನೀಯ ಕುಸಿತ
Last Updated 18 ಮೇ 2019, 19:27 IST
ಅಕ್ಷರ ಗಾತ್ರ

ರಾಯಚೂರು: ‌ತುಂಗಭದ್ರಾ ನದಿಯು ಮಾರ್ಚ್‌ನಲ್ಲೇ ಬತ್ತಿದ್ದು, ಮಂತ್ರಾಲಯದಲ್ಲಿ ಶ್ರೀಗುರು ರಾಘವೇಂದ್ರ ಸ್ವಾಮೀಜಿ ಭಕ್ತರು ನೀರಿಗಾಗಿ ಪರದಾಡುವಂತಾಗಿದೆ.

ದೇವರ ದರ್ಶನಕ್ಕೂ ಮುನ್ನ ನದಿಯಲ್ಲಿ ಸ್ನಾನ ಮಾಡುವುದರಿಂದ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಆದರೆ, ನದಿ ಬತ್ತಿರುವ ಕಾರಣ ಅಲ್ಲಿ ಸ್ನಾನ ಮಾಡಲು ಆಗದಿರುವುದಕ್ಕೆ ಅವರಲ್ಲಿ ನಿರಾಸೆ ಮೂಡಿದೆ.

ನದಿ ಬತ್ತಿರುವ ಕಾರಣ ಶ್ರೀ ಮಠದವರು ನದಿಯಲ್ಲಿ ಹೊಸದಾಗಿ ಆರು ಕೊಳವೆಬಾವಿ ಕೊರೆಸಿದ್ದಾರೆ. ನಲ್ಲಿಗಳನ್ನು ಅಳವಡಿಸಿ, ಭಕ್ತರ ಸ್ನಾನಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರ ಮತ್ತು ಘತ್ತರಗಿ ಭಾಗ್ಯವಂತಿ ಪವಿತ್ರ ಕ್ಷೇತ್ರಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಭೀಮಾ ನದಿಯು ಸಂಪೂರ್ಣ ಬತ್ತಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಕೊಳವೆಬಾವಿಗಳು ಸಹ ಬರಿದಾಗಿವೆ. ಈ ಎಲ್ಲದರ ಪರಿಣಾಮ ಕ್ಷೇತ್ರಗಳಿಗೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ದೇವಲಗಾಣಗಾಪುರದಲ್ಲಿ ಅಮರ್ಜಾ ನದಿ ಮತ್ತು ಭೀಮಾ ನದಿ ಸಂಗಮದ ಸ್ಥಳದಲ್ಲಿ ಭಕ್ತರು ಸ್ನಾನ ಮಾಡಿದ ಬಳಿಕವೇ ದೇವರ ದರ್ಶನ ಪಡೆಯುತ್ತಿದ್ದರು. ಆದರೆ, ಈಗ ಸಂಗಮ ಸ್ಥಳವು ಸಂಪೂರ್ಣ ಬತ್ತಿದ್ದು, ಭಕ್ತರು ಬರುವುದು ಕಡಿಮೆಯಾಗಿದೆ.

ಹುಲಿಗಿಯಲ್ಲೂ ನೀರಿನ ಕೊರತೆ: ಕೊಪ್ಪಳ ಜಿಲ್ಲೆಯ ಪವಿತ್ರ ಕ್ಷೇತ್ರಗಳಾದ ಹುಲಿಗಿ ಮತ್ತು ಅಂಜನಾದ್ರಿ ಪರ್ವತಗಳಲ್ಲಿ ನೀರಿನ ತೀವ್ರ ಕೊರತೆ ಉಂಟಾಗಿದೆ. ಇಲ್ಲಿನ ತುಂಗಭದ್ರಾ ನದಿ ಸಂಪೂರ್ಣ ಬತ್ತಿದ್ದು, ನೀರಿಗಾಗಿ ಭಕ್ತರು ಪರದಾಡುವಂತಹ ಸ್ಥಿತಿಯಿದೆ.‌

ಕೊಳವೆಬಾವಿ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಭಕ್ತರ ಪುಣ್ಯಸ್ನಾನಕ್ಕೂ ತೊಂದರೆಯಾಗಿದೆ. ಶುದ್ಧ ಕುಡಿಯುವ ನೀರಿನ ಕೊರತೆ ವ್ಯಾಪಕವಾಗಿದೆ. ಹಂಪಿ, ಆನೆಗೊಂದಿ, ಅಂಜನಾದ್ರಿ, ಹುಲಿಗಿ, ಕನಕಗಿರಿ ಮತ್ತು ಪಂಪಾವನದಲ್ಲೂ ನೀರಿನ ಕೊರತೆ ಇದೆ.

ನರಸಿಂಹ ಝರಣಿ ಪ್ರವೇಶ ನಿರ್ಬಂಧ: ಬೀದರ್ ಜಿಲ್ಲೆಯ ಗುಹಾದೇವಾಲಯ ನರಸಿಂಹ ಝರಣಿಯಲ್ಲಿ ನೀರಿನ ಕೊರತೆ ಉಂಟಾಗಿರುವ ಕಾರಣ ಐದು ತಿಂಗಳಿಂದ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.

ನರಸಿಂಹ ಜಯಂತಿಯ ದಿನವಾಗಿದ್ದ ಶುಕ್ರವಾರ ಜಿಲ್ಲಾ ಆಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿಯವರು ಕಾರಂಜಾ ಜಲಾಶಯದಿಂದ ಗುಹೆಯೊಳಗೆ ನೀರು ಹರಿಸಿ ಆಯ್ದ ಭಕ್ತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ನೀರಿನ ಕೊರತೆಯಿಂದ ಶನಿವಾರದಿಂದ ಮತ್ತೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅರ್ಚಕ ಭೂಷಣ ಪಾಠಕ ತಿಳಿಸಿದ್ದಾರೆ.

ಭಕ್ತರು ಗುಹೆಯಲ್ಲಿ 600 ಮೀಟರ್ ನೀರಿನಲ್ಲಿ ನಡೆದುಕೊಂಡು ಹೋಗಿ ಗರ್ಭಗುಡಿಯಲ್ಲಿ ಇರುವ ನರಸಿಂಹ ದೇವರ ದರ್ಶನ ಪಡೆಯುತ್ತಾರೆ. ಗುಹೆಯಲ್ಲಿ ಸಾಮಾನ್ಯವಾಗಿ 4 ರಿಂದ 5 ಅಡಿ ನೀರು ಇರುತ್ತದೆ. ಆದರೆ, ಇದೀಗ ನೀರಿನ ಪ್ರಮಾಣ ಅರ್ಧ ಅಡಿಗಿಂತಲೂ ಕಡಿಮೆಯಾಗಿದೆ.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ ನೀರಿಗೆ ಪರದಾಟ

ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ ಕುಡಿಯುವ ನೀರಿಗೆ ಪರದಾಟ ಆರಂಭವಾಗಿದೆ. ದೇವಾಲಯದ ಹಿರಿಯ ಅರ್ಚಕರಾದ ರಾಮನಾಥಶರ್ಮ ಅವರು ಇತ್ತೀಚೆಗಷ್ಟೆ ಸ್ವಂತ ಬಳಕೆಗಾಗಿ ಕೊರೆಸಿರುವ ಕೊಳವೆಬಾವಿಯಿಂದ ದೇವಾಲಯಕ್ಕೆ ಹಾಗೂ ಅನ್ನದಾಸೋಹಕ್ಕೆ ನೀರು ಪಡೆಯಲಾಗುತ್ತಿದೆ. ಈ ಕೊಳವೆ ಬಾವಿಯಲ್ಲೂ ನೀರು ಬರುತ್ತಿರುವ ಪ್ರಮಾಣ ತೀರ ಕಡಿಮೆ ಇದೆ ಎಂದು ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ.ಜಿ.ಜಗನ್ನಾಥ್ ತಿಳಿಸಿದ್ದಾರೆ.

‘ಪ್ರತಿ ದಿನ ದೇವಾಲಯದ ವತಿಯಿಂದ ನಡೆಯುವ ಅನ್ನದಾಸೋಹದಲ್ಲಿ ಸುಮಾರು 3 ರಿಂದ 4 ಸಾವಿರ ಜನ, ಭಾನುವಾರ ಮತ್ತು ಮಂಗಳವಾರ ಸುಮಾರು 6 ರಿಂದ 7 ಸಾವಿರ ಜನ ಊಟ ಮಾಡುತ್ತಾರೆ. ದೇವಾಲಯಕ್ಕೆ ನೀರು ಸರಬರಾಜು ಮಾಡುತ್ತಿದ್ದ ಮೂರು ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿವೆ. ಒಂದು ಕೊಳವೆ ಬಾವಿಯಲ್ಲಿ ಬರುತ್ತಿರುವ ಅಲ್ಪಸ್ವಲ್ಪ ನೀರನ್ನು ಭಕ್ತಾದಿಗಳು ಉಳಿದುಕೊಳ್ಳುವ ಯಾತ್ರಿ ನಿವಾಸ್‌ಗೆ ಪೂರೈಕೆ ಮಾಡಲಾಗುತ್ತಿದೆ’ಎಂದರು.

ಘಾಟಿ ಸುಬ್ರಹ್ಮಣ್ಯ
ಘಾಟಿ ಸುಬ್ರಹ್ಮಣ್ಯ

ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ನೀರಿಗೆ ಬರ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ದೇವಸ್ಥಾನದ ಎರಡು ಕೊಳವೆಬಾವಿ ಪೈಕಿ ಒಂದು ಬತ್ತಿ ಹೋಗಿದ್ದು, ಇನ್ನೊಂದರಲ್ಲಿ ಸ್ವಲ್ಪ ಪ್ರಮಾಣ ನೀರು ಬರುತ್ತಿದೆ. ದೇವಸ್ಥಾನ ಸಮೀಪದ ಜಮೀನಿನ ಭಕ್ತರು ತಮ್ಮ ಕೊಳವೆಬಾವಿಯಿಂದ ನೀರು ಸರಬರಾಜು ಮಾಡುತ್ತಿದ್ದಾರೆ. ಪ್ರತಿ ಸೋಮವಾರ ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಮಂದಿರಕ್ಕೆ ಬರುತ್ತಿದ್ದು, ಅಂದು ನೀರಿನ ಸಮಸ್ಯೆಯಾಗುತ್ತಿದೆ.

ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಕ್ಷೇತ್ರಕ್ಕೆ ಕೊಳವೆಬಾವಿ ಮೂಲಕ ಸಾಕಷ್ಟು ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ನೀರಿನ ಸಮಸ್ಯೆಯಾಗುತ್ತಿಲ್ಲ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ಕ್ಷೇತ್ರಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸಾಕಷ್ಟು ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿರುವುದರಿಂದ ಭಕ್ತರಿಗೆ ಯಾವುದೇ ತೊಂದರೆ ಆಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT