ಮೂರು ಬಾರಿ ಬಣ್ಣ ಹೊಡೆದದ್ದು ಬಿಟ್ಟರೆ ಸರ್ಕಾರ ಮಾಡಿದ್ದೇನು?

7
95 ವರ್ಷಗಳ ಹಳೆಯ ಸೇತುವೆ ಕಥೆ ಹೇಳಿದ ಐವಾನ್‌

ಮೂರು ಬಾರಿ ಬಣ್ಣ ಹೊಡೆದದ್ದು ಬಿಟ್ಟರೆ ಸರ್ಕಾರ ಮಾಡಿದ್ದೇನು?

Published:
Updated:
ಡಿ.ರೇವಣ್ಣ ಜತೆ ಸಮಾಲೋಚನೆಯಲ್ಲಿ ತೊಡಗಿರುವ ಐವಾನ್‌ ಡಿಸೋಜಾ.

ಬೆಂಗಳೂರು: ‘ಈ ಉಕ್ಕಿನ ಸೇತುವೆ ನಿರ್ಮಾಣಗೊಂಡಿದ್ದು 1923 ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಮೂರು ಬಾರಿ ಸಿಲ್ವರ್‌ ಬಣ್ಣದ ಪೈಂಟ್‌ ಬಳಿದಿದ್ದು ಬಿಟ್ಟರೆ, ಈವರೆಗೂ ಅದರ ನಿರ್ವಹಣೆಯೇ ಆಗಿಲ್ಲ. ಕೆಲವು ದಿನಗಳ ಹಿಂದೆ ಭಾರಿ ಮಳೆ ಮತ್ತು ಪ್ರವಾಹದಿಂದ ಅದು ಕುಸಿದು ಹೋಗಿದೆ.’

ಮಂಗಳೂರು ಸಮೀಪದ ಗುರುಪುರ ನದಿಗೆ ನಿರ್ಮಿಸಿದ್ದ ಉಕ್ಕಿನ ಸೇತುವೆಯ ಇತಿಹಾಸ ಮತ್ತು ಅದರ ಇಂದಿನ ಸ್ಥಿತಿಗತಿಯನ್ನು ವಿಧಾನಪರಿಷತ್ತಿನಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟವರು ಕಾಂಗ್ರೆಸ್‌ ಸದಸ್ಯ ಐವಾನ್‌ ಡಿಸೋಜಾ.

ಬ್ರಿಟಿಷರ ಆಡಳಿತದಲ್ಲಿ ತೆರಿಗೆ ಸಂಗ್ರಹಕ್ಕೆ ಅವರ ಕುದುರೆ ಮತ್ತು ಕುದುರೆ ಗಾಡಿಗಳ ಸಂಚಾರಕ್ಕೆಂದೇ  ಸೇತುವೆ ನಿರ್ಮಿಸಿದ್ದರು. ಅದಕ್ಕೀಗ 95 ವರ್ಷಗಳು ತುಂಬಿದೆ. ಸೇತುವೆಯ ಬಾಳಿಕೆ ಅವಧಿ 50 ವರ್ಷಗಳಾಗಿತ್ತು. ಆ ಅವಧಿ ಮುಗಿದು 45 ವರ್ಷ ಕಳೆದರೂ ಪಕ್ಕದಲ್ಲಿ ಪರ್ಯಾಯ ಸೇತುವೆ ನಿರ್ಮಾಣ ಮಾಡಲಿಲ್ಲ.ಈ ಅವಧಿಯಲ್ಲಿ ಬಣ್ಣ ಬಳಿದಿದ್ದು ಬಿಟ್ಟರೆ, ಸೇತುವೆಯ ದೃಢತೆ ಮತ್ತು  ಕ್ಷಮತೆಯ ಬಗ್ಗೆ ಒಮ್ಮೆಯೂ ಪರೀಕ್ಷೆ ನಡೆಸಲಿಲ್ಲ. ಸಣ್ಣ–ಪುಟ್ಟ ರಿಪೇರಿಯೂ ಆಗಲಿಲ್ಲ ಎಂದು ಹೇಳಿದರು.

18 ವರ್ಷಗಳ ಹಿಂದೆ ಈ ಸೇತುವೆ ಇರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಲಾಯಿತು. ‘ಎನ್‌ಎಚ್‌ 169’ ಎಂಬ ಬೋರ್ಡ್‌ ಬದಲಿಸಿದ್ದು ಬಿಟ್ಟರೆ, ರಸ್ತೆ ನಿರ್ವಹಣೆಗಾಗಿ ಒಂದು ಪೈಸೆಯೂ ಖರ್ಚು ಮಾಡಲಿಲ್ಲ. ಈಗ ಸೇತುವೆ ಕುಸಿದಿರುವುದರಿಂದ 15 ದಿನಗಳಿಂದ ಅಲ್ಲಿ ವಾಹನ ಸಂಚಾರ ನಿಂತು ಹೋಗಿದೆ. ಸಾವಿರಾರು ವಾಹನಗಳು ಪರ್ಯಾಯ ಮಾರ್ಗವಾಗಿ ಮಂಗಳೂರು ಮತ್ತು ಇತರ ಕಡೆ ಹೋಗಬೇಕಾಗಿದೆ ಎಂದು ಐವಾನ್‌ ತಿಳಿಸಿದರು.

ಮಂಗಳೂರು– ಸೋಲಾಪುರ ನಡುವಿನ ಈ ಹೆದ್ದಾರಿಯು ಶಿವಮೊಗ್ಗ, ತೀರ್ಥಹಳ್ಳಿ, ಹೊಸಪೇಟೆ ಮೂಲಕ ಹಾದು ಹೋಗುತ್ತದೆ. ಇದನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ಮಾರ್ಪಡಿಸಬೇಕು. ರಾಷ್ಟ್ರೀಯ ಹೆದ್ದಾರಿ ಎಂಬ ಹಣೆ ಪಟ್ಟಿ ಗಿಟ್ಟಿಸಿಕೊಂಡರೂ ಅತ್ಯಂತ ಕಿರಿಯದಾದ ಈ ರಸ್ತೆಯಲ್ಲಿ ಅಸಂಖ್ಯಾತ ಅಪಘಾತಗಳಾಗಿ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಸರ್ಕಾರದ ಗಮನ ಸೆಳೆದರು.

ಹೊಸ ಸೇತುವೆ ಭರವಸೆ: ಈ ಸೇತುವೆಯ ಪಕ್ಕದಲ್ಲಿ ₹38 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಿಸಲಾಗುವುದು. ಈ ಕುರಿತ ಪ್ರಸ್ತಾವನೆಯೊಂದನ್ನು ಕೇಂದ್ರ ಸರ್ಕಾರಕ್ಕೆ ಕಳೆದ ಮಾರ್ಚ್‌ನಲ್ಲಿ ಕಳಿಸಲಾಗಿದೆ. ಒಪ್ಪಿಗೆ ಬಂದ ತಕ್ಷಣವೇ ಹೊಸ ಸೇತುವೆ ನಿರ್ಮಾಣ ಆರಂಭಿಸುವುದಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಭರವಸೆ ನೀಡಿದರು.

ನದಿಯಲ್ಲಿ ನೀರಿನ ಹರಿವು ಅಧಿಕವಾಗಿರುವುದರಿಂದ ಸದ್ಯಕ್ಕೆ ಸೇತುವೆ ದುರಸ್ಥಿ ಸಾಧ್ಯವಾಗುವುದಿಲ್ಲ. ನೀರಿನ ಹರಿವು ಕಡಿಮೆ ಆದ ತಕ್ಷಣ ದುರಸ್ಥಿ ಮಾಡಲಾಗುವುದು. ಪರ್ಯಾಯ ಸೇತುವೆಯನ್ನೂ ನಿರ್ಮಿಸಲಾಗುವುದು ಎಂದು ರೇವಣ್ಣ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !