ಬುಧವಾರ, ನವೆಂಬರ್ 13, 2019
24 °C

ದೇಗುಲಗಳಲ್ಲಿ ಸಾಮೂಹಿಕ ವಿವಾಹ

Published:
Updated:

ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲು ಸರ್ಕಾರ ಸಿದ್ಧತೆ ಆರಂಭಿಸಿದ್ದು, ಮುಂದಿನ ಮಾರ್ಚ್‌ ವೇಳೆಗೆ ಚಾಲನೆ ಪಡೆದುಕೊಳ್ಳಲಿದೆ.

ಮುಜರಾಯಿ ವ್ಯಾಪ್ತಿಯಲ್ಲಿ ‘ಎ’ ದರ್ಜೆಯ 190 ದೇವಸ್ಥಾನಗಳಿದ್ದು, ಅಗತ್ಯ ಮೂಲ ಸೌಕರ್ಯ ಹೊಂದಿರುವ 100 ದೇವಸ್ಥಾನಗಳಲ್ಲಿ ವಿವಾಹ ಕಾರ್ಯ ನೆರವೇರಿಸಲಾಗುತ್ತದೆ. 10 ಸಾವಿರ ಜೋಡಿ ವಿವಾಹ ಮಾಡಿಸುವ ಗುರಿ ಹಾಕಿಕೊಳ್ಳಲಾಗಿದೆ.

‘ವಧು– ವರರಿಗೆ ವಸ್ತ್ರ, 8 ಗ್ರಾಂ ಚಿನ್ನದ ಮಾಂಗಲ್ಯ ಹಾಗೂ ಆರ್ಥಿಕ ಸಹಾಯ ಮಾಡಲಾಗುವುದು. ಇದರಿಂದ ಬಡವರಿಗೆ ಸಹಕಾರಿಯಾಗಲಿದೆ. ಧಾರ್ಮಿಕ ಪರಿಷತ್, ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳ ಮೂಲಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗುವುದು. ಸಂಘ ಸಂಸ್ಥೆಗಳು, ದಾನಿಗಳು,ಕೈಗಾರಿಕೋದ್ಯಮಿಗಳ ಜತೆಗೆ ಚರ್ಚಿಸಲಾಗುವುದು’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಪ್ರತಿ ಜೋಡಿ ವಿವಾಹಕ್ಕೆ ಸುಮಾರು ₹25,000ದಿಂದ 30 ಸಾವಿರ ಖರ್ಚು ಬರಲಿದೆ. ಎಲ್ಲ ಸಿದ್ಧತೆಯೊಂದಿಗೆ 10 ಸಾವಿರ ಜೋಡಿಗಳಿಗೆ ಮದುವೆ ಮಾಡಿಸಲು ₹ 25ರಿಂದ 30 ಕೋಟಿ ಬೇಕಾಗಬಹುದು. ಈ ವೆಚ್ಚವನ್ನು ಆಯಾ ದೇವಸ್ಥಾನಗಳ ಆದಾಯದಿಂದಲೇ ಭರಿಸಲಾಗುತ್ತದೆ. ಅಷ್ಟೂ ವೆಚ್ಚವನ್ನು ದೇವಸ್ಥಾನದಿಂದ ನೀಡಲು ಸಾಧ್ಯವಾಗದಿದ್ದರೆ ಉದ್ಯಮಿಗಳಿಂದ ನೆರವು ಪಡೆಯುವ ಬಗ್ಗೆ ಚಿಂತಿಸಲಾಗಿದೆ ಎಂದರು.

ಪ್ರತಿಕ್ರಿಯಿಸಿ (+)