‘ಉಡ್ತಾ ಬೆಂಗಳೂರು’ ಆಗಲು ಬಿಡೆವು

7
ಉಪಮುಖ್ಯಮಂತ್ರಿ ಭರವಸೆ

‘ಉಡ್ತಾ ಬೆಂಗಳೂರು’ ಆಗಲು ಬಿಡೆವು

Published:
Updated:

ಬೆಂಗಳೂರು: ಯಾವುದೇ ಕಾರಣಕ್ಕೂ ಈ ಮಹಾನಗರ ‘ಉಡ್ತಾ ಬೆಂಗಳೂರು’ ಆಗುವುದಕ್ಕೆ ಬಿಡೆವು. ಇಲ್ಲಿನ ಮಾದಕ ದ್ರವ್ಯ ಮಾರಾಟ ಜಾಲವನ್ನು ಮಟ್ಟಾ ಹಾಕುತ್ತೇವೆ.  ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ವಿಧಾನ ಪರಿಷತ್ತಿನಲ್ಲಿ ಮಂಗಳವಾರ ನೀಡಿದ ಭರವಸೆ ಇದು.

ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಹಾಗೂ ಐವನ್‌ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಮಾದಕ ದ್ರವ್ಯ ಮಾರಾಟ ಜಾಲ ಇಡಿ ವಿಶ್ವವನ್ನು ಕಾಡುತ್ತಿರುವ ಪಿಡುಗು. ನಮ್ಮಲ್ಲೂ ಶಾಲಾ ಕಾಲೇಜುಗಳ ಬಳಿ, ಉದ್ಯಾನಗಳ ಬಳಿ ಇದನ್ನು ಮಾರಾಟ ಮಾಡುವ ಪ್ರಕರಣಗಳು ನಡೆಯುತ್ತಿವೆ’ ಎಂದರು.

‘ಜಯನಗರದಲ್ಲಿ ಶಾಲೆಯ ಬಳಿ ಮಕ್ಕಳಿಗೆ ಮೊದಲು ಮೂರು ದಿನ ಅಪರಿಚಿತರು ಪುಕ್ಕಟೆಯಾಗಿ ಚಾಕಲೇಟ್‌ ನೀಡಿದ್ದರು. ನಂತರ ಅದರಲ್ಲೇ ಮಾದಕ ದ್ರವ್ಯ ಮಿಶ್ರಮಾಡಿ ನೀಡಿದ್ದರು. ಇದನ್ನು ಸೇವಿಸಿದ್ದರಿಂದ ಏನೋ ವಿಶೇಷ ಚೈತನ್ಯ ಬಂದಂತಾಗಿ ಮಕ್ಕಳು ಅದನ್ನು ಮತ್ತೆ ಮತ್ತೆ ಬಯಸುತ್ತವೆ. ಆಗ ಅದನ್ನು ಮಾರಾಟ ಮಾಡಲು ಶುರು ಹಚ್ಚಿಕೊಂಡಿದ್ದರು’ ಎಂದರು.

‘ಇಂತಹ ಪ್ರಕರಣಗಳನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಕೃತ್ಯಗಳ ಮೇಲೆ ನಿಗಾ ಇಡಲು ಶಾಲಾ ಕಾಲೇಜುಗಳ ಬಳಿ ಪೊಲೀಸರು ಮಫ್ತಿಯಲ್ಲಿ ನಿಗಾ ಇಡುತ್ತಾರೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಜೊತೆ ಪೊಲೀಸರು ಸಂಪರ್ಕದಲ್ಲಿದ್ದು, ಆಗಾಗ್ಗೆ ಮಾಹಿತಿ ಪಡೆಯುತ್ತಾರೆ’ ಎಂದರು.

ಈಗ ಮಾತ್ರೆಗಳ ರೂಪದಲ್ಲೂ ಮಾದಕ ದ್ರವ್ಯ ಮಾರಾಟ ನಡೆಯುತ್ತಿದೆ. ಔಷಧ ತಯಾರಕ ಕಂಪನಿಗಳ ಹೆಸರಿನಲ್ಲಿ ಈ ಜಾಲ ಕಾರ್ಯನಿರ್ವಹಿಸುತ್ತಿದೆ. ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ₹ 5 ಕೋಟಿಗಳಷ್ಟು ಇಂತಹ ಮಾತ್ರೆಗಳು ವಿದೇಶಕ್ಕೆ ರವಾನೆಯಾಗುತ್ತಿದ್ದುದನ್ನು ಕಸ್ಟಮ್ಸ್‌ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯ ತೇಜಸ್ವಿನಿ ಗೌಡ, ’ಕೇವಲ ಹಣ ಮಾಡುವುದಕ್ಕಾಗಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲಾಗುತ್ತದೆಯೇ. ಅಥವಾ, ಆರೋಗ್ಯವಂತ ಭಾರತವನ್ನು ದುರ್ಬಲಗೊಳಿಸಲು ಐಸಿಸ್‌ನಂತಹ ಸಂಘಟನೆ ಇಂತಹ ಕೃತ್ಯಗಳಲ್ಲಿ ತೊಡಗಿರುವ ಬಗ್ಗೆ ಪೊಲೀಸ್‌ ಇಲಾಖೆಗೆ ಮಾಹಿತಿ ಇದೆಯೇ’ ಎಂದು ಪ್ರಶ್ನಿಸಿದರು.

ಐಸಿಸ್‌ನಂತಹ ಸಂಸ್ತೆಗಳು ರಾಜ್ಯದಲ್ಲಿ ಮಾದಕ ದ್ರವ್ಯ ಕಳ್ಳ ಸಾಗಣೆ ಮತ್ತು ಮಾರಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಉಪಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಅನೇಕ ದೇಶಗಳಲ್ಲಿ ಮಾದಕ ದ್ರವ್ಯ ಕಳ್ಳ ಸಾಗಣೆ ಮತ್ತು ಮಾರಾಟ ನಡೆಸುವವರಿಗೆ ಮರಣ ದಂಡನೆ ವಿಧಿಸಲಾಗುತ್ತಿದೆ. ನಮ್ಮಲ್ಲೂ ಇಂತಹ ಕಠಿಣ ಕಾನೂನು ಜಾರಿಯಾಗಬೇಕು
- ಲಹರ್‌ ಸಿಂಗ್‌, ಬಿಜೆಪಿ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !