ಬುಧವಾರ, ನವೆಂಬರ್ 20, 2019
22 °C
ವಸತಿ ಸಚಿವ ವಿ.ಸೋಮಣ್ಣ

ರಾಜೀನಾಮೆ ನೀಡುವಂತೆ ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಅರ್ಜಿ ಹಾಕಿದ್ವಾ?

Published:
Updated:

ಬೆಳಗಾವಿ: ‘ರಾಜೀನಾಮೆ ನೀಡುವಂತೆ ನಾವೇನಾದರೂ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಶಾಸಕರಿಗೆ ಅರ್ಜಿ ಹಾಕಿದ್ವಾ, ಕರೆದಿದ್ವಾ ಅಥವಾ ಮಾತಾಡಿಸಿದ್ವಾ? ಎಲ್ಲವನ್ನೂ ಮಾಡಿದವರು ಸಿದ್ದರಾಮಯ್ಯ ಅವರೇ’ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಸರಿ ಇದ್ದಿದ್ದರೆ ಇದ್ಯಾಕೆ ಆಗುತ್ತಿತ್ತು. ಅವರು ತೋಡಿದ ಗುಂಡಿಯಲ್ಲಿ ಅವರೇ ಬಿದ್ದಿದ್ದಾರೆ. ಹೀಗಿರುವಾಗ ಯಾರ ಮೇಲೆ ಆಡಿಯೊ ಮಾಡುತ್ತಾರೆ. ಅನರ್ಹರಿಗೂ ನಮಗೂ ಏನು ಸಂಬಂಧವಿದೆ. 17 ಜನ ನಮ್ಮವರಾ? 14 ಮಂದಿ ನಿಮ್ಮವರೇ (ಕಾಂಗ್ರೆಸ್‌ನವರು). ಸಿದ್ದರಾಮಯ್ಯ ಫೋಟೊ ಹಾಕಿಕೊಂಡು ಗೆದ್ದವರೇ. ಅವರ್‍ಯಾಕೆ ಓಡಿ ಹೋದರು. ಶಾಸಕರು ಅತೃಪ್ತರಾದಾಗಲು ಕಾರಣರಾರು. ಸಿದ್ದರಾಮಯ್ಯ ಅವರೇ ಅದಕ್ಕೂ ಕಾರಣ. ಕುಮಾರಸ್ವಾಮಿ ರಾಜೀನಾಮೆ ಕೊಟ್ಟಾಗ ಯಾರಾದರೂ ಜನ ಬೀದಿಗಿಳಿದು ಹೋರಾಡಿದರೇ?’ ಎಂದು ಕೇಳಿದರು.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಅವರವರ ಪಕ್ಷದಲ್ಲಿನ ಅವ್ಯವಸ್ಥೆ, ಸರ್ಕಾರದ ಧೋರಣೆ ನೋಡಿ ಸ್ವತಃ ರಾಜೀನಾಮೆ ಕೊಟ್ಟು ಹೊರಬಂದಿದ್ದಾರೆ. ಅವರಿಗೂ ನಮಗೂ ಸಂಬಂಧವಿಲ್ಲ. ನಾವೇನು ಅವರೊಂದಿಗೆ ನೆಂಟಸ್ತನ ಮಾಡಬೇಕಾ’ ಎಂದು ಪ್ರಶ್ನಿಸಿದರು.

‘ಆ 17 ಮಂದಿ ರಾಜೀನಾಮೆ ಕೊಡದಿದ್ದರೆ ನಾವು ಅಧಿಕಾರಕ್ಕೆ ಬರಲು ಆಗುತ್ತಿರಲಿಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೊಡ್ಡತನವನ್ನು ಪ್ರದರ್ಶಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಅನರ್ಹ ಶಾಸಕರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಾಗೆಂದು ನಾವು ಅವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದೇವೆ ಎಂದು ಹೇಳಿಲ್ಲ. ಕಾಂಗ್ರೆಸ್‌ನವರು ವಿನಾಕಾರಣ ಗೊಂದಲ ಹುಟ್ಟು ಹಾಕುತ್ತಿದ್ದಾರೆ. ಅನರ್ಹ ಶಾಸಕರ ವಿಷಯದಲ್ಲಿ ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧರಾಗಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಕಾಂಗ್ರೆಸ್‌ನವರು ಮೊಸರಿನಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ; ಧೀರನೂ ಅಲ್ಲ. ಇದು ವಿರೋಧ ಪಕ್ಷದವರಿಗೆ ಅನ್ವಯವಾಗುತ್ತದೆ. ಅವರ ಶಾಸಕರನ್ನು ಸರಿಯಾಗಿ ಇಟ್ಟುಕೊಳ್ಳಲು ಆಗಲಿಲ್ಲ’ ಎಂದು ಟಾಂಗ್ ನೀಡಿದರು.

‘ನಮ್ಮ ಸರ್ಕಾರ ಸುಭದ್ರವಾಗಿದೆ’ ಎಂದರು.

‘ಸಿದ್ದರಾಮಯ್ಯ ಹಿಂದೆ ವೈರಾಗ್ಯದ ಮಾತುಗಳನ್ನು ಆಡಿದ್ದರು. ಈಗ ಅಧಿಕಾರದ ಕನಸು ಕಾಣುತ್ತಿದ್ದಾರೆ’ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)