ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಘು ಭೂಕಂಪ: ಕೊಯ್ನಾ ಜಲಾಶಯದಿಂದ ನೀರು ಹೊರಕ್ಕೆ

ಕೃಷ್ಣಾ ನದಿಗೆ ಹರಿದುಬರುತ್ತಿದೆ 1.96 ಲಕ್ಷ ಕ್ಯುಸೆಕ್‌ ನೀರು
Last Updated 2 ಆಗಸ್ಟ್ 2019, 11:33 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿಂದ ಸುಮಾರು 250 ಕಿ.ಮೀ ದೂರದಲ್ಲಿರುವ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕೊಯ್ನಾ ಜಲಾಶಯದ ಸುತ್ತಮುತ್ತ ಗುರುವಾರ ರಾತ್ರಿ ಲಘು ಭೂಕಂಪ ಸಂಭವಿಸಿದ್ದು, ಜಲಾಶಯದಿಂದ 2,000 ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಇದು ಗಡಿ ಪ್ರದೇಶಗಳ ಜನರಲ್ಲಿ ಆತಂಕ ಸೃಷ್ಟಿಸಿದೆ.

ಕೊಯ್ನಾ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬಂದಿದೆ. 105 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈಗ 82.62 ಟಿಎಂಸಿ ಅಡಿ (ಶೇ 80) ನೀರು ಸಂಗ್ರಹವಾಗಿದೆ. ಇದೇ ಸಮಯದಲ್ಲಿ ಭೂಕಂಪ ಸಂಭವಿಸಿದ್ದರಿಂದ ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತಿದೆ ಎಂದು ಆತಂಕಗೊಂಡಿದ್ದಾರೆ.

ಕೊಯ್ನಾ ಅಲ್ಲದೇ,ದಕ್ಷಿಣ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಮುಂದುವರಿದ ಪರಿಣಾಮವಾಗಿ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದುಬರುತ್ತಿದೆ. ಅಲ್ಲಿನ ರಾಜಾಪುರ ಬ್ಯಾರೇಜ್‌ನಿಂದ 1,63,975 ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿಯಿಂದ 32,032 ಕ್ಯುಸೆಕ್‌ ಸೇರಿ ಚಿಕ್ಕೋಡಿಯ ಕಲ್ಲೋಳ ಬಳಿ ಕೃಷ್ಣಾ ನದಿಗೆ 1,96,007 ಕ್ಯುಸೆಕ್‌ ನೀರು ಸೇರ್ಪಡೆಯಾಗುತ್ತಿದೆ.

ಬೆಳಗಾವಿಯಲ್ಲಿ ಮುಂದುವರಿದ ಮಳೆ: ಜಿಲ್ಲೆಯ ವಿವಿಧೆಡೆ ಶುಕ್ರವಾರವೂ ಮಳೆ ಮುಂದುವರಿದಿದೆ. ಬೆಳಗಾವಿ, ಖಾನಾಪುರ, ಬೈಲಹೊಂಗಲ ದಲ್ಲಿ ಬೆಳಿಗ್ಗೆಯಿಂದಲೇ ಸತತವಾಗಿ ಮಳೆ ಸುರಿಯುತ್ತಿದೆ. ಚಿಕ್ಕೋಡಿ, ನಿಪ್ಪಾಣಿ ಹಾಗೂ ರಾಯಬಾಗ ತಾಲ್ಲೂಕಿನ 14 ಸೇತುವೆಗಳು ಈಗಲೂ ಜಲಾವೃತವಾಗಿವೆ.

ಆತಂಕ ಪಡುವ ಅಗತ್ಯವಿಲ್ಲ:

‘ಕೊಯ್ನಾ ಪ್ರದೇಶದಲ್ಲಿ 3.1 ರಿಕ್ಟರ್‌ ಪ್ರಮಾಣದಲ್ಲಿ ಭೂಕಂಪವಾಗಿದೆ. ಇದು ಅತ್ಯಂತ ಲಘು ಪ್ರಮಾಣದ್ದಾಗಿದ್ದು, ಜಲಾಶಯಕ್ಕೆ ಹಾನಿಯುಂಟು ಮಾಡುವಷ್ಟು ಪ್ರಬಲವಲ್ಲ. ಜಲಾಶಯಕ್ಕೆ ಯಾವುದೇ ತೊಂದರೆಯಿಲ್ಲವೆಂದು ಅಲ್ಲಿನ ಎಂಜಿನಿಯರ್‌ಗಳು ತಿಳಿಸಿದ್ದಾರೆ. ಜಲಾಶಯದಿಂದ ನೀರು ಹೊರಬಿಡುವುದಕ್ಕೂ ಭೂಕಂಪಕ್ಕೂ ಸಂಬಂಧವಿಲ್ಲ. ಜನರು ಆತಂಕಕ್ಕೆ ಒಳಗಾಗಬಾರದು’ ಎಂದು ಚಿಕ್ಕೋಡಿ ತಹಶೀಲ್ದಾರ್‌ ಡಾ.ಸಂತೋಷಕುಮಾರ ಬಿರಾದಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT