‘ಸತೀಶಗೆ ಅವಮಾನವಾದರೆ ಕಠಿಣ ನಿರ್ಧಾರ’

7
ಪಿಎಲ್‌ಡಿ ಬ್ಯಾಂಕ್‌ ಚುನಾವಣೆ; ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ

‘ಸತೀಶಗೆ ಅವಮಾನವಾದರೆ ಕಠಿಣ ನಿರ್ಧಾರ’

Published:
Updated:

ಬೆಳಗಾವಿ: ‘ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಸಹೋದರ, ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಅವಮಾನವಾದರೆ ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದು ಸಚಿವ ರಮೇಶ ಜಾರಕಿಹೊಳಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಲಕ್ಷ್ಮಿ ಅವರನ್ನು ಜಾರಕಿಹೊಳಿ ಕುಟುಂಬವೇ ಬೆಳೆಸಿದೆ. ನಾನು ವಿರೋಧಿಸಿದ್ದಾಗಲೂ ಸತೀಶ ಅವರು ಲಕ್ಷ್ಮಿ ಅವರನ್ನು ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಿದ್ದರು. ಈಗ ಶಾಸಕಿಯಾದ ಮೇಲೆ ಮೆರೆದಾಡುತ್ತಿದ್ದಾರೆ. ಸೊಕ್ಕಿನಿಂದ ಮೆರೆದಾಡಬಾರದು. ಜನರು ಬುದ್ಧಿ ಕಲಿಸುತ್ತಾರೆ’ ಎಂದು ಹೇಳಿದರು.

ಇನ್ನೊಬ್ಬರಿಂದ ಹಣ ಪಡೆದುಕೊಳ್ಳುವ ಸ್ಥಿತಿ ನಮ್ಮ ಕುಟುಂಬಕ್ಕೆ ಬಂದಿಲ್ಲ. ₹ 90 ಕೋಟಿ ಕೊಟ್ಟಿದ್ದೇನೆ ಎಂದು ಲಕ್ಷ್ಮಿ ಹೇಳಿರುವುದು ಸುಳ್ಳು. ಅವರ ತಂದೆ ಕ್ಯಾನ್ಸರ್‌ನಿಂದ ನರಳಾಡುತ್ತಿದ್ದಾಗ ನಾವು ಸಹಾಯ ಮಾಡಿದ್ದೇವೆ. ಬೆಂಗಳೂರಿನವರು ಸಹಾಯ ಮಾಡಿಲ್ಲ ಎಂದು ಕುಟುಕಿದರು.

ಲಕ್ಷ್ಮಿ ಅವರಿಗೆ ಸೇರಿದ ಹರ್ಷಾ ಸಕ್ಕರೆ ಕಾರ್ಖಾನೆಯ ವಹಿವಾಟಿನ ಕುರಿತು ಆದಾಯ ತೆರಿಗೆ ಇಲಾಖೆಯಲ್ಲಿ ವಿಚಾರಣೆ ನಡೆದಿದೆ. ಮುಂದೊಂದು ದಿನ ಲಕ್ಷ್ಮಿ ಅವರು ತೊಂದರೆ ಅನುಭವಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ನಾನು ಸಚಿವ ಹೇಗಾದೆ ಎನ್ನುವುದನ್ನು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನನ್ನ ಪರ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಪರ ನಾನು ಲಾಬಿ ಮಾಡಿದ್ದೆ. ಅವರು ಕೂಡ ನನ್ನ ಗೆಳೆಯರಾಗಿದ್ದಾರೆ ಎಂದು ಹೇಳಿದರು.

ಪ್ರತಿಕ್ರಿಯಿಸಲ್ಲ– ಲಕ್ಷ್ಮಿ; ‘ಚುನಾವಣೆ ಹಾಗೂ ಜಾರಕಿಹೊಳಿ ಅವರ ಹೇಳಿಕೆ ಕುರಿತು ಏನನ್ನೂ ಪ್ರತಿಕ್ರಿಯಿಸುವುದಿಲ್ಲ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ’ಪ್ರಜಾವಾಣಿ’ಗೆ ತಿಳಿಸಿದರು.

‘ಅಶಿಸ್ತಿನ ವರ್ತನೆಯನ್ನು ಪಕ್ಷ ಸಹಿಸುವುದಿಲ್ಲ’
ನವದೆಹಲಿ:
‘ಸಚಿವರು, ಶಾಸಕರು ಸೇರಿದಂತೆ ಯಾರೇ ಆಗಿರಲಿ, ಅಶಿಸ್ತಿನಿಂದ ವರ್ತಿಸಿದರೆ ಪಕ್ಷ ಸಹಿಸುವುದಿಲ್ಲ. ಸಚಿವ ರಮೇಶ್‌ ಜಾರಕಿಹೊಳಿ ಅವರು ಇತರ ಮುಖಂಡರ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ತಿಳಿಸಿದರು.

ಎಐಸಿಸಿ ಖಜಾಂಚಿ ಅಹ್ಮದ್ ಪಟೇಲ್ ನೇತೃತ್ವದಲ್ಲಿ ಗುರುವಾರ ಇಲ್ಲಿ ನಡೆದ ದೇಶದ ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್ ಚುನಾವಣೆಗೂ ಕಾಂಗ್ರೆಸ್‌ ಪಕ್ಷಕ್ಕೂ, ಸರ್ಕಾರಕ್ಕೂ ಸಂಬಂಧ ಇಲ್ಲ. ಚುನಾವಣೆಯು ನ್ಯಾಯಾಲಯದ ಆದೇಶದಂತೆ ನಡೆಯುತ್ತಿದೆ. ಇದೇ ಕಾರಣವನ್ನು ಮುಂದಿರಿಸಿ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು ಹರಿಹಾಯ್ದರು.

ವೈಯಕ್ತಿಕ ಹಾಗೂ ಸ್ಥಳೀಯ ವಿಷಯಗಳ ಕುರಿತು ಭಿನ್ನಾಭಿಪ್ರಾಯ ಇದ್ದಲ್ಲಿ ಅಲ್ಲಿಯೇ ಬಗೆಹರಿಸಿಕೊಳ್ಳದೆ, ಬಹಿರಂಗವಾಗಿ ಇತರ ಮುಖಂಡರ ಬಗ್ಗೆ ಮಾತನಾಡುವುದು ಸರಿಯಲ್ಲ. ಸಾರ್ವಜನಿಕವಾಗಿ ಹೇಳಿಕೆ ನೀಡುವ ಮೂಲಕ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಬೆಳವಣಿಗೆಯನ್ನು ಖಂಡಿತ ಸಹಿಸಲಾಗದು ಎಂದು ಅವರು ಎಚ್ಚರಿಕೆ ನೀಡಿದರು.

‘ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರಾದ ರಮೇಶ ಜಾರಕಿಹೊಳಿ, ಡಿ.ಕೆ. ಶಿವಕುಮಾರ್, ಯಮಕನಮರಡಿ ಶಾಸಕ ಸತೀಶ್‌ ಜಾರಕಿಹೊಳಿ ಅವರೊಂದಿಗೆ ಶುಕ್ರವಾರವೇ ಮಾತುಕತೆ ನಡೆಸಿ ವಿವಾದ ಬಗೆಹರಿಸಲು ಯತ್ನಿಸುತ್ತೇನೆ’ ಎಂದು ಅವರು ತಿಳಿಸಿದರು.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರೊಂದಿಗೆ ಈ ಕುರಿತು ಚರ್ಚಿಸಲಾಗಿದೆ. ಮುಖಂಡರ ನಡುವಿನ ಗೊಂದಲಗಳನ್ನು ಪಕ್ಷದ ಚೌಕಟ್ಟಿನಲ್ಲೇ ಬಗೆಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಪಿಎಲ್‌ಡಿ ಚುನಾವಣೆ: ಜಗಳ ಶಮನ ಹೊಣೆ ಖಂಡ್ರೆಗೆ
ಬೆಂಗಳೂರು:
ಜಾರಕಿಹೊಳಿ ಸೋದರರು ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಧ್ಯೆ ಉಂಟಾಗಿರುವ ಸಂಘರ್ಷವನ್ನು ತಕ್ಷಣಕ್ಕೆ ಶಮನಗೊಳಿಸುವ ಹೊಣೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ವಹಿಸಲಾಗಿದೆ.

ಶುಕ್ರವಾರ ನಡೆಯಲಿರುವ ಬೆಳಗಾವಿ ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕರ ಚುನಾವಣೆ ವೇಳೆ ಖುದ್ದು ಹಾಜರಿದ್ದು, ಯಾವುದೇ ಗೊಂದಲಕ್ಕೆ ಅವಕಾಶ ಕೊಡದಂತೆ ಚುನಾವಣೆ ನಡೆಸಿ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಖಂಡ್ರೆ ಅವರಿಗೆ ಸೂಚಿಸಿದ್ದಾರೆ. ಖಂಡ್ರೆ ಅವರು ಬೆಳಗಾವಿಗೆ ಭೇಟಿ ನೀಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !