ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ಸ್ಥಳಗಳಲ್ಲಿ ಕೊರತೆ

Last Updated 18 ಮೇ 2019, 19:12 IST
ಅಕ್ಷರ ಗಾತ್ರ

ಮಂಡ್ಯ: ವಿಶ್ವಪ್ರಸಿದ್ಧ ಪ್ರವಾಸಿ ತಾಣ ಮೇಲುಕೋಟೆಯಲ್ಲಿ ಕುಡಿಯುವ ನೀರು ಸಿಗದೆ ಪ್ರವಾಸಿಗರು ಹಾಗೂ ಸ್ಥಳೀಯರು ಪರಿತಪಿಸುವಂತಾಗಿದೆ.

15 ವರ್ಷಗಳ ಹಿಂದೆ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂಭಾಗದಲ್ಲಿ ಚಿತ್ರನಟ ಡಾ.ವಿಷ್ಣುವರ್ಧನ್‌ ಕಟ್ಟಿಸಿದ್ದ ಶುದ್ಧ ನೀರಿನ ಟ್ಯಾಂಕ್‌ ಭಕ್ತರ ದಾಹ ತಣಿಸುತ್ತಿತ್ತು. ಆದರೆ, ಈಗ ಅದು ಶಿಥಿಲಗೊಂಡಿದ್ದು, ನೀರಿನ ಪೂರೈಕೆ ಸ್ಥಗಿತಗೊಂಡಿದೆ.

ದೇವಾಲಯದ ಬಳಿ ಗ್ರಾಮ ಪಂಚಾಯ್ತಿ ವತಿಯಿಂದ ನಿರ್ಮಿಸಿದ್ದ ಟ್ಯಾಂಕ್‌ಗೂ ನೀರು ಹರಿಸುತ್ತಿಲ್ಲ. ಕ್ಷೇತ್ರದ ಇತರ ತಾಣಗಳಾದ ಯೋಗ ನರಸಿಂಹಸ್ವಾಮಿ ಬೆಟ್ಟ, ಕಲ್ಯಾಣಿ, ಅಕ್ಕ–ತಂಗಿ ಕೊಳ, ಧನುಷ್ಕೋಟಿ ಬಳಿಯೂ ಕುಡಿಯುವ ನೀರಿಗಾಗಿ ಯಾವುದೇ ವ್ಯವಸ್ಥೆ ಇಲ್ಲ. ಹೀಗಾಗಿ ಕ್ಷೇತ್ರಕ್ಕೆ ಬರುವ ಜನರು ಬಾಟಲಿ ನೀರಿನ ಮೊರೆ ಹೋಗಿದ್ದಾರೆ.

‘ದಕ್ಷಿಣ ಪ್ರಯಾಗ’ದಲ್ಲಿ ನೀರಿಗಿಲ್ಲ ತೊಂದರೆ: ಭಕ್ತರ ಪ್ರಮುಖ ಯಾತ್ರಾಸ್ಥಳವಾದ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ಸದ್ಯಕ್ಕೆ ನೀರಿಗೆ ಸಮಸ್ಯೆಯಿಲ್ಲ.

‘ದಕ್ಷಿಣ ಪ್ರಯಾಗ’ ಎಂದೇ ಕರೆಯಲ್ಪಡುವ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸಾಕಷ್ಟು ನೀರು ಹರಿಯುತ್ತಿದೆ.

ಟ್ಯಾಂಕರ್‌ ನೀರಿನ ವ್ಯವಸ್ಥೆ ಇದೆ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಾದ ಬೇಲೂರು, ಹಳೇಬೀಡು ಮತ್ತು ಶ್ರವಣಬೆಳಗೊಳದಲ್ಲಿ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಭಕ್ತರು ಹಾಗೂ ಪ್ರವಾಸಿಗರಿಗೆ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದೆ. ಬೆಳಗೊಳದಲ್ಲಿ ಹೇಮಾವತಿ ನದಿ ಮೂಲಕ ನೀರು ಪೂರೈಸಲಾಗುತ್ತಿದೆ.

ಚಾಮುಂಡಿ ಬೆಟ್ಟ: ಪುರಾಣ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, ಭವಿಷ್ಯದಲ್ಲಿ ಉಂಟಾಗಬಲ್ಲ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ‘ಪ್ರಸಾದ್’ ಯೋಜನೆಯಡಿ
ಯಲ್ಲಿ ಕುಡಿಯುವ ನೀರಿನ ಶಾಶ್ವತ ಕಾಮಗಾರಿ ಪ್ರಗತಿಯಲ್ಲಿದೆ.

ಬೆಟ್ಟವನ್ನು ಮಾದರಿ ಧಾರ್ಮಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಒಟ್ಟು ₹ 5.54 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬೆಟ್ಟದ ತುದಿಯವರೆಗೂ ನೀರಿನ ಪೈಪ್‌ ಅಳವಡಿಸುವುದು ಪ್ರಮುಖವಾದ ಅಂಶ. ಈಗಾಗಲೇ ಬೆಟ್ಟದ ಮೇಲ್ಭಾಗದಲ್ಲಿ ನೀರಿನ ಬೃಹತ್ ಟ್ಯಾಂಕ್‌ಗಳು ಇದ್ದು, ನೀರು ಸರಬರಾಜು ಉತ್ತಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT