ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಕಚ್ಚಿದ್ದೇವೆ, ಮತ್ತೆ ಹೇಗೆ ಅಧಿಕಾರ ಪಡೆಯಬೇಕೆಂಬುದು ಗೊತ್ತಿದೆ: ದೇವೇಗೌಡ

Last Updated 16 ಫೆಬ್ರುವರಿ 2020, 9:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜಕೀಯದಲ್ಲಾದ ಅನೇಕ ಬದಲಾವಣೆಗಳಿಂದ ನಾನು ಹಾಗೂ ನಮ್ಮ ಪಕ್ಷ ನೆಲಕಚ್ಚಿದೆ. ಮರಳಿ ಅಧಿಕಾರ ಹೇಗೆ ಪಡೆಯಬೇಕು ಎಂಬುದು ನನಗೆ ಗೊತ್ತಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಸೋತಿದ್ದೇನೆ. ಪಕ್ಷವೂ ಸೋತಿದೆ. ಮುಂಬರುವ ತಾಲ್ಲೂಕು, ಜಿಲ್ಲಾ ಮಟ್ಟದ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಸೋತ ಮಾತ್ರಕ್ಕೆ ದೇವೇಗೌಡರ ಹುಮ್ಮಸ್ಸು ಮುಗಿದು ಹೋಗಿದೆ ಎಂದು ಭಾವಿಸಬೇಡಿ. ಜೀವನಪೂರ್ತಿ ಹೋರಾಟದ ಹಾದಿಯಲ್ಲಿಯೇ ಬಂದ ನನಗೆ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಗುರಿಯಿದೆ. ಪ್ರಾದೇಶಿಕ ಪಕ್ಷವನ್ನು ಮುಗಿಸಬೇಕು ಎಂದು ಅಂದುಕೊಂಡವರೇ ಅಚ್ಚರಿಯಾಗುವ ರೀತಿಯಲ್ಲಿ ಹೋರಾಟ ಮಾಡುವೆ’ ಎಂದರು.

‘ಮೊದಲು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲಾಗುವುದು. ಇದಕ್ಕಾಗಿ ಒಂಬತ್ತು ಸದಸ್ಯರನ್ನು ಒಳಗೊಂಡ ಕೋರ್‌ ಕಮಿಟಿ ರಚನೆ ಮಾಡಲಾಗಿದ್ದು, ಪಕ್ಷದ ನಾಯಕರು ಈ ಕಮಿಟಿಯಲ್ಲಿರುತ್ತಾರೆ. ಅವರು ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಹೋಗಿ ಪಕ್ಷವನ್ನು ಬಲಗೊಳಿಸುತ್ತಾರೆ’ ಎಂದರು.

‘ಕಾಂಗ್ರೆಸ್‌ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಲು ನನಗೆ ಇಷ್ಟವಿರಲಿಲ್ಲ. ಈ ವಿಷಯವನ್ನು ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಅತ್ಯಂತ ಕಠಿಣವಾಗಿ ಹೇಳಿದ್ದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡಿ ಎಂದಿದ್ದೆ. ಇದಕ್ಕೆ ಗುಲಾಂ ನಬಿ ಆಜಾದ್ ಸೇರಿದಂತೆ ಕೆಲ ಕಾಂಗ್ರೆಸ್‌ ನಾಯಕರೇ ಒಪ್ಪಲಿಲ್ಲ. ಬೇಡವೆಂದರೂ ನನ್ನ ಮಗನನ್ನೇ ಮುಖ್ಯಮಂತ್ರಿ ಮಾಡಿದರು’ ಎಂದು ಹೇಳಿದರು.

‘ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಶಾಸಕರನ್ನು ಬಿಜೆಪಿಗೆ ಕರೆದುಕೊಂಡು ಹೋದವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪಕ್ಷಗಳಿಂದ ಹೋದವರೇ ಇದನ್ನು ಬಹಿರಂಗವಾಗಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಜಾರಿಗೆ ತಂದಿದ್ದ ಯೋಜನೆಗಳನ್ನು ಈಗಿನ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ರದ್ದು ಮಾಡುತ್ತಿದೆ. ಹಳೇ ದ್ವೇಷವನ್ನು ಮುಂದಿಟ್ಟುಕೊಂಡು ಬಿಜೆಪಿ ತಾರತಮ್ಯ ಮಾಡಿದರೆ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ’ ಎಂದು ಗುಡುಗಿದರು.

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ಮುಕ್ತ ಭಾರತ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ನಮ್ಮಲ್ಲಿದ್ದ ಪ್ರಮುಖ ನಾಯಕರೇ ಕಾಂಗ್ರೆಸ್‌ಗೆ ಸೇರಿದರು. ರಾಹುಲ್‌ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ಸಿಗರು ನನ್ನ ವಿರುದ್ಧವೇ ಅನೇಕ ಬಾರಿ ಅಪಪ್ರಚಾರ ಮಾಡಿದರು. ಆದರೂ ಕಾಂಗ್ರೆಸ್‌ಗೆ ಈಗ ಎದುರಾಗಿರುವ ಪರಿಸ್ಥಿತಿಯ ಬಗ್ಗೆ ಅನುಕಂಪವಿದೆ ಎಂದರು.

ದೊಡ್ಡಗೌಡ್ರು ಬಂದಾರ...

ಅನಾರೋಗ್ಯದಿಂದ ಬಳಲುತ್ತಿರುವ ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ವಿಚಾರಿಸಲು ದೇವೇಗೌಡ ಅವರು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿದರು. ದೇವೇಗೌಡರು ಪುಟ್ಟಪ್ಪ ಅವರ ಎದೆ ಮೇಲೆ ಕೈ ಇಟ್ಟು ‘ನಮಗಾಗಿ ಹಾಗೂ ಈ ನಾಡಿನ ಜನರಿಗಾಗಿ ಇನ್ನೂ ಚೆನ್ನಾಗಿ ಬದುಕಬೇಕು. ಬೇಗ ಚೇತರಿಸಿಕೊಳ್ಳಿ’ ಎಂದು ಹಾರೈಸಿದರು. ಆಗ ಪುಟ್ಟಪ್ಪ ಅವರು ‘ದೊಡ್ಡಗೌಡ್ರು ಬಂದಾರ...’ ಎಂದು ಕೈ ಕುಲುಕಿದರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಕೂಡ ಪುಟ್ಟಪ್ಪ ಅವರ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT