ಆಗಸ್ಟ್‌ನಲ್ಲಿ ವಾಡಿಕೆ ಮಳೆ ಅನುಮಾನ?

7

ಆಗಸ್ಟ್‌ನಲ್ಲಿ ವಾಡಿಕೆ ಮಳೆ ಅನುಮಾನ?

Published:
Updated:

ಬೆಂಗಳೂರು: ಪೂರ್ವ ಮುಂಗಾರು ಮತ್ತು ಮುಂಗಾರು ಪ್ರಾರಂಭದಲ್ಲಿ ನಗರದಲ್ಲಿ ಆರ್ಭಟಿಸಿದ್ದ ಮಳೆ ಜುಲೈ ಬಳಿಕ ತಣ್ಣಗಾಗಿದೆ. ಆಗಸ್ಟ್‌ನಲ್ಲಿ ಇಲ್ಲಿಯವರೆಗೆ ಕೇವಲ 73 ಮಿ.ಮೀ ಮಳೆಯಾಗಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ದಶಕದಲ್ಲಿಯೇ ಅತಿಹೆಚ್ಚು ಮಳೆ 351.8 ಮಿ.ಮೀ ಸುರಿದಿತ್ತು. ಒಂದೇ ದಿನದಲ್ಲಿ 128.7 ಮೀ.ಮಿ ಮಳೆ ದಾಖಲಾಗಿತ್ತು. ಆಗಸ್ಟ್‌ ಪೂರ್ಣಗೊಳ್ಳಲು ಇನ್ನೇನು 10 ದಿನಗಳು ಬಾಕಿ ಇದೆ.  ‘ದಾಖಲೆಯನ್ನು ಸರಿಗಟ್ಟುವುದಿರಲಿ, ಈ ಬಾರಿ ಆಗಸ್ಟ್‌ ತಿಂಗಳ ವಾಡಿಕೆ ಮಳೆಯಾಗುವುದೂ ಅನುಮಾನ’ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.

‘ಬೆಂಗಳೂರು ಹಾಗೂ ಸುತ್ತಮುತ್ತಲೂ ಉತ್ತಮ ಮಳೆಗೆ ಪೂರಕ ಹವಾಮಾನ ಇರಲಿಲ್ಲ. ಹಾಗಾಗಿ ಈ ಬಾರಿ ಇಲ್ಲಿ ಹೆಚ್ಚಿನ ಮಳೆಯಾಗಿಲ್ಲ. ಅರಬ್ಬೀ ಸಮುದ್ರದ ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಇಲ್ಲಿ ತುಂತುರು ಮಳೆಯಾಗುತ್ತಿದೆ’ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಎಂಡಿಸಿ) ನಿರ್ದೇಶಕ ಜಿ.ಎಸ್‌. ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದರು.

‘ಆಗಸ್ಟ್‌ನಲ್ಲಿ 141.6 ಮಿ.ಮೀ ವಾಡಿಕೆಯ ಮಳೆಯಾಗುತ್ತದೆ. ಮುಂದಿನ 10 ದಿನಗಳಲ್ಲಿ ನಗರದಲ್ಲಿ ಸಾಧಾರಣ ಮಳೆಯಾಗಲಿದೆ. ಭಾರಿ ಮಳೆಯ ಯಾವುದೇ ಮುನ್ಸೂಚನೆ ಇಲ್ಲ. ಕಳೆದ ವರ್ಷ ಜೂನ್‌, ಜುಲೈನಲ್ಲಿ ನಗರದಲ್ಲಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ಆಗಸ್ಟ್‌ನಲ್ಲಿ ಭಾರಿ ಮಳೆ ಸುರಿದಿತ್ತು. ಈ ಬಾರಿ ಪೂರ್ವ ಮುಂಗಾರಿನಲ್ಲಿಯೇ ಹೆಚ್ಚು ಮಳೆಯಾಗಿದೆ’ ಎಂದರು.

ಮುಂದಿನ 48 ಗಂಟೆಗಳಲ್ಲಿ ನಗರದಲ್ಲಿ ಸಾಧಾರಣ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್‌ 2ರಂದು 15 ಮಿ.ಮೀ ಮಳೆ ಸುರಿದಿದ್ದು, ಈ ತಿಂಗಳಲ್ಲಿ ಸುರಿದ ಅತಿ ಹೆಚ್ಚು ಮಳೆಯಾಗಿದೆ.

ಶೇ 27ರಷ್ಟು ಮಳೆ ಕೊರತೆ: ಕೆಎಸ್‌ಎನ್‌ಎಂಡಿಸಿ ವರದಿ ಪ್ರಕಾರ ನಗರದಲ್ಲಿ ಜೂನ್‌ 1ರಿಂದ ಆಗಸ್ಟ್‌ 14ರವರೆಗೆ ಒಟ್ಟು 118.91 ಮಿ.ಮೀ ಮಳೆ ಸುರಿದಿದ್ದು, ಶೇ 27ರಷ್ಟು ಮಳೆ ಕೊರತೆ ಉಂಟಾಗಿದೆ.

Tags: 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 1

  Sad
 • 2

  Frustrated
 • 0

  Angry

Comments:

0 comments

Write the first review for this !