ಬುಧವಾರ, ಡಿಸೆಂಬರ್ 11, 2019
27 °C

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ: ಶಾಸಕ ಗಣೇಶ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಲಿ: ‘ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಗಳಾಗಬೇಕು ಎನ್ನುವುದು ಕಾಂಗ್ರೆಸ್‌ ಪಕ್ಷದ 50 ಶಾಸಕರ ಕನಸು ಆಗಿದ್ದು, ಇದಕ್ಕಾಗಿ ಯಾವುದೇ ತ್ಯಾಗಕ್ಕೂ ಎಲ್ಲರೂ ಸಿದ್ಧರಿದ್ದೇವೆ’ ಎಂದು ಶಾಸಕ ಜೆ.ಎನ್‌. ಗಣೇಶ್‌ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಹಾಲುಮತ ಸಮಾಜದವರು ಹಮ್ಮಿಕೊಂಡಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘2019ರ ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್‌ ಶಾಸಕರ ಆಶಯದಂತೆ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆ ಇದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯನವರು ನಮಗೆ ಹೈಕಮಾಂಡ್. ಅವರನ್ನು ಬಿಟ್ಟು ಪಕ್ಷ ಬದಲಿಸುವುದಿಲ್ಲ. ತಾವು ಆಪರೇಷನ್‌ ಕಮಲಕ್ಕೆ ಬಲಿಯಾಗಿದ್ದಾರೆ ಎನ್ನುವುದು ಕೇವಲ ವದಂತಿ’ ಎಂದು ಸ್ಪಷ್ಟಪಡಿಸಿದರು.

‘ಬಳ್ಳಾರಿ ಜಿಲ್ಲೆಯ ಆರು ಕಾಂಗ್ರೆಸ್‌ ಶಾಸಕರಲ್ಲಿ ಒಬ್ಬರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನ ನೀಡಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸುವಂತೆ ಸಿದ್ದರಾಮಯ್ಯ ಅವರನ್ನು ಕೋರಲಾಗಿದೆ’ ಎಂದರು.

‘ಎಐಸಿಸಿ ಆದೇಶದ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯದ ಅಚ್ಚಂಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ವಂಶಿಕೃಷ್ಣ ಸೇರಿದಂತೆ ಇತರೆ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿ ಪರ ಐದು ದಿನಗಳ ಕಾಲ ಇತ್ತೀಚೆಗೆ ಮತಯಾಚನೆಗೆ ತೆರಳಿದ್ದೆ. ತೆಲಂಗಾಣದಲ್ಲಿ ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕಂಪ್ಲಿ ಪಟ್ಟಣದ ಎಲ್ಲ ವಾರ್ಡ್‌ಗಳ ಅಭಿವೃದ್ಧಿ ಮತ್ತು ಸಮಸ್ಯೆಗಳ ಇತ್ಯರ್ಥಕ್ಕಾಗಿ, ವಾರ್ಡ್‌ಗೆ ಭೇಟಿ ನೀಡಿ ಪರಿಹರಿಸುವಂತೆ ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ ಅವರಿಗೆ ಸೂಚಿಸಿರುವುದಾಗಿ’ ಹೇಳಿದರು.

ಹಾಲುಮತ ಸಮಾಜದ ಅಧ್ಯಕ್ಷ ಬಿ. ಗಾದಿಲಿಂಗಪ್ಪ, ಸಾಂಗತ್ರಯ ಸಂಸ್ಕೃತ ಪಾಠಶಾಲೆ ಅಧ್ಯಕ್ಷ ಎಸ್.ಎಸ್.ಎಂ. ಚನ್ನಯ್ಯಸ್ವಾಮಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು