ನೀರಿಗೆ ನೀರು: ಮಹಾರಾಷ್ಟ್ರದ ಷರತ್ತು ಒಪ್ಪಿಕೊಂಡ ಕರ್ನಾಟಕ

ಭಾನುವಾರ, ಮೇ 26, 2019
22 °C

ನೀರಿಗೆ ನೀರು: ಮಹಾರಾಷ್ಟ್ರದ ಷರತ್ತು ಒಪ್ಪಿಕೊಂಡ ಕರ್ನಾಟಕ

Published:
Updated:
Prajavani

ಬೆಳಗಾವಿ: ‘ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ವಿಧಿಸಿರುವ "ನೀರಿಗೆ ನೀರು" ಷರತ್ತನ್ನು ರಾಜ್ಯ ಸರ್ಕಾರ ತಾತ್ವಿಕವಾಗಿ ಒಪ್ಪಿಕೊಂಡಿದೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಪ್ರಕಟಿಸಿದರು.

ಇಲ್ಲಿನ ನೀರಾವರಿ ನಿಗಮದ ಕಚೇರಿಯಲ್ಲಿ ಸೋಮವಾರ ಕೃಷ್ಣಾ ನದಿ ತೀರದ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಶಾಸಕರು, ಸಂಸದರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಚುನಾವಣಾ ನೀತಿ ಸಂಹಿತೆ ಇದೇ ತಿಂಗಳ 29ರಂದು ಮುಗಿಯಲಿದ್ದು, ಇದಾದ ನಂತರ ಒಪ್ಪಂದಕ್ಕೆ (ಎಂಒಯು) ಸ್ಪಷ್ಟ ರೂಪ ನೀಡಲಾಗುವುದು. ಅಲ್ಲಿಯವರೆಗೆ ಕಾಯದೆ, ತಕ್ಷಣ ಕೃಷ್ಣಾ ನದಿಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕು’ ಎಂದು ಮಹಾರಾಷ್ಟ್ರ ಸರ್ಕಾರವನ್ನು ಕೋರಿದರು.

‘ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ. ಹಿಂದಿನ ವರ್ಷಗಳಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಹಣ ಕೊಟ್ಟು ಕೋಯ್ನಾದಿಂದ ನೀರು ಪಡೆಯುತ್ತಿದ್ದೇವು. 2004ರಲ್ಲಿ ₹ 2.12 ಕೋಟಿ, 2009ರಲ್ಲಿ ₹ 6.63 ಕೋಟಿ, 2014ರಲ್ಲಿ ₹ 2.84 ಕೋಟಿ ನೀಡಲಾಗಿತ್ತು. ಈಗ ಹಣ ಬೇಡವೆಂದು ಮಹಾರಾಷ್ಟ್ರ ಹೇಳಿದೆ. ನೀರಿನ ಬದಲಾಗಿ ನೀರು ನೀಡಬೇಕೆಂದು ಷರತ್ತು ವಿಧಿಸಿದೆ’ ಎಂದು ವಿವರಿಸಿದರು.

‘ಪ್ರತಿವರ್ಷ ನಾಲ್ಕು ಟಿಎಂಸಿ ಅಡಿ ನೀರು ವಿನಿಮಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಒಡಂಬಡಿಕೆ ಮಾಡಿಕೊಳ್ಳುವ ಪ್ರಸ್ತಾವ ನಮ್ಮ ಮುಂದಿಟ್ಟಿದೆ. ಎರಡೂ ರಾಜ್ಯಗಳ ಕೃಷ್ಣಾ ನದಿ ತೀರದ ಜನರ ಬವಣೆ ತೀರಿಸಲು ಈ ರೀತಿಯ ಒಡಂಬಡಿಕೆ ಮಾಡಿಕೊಳ್ಳಲು ನಮ್ಮದೂ ಸಹಮತವಿದೆ. ನಮ್ಮ ಸಹಮತದ ಬಗ್ಗೆ ತಕ್ಷಣವೇ ಮುಖ್ಯ ಕಾರ್ಯದರ್ಶಿಗಳ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ಅಧಿಕೃತವಾಗಿ ಪತ್ರ ಬರೆದು ತಿಳಿಸಲಾಗುವುದು’ ಎಂದು ಹೇಳಿದರು.

ತಜ್ಞರ ಸಮಿತಿ ರಚನೆ:

‘ಪ್ರತಿವರ್ಷ ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ತಲಾ ಎರಡು ಟಿಎಂಸಿ ಅಡಿ ನೀರು ತಮಗೆ ಒದಗಿಸಿದರೆ ಬೇಸಿಗೆ ಕಾಲದಲ್ಲಿ ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ಅಡಿ ನೀರು ಹರಿಸುವುದಾಗಿ ಮಹಾರಾಷ್ಟ್ರ ಹೇಳಿದೆ. ಇದರ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ, ವರದಿ ಸಲ್ಲಿಸಲು ತಜ್ಞರ ಸಮಿತಿಯನ್ನು ರಚಿಸುತ್ತೇವೆ. ಈ ಸಮಿತಿ ವರದಿಯನ್ನು ಸಚಿವ ಸಂಪುಟದಲ್ಲಿ ಇಟ್ಟು, ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಒಕ್ಕೊರಲಿನ ಮನವಿ:

ಇದಕ್ಕೂ ಮುಂಚೆ ನಡೆದ ಸಭೆಯಲ್ಲಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವರಾದ ಆರ್.ಬಿ.ತಿಮ್ಮಾಪುರ, ರಾಜ್ಯ ಸರ್ಕಾರದ ಮುಖ್ಯ ಸಚೇತಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸಂಸದರಾದ ಪ್ರಕಾಶ ಹುಕ್ಕೇರಿ, ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಮಹಾಂತೇಶ ಕೌಜಲಗಿ, ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ, ಆನಂದ ನ್ಯಾಮಗೌಡ, ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯರಾದ ಎಸ್. ಆರ್.ಪಾಟೀಲ, ಹನುಮಂತ ನಿರಾಣಿ ಮತ್ತಿತರರು ಭಾಗವಹಿಸಿದ್ದರು. ಕೃಷ್ಣಾ ನದಿಗೆ ನೀರು ಹರಿಸಲು ತಕ್ಷಣ ಕ್ರಮಕೈಗೊಳ್ಳುವಂತೆ ಒಕ್ಕೊರಲಿನಿಂದ ಆಗ್ರಹಿಸಿದ್ದರು.

 

 

ಬರಹ ಇಷ್ಟವಾಯಿತೆ?

 • 19

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !