ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪ್ರೊ: ವಿದ್ಯುತ್ ಉಪಕರಣ ನಿಯಂತ್ರಣ ಆ್ಯಪ್‌

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಿದ್ಯುನ್ಮಾನ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ವಿಪ್ರೊ ಕಂಪನಿಯು ಗೃಹ ಬಳಕೆಯ ಎಲೆಕ್ಟ್ರಿಕಲ್ ಉತ್ಪನ್ನಗಳಲ್ಲಿ ವಿದ್ಯುತ್‌ ಮಿತವ್ಯಯ ತಂತ್ರಜ್ಞಾನ ಸೇರಿದಂತೆ ಅವುಗಳ ನಿಯಂತ್ರಣಕ್ಕಾಗಿ ನೂತನ ಆ್ಯಪ್‌ ವಿನ್ಯಾಸ ಮಾಡಿದೆ. ಈ ಉತ್ಪನ್ನಗಳನ್ನು ಬಳಕೆ ಮಾಡುವುದರಿಂದ ಶೇ 40 ರಷ್ಟು ವಿದ್ಯುತ್ ಉಳಿತಾಯ ಮಾಡಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ.

Wipro Z NXT ಎಂಬ ಅಭಿಯಾನವನ್ನು ಸಂಸ್ಥೆ ಆರಂಭಿಸಿದೆ. ಕಂಪನಿ ತಯಾರಿಸುವ ಎಲ್ಲ ಉತ್ಪನ್ನಗಳು ಬಳಕೆದಾರರ ಸ್ನೇಹಿಯಾಗಿರುವುದರ ಜತೆಗೆ ಇಂಧನ ಮಿತವ್ಯಯ ಮಾಡಲಿವೆ. ಇದರಲ್ಲಿ  ಎಲ್‌ಇಡಿ ವಿದ್ಯುತ್‌ ದೀಪಗಳು, ವೈರ್‌ಗಳು, ಸ್ವಿಚ್‌ಗಳು, ಸ್ಟೆಬಿಲೈಸರ್‌ಗಳು ಸೇರಿವೆ. ಗ್ರಾಹಕರೊಬ್ಬರು ಹೊಸದಾಗಿ ಮನೆಯನ್ನು ನಿರ್ಮಾಣ ಮಾಡಿದ್ದರೆ  ಆ ಮನೆಗೆ ಬೇಕಾಗುವ ಎಲ್ಲಾ ಮಾದರಿಯ ಎಲೆಕ್ಟ್ರಿಕಲ್ ಉಪಕರಣಗಳನ್ನು ವಿಪ್ರೊ ಒದಗಿಸಲಿದೆ. ಇದಕ್ಕಾಗಿ ಕಂಪೆನಿ  home automation solution ಎಂಬ ಯೋಜನೆ ರೂಪಿಸಿದ್ದು ಇದಕ್ಕಾಗಿ ಪ್ರತ್ಯೇಕ ಆ್ಯಪ್ ತಯಾರಿಸಿದೆ. ಮನೆಯಲ್ಲಿ ಬಳಕೆಯಾಗುವ ಎಲ್ಲ ಮಾದರಿಯ ಎಲೆಕ್ಟ್ರಿಕಲ್‌ ಉಪಕರಣಗಳನ್ನು   ಆ್ಯಪ್‌ ಮೂಲಕ ನಿಯಂತ್ರಣ ಮಾಡಬಹುದು. ಈ ಆ್ಯಪ್ ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿಯಲ್ಲಿ ಲಭ್ಯವಿದೆ.

ಗೂಗಲ್‌ ಪ್ಲೇಸ್ಟೋರ್‌: Wipro Z-nxt Home Automation

***

ಫೇಸ್‌ಬುಕ್‌ನಿಂದ ದೂರ ಸರಿಯುತ್ತಿರುವ ಯುವಕರು...

ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌ ಬಳಕೆಯಿಂದ ಅಮೆರಿಕದ ಯುವಕರು ಹಿಂದೆ ಸರಿಯುತ್ತಿದ್ದಾರೆ ಎಂದು ಇ–ಮಾರ್ಕೆಟ್‌ ಅಧ್ಯಯನ ವರದಿ ತಿಳಿಸಿದೆ.

ಅಮೆರಿಕದಲ್ಲಿ ಮಧ್ಯ ವಯಸ್ಕರು ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೆ ಹದಿ ಹರೆಯದ ಯುವಕರು ಫೇಸ್‌ಬುಕ್‌ ಬಳಕೆಯಿಂದ ಹಿಂದೆ ಸರಿಯುತ್ತಿದ್ದು ಸ್ನ್ಯಾಪ್‌ಚಾಟ್‌ ಮತ್ತು ಇನ್‌ಸ್ಟಾಗ್ರಾಂನತ್ತ ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2017ರ ಮಾಹಿತಿ ಪ್ರಕಾರ, ಶೇ 12.4 ರಷ್ಟು ಯುವಕರು ಫೇಸ್‌ಬುಕ್‌ ಬಳಕೆಯಿಂದ ಹಿಂದೆ ಸರಿದಿದ್ದಾರೆ. 12 ರಿಂದ 17 ವರ್ಷ ವಯೋಮಾನದವರಲ್ಲಿ ಶೇ 5.6 ರಷ್ಟು ಇಳಿಕೆ,  ಹಾಗೂ 18 ರಿಂದ 24 ವರ್ಷ ವಯೋಮಾನದವರ ಬಳಕೆಯಲ್ಲಿ ಶೇ 5.8 ರಷ್ಟು ಇಳಿಕೆಯಾಗಿದೆ ಎಂದು ಫೇಸ್‌ಬುಕ್‌ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಒಟ್ಟಾರೆ ಒಂದು ವರ್ಷದಲ್ಲಿ 20 ಲಕ್ಷ ಯುವಕರು ಫೇಸ್‌ಬುಕ್‌ ಬಳಕೆಯಿಂದ ಹಿಂದೆ ಸರಿದಿದ್ದಾರೆ. ಇವರೆಲ್ಲಾ 25 ವರ್ಷದೊಳಗಿನವರು ಎಂಬುದು ವಿಶೇಷ.

***

ಸಕ್ಕರೆ ಕಾಯಿಲೆ ಪತ್ತೆ ಹಚ್ಚುವ ಗ್ಯಾಜೆಟ್‌...

ಇಂಗ್ಲೆಂಡ್‌ ಮೂಲದ ವಿಜ್ಞಾನಿಗಳು ರಕ್ತದಲ್ಲಿ ಸಕ್ಕರೆ ಪ್ರಮಾಣ ಪತ್ತೆ ಹಚ್ಚುವ ಗ್ಯಾಜೆಟ್‌ ತಯಾರಿಸಿದ್ದಾರೆ. ಇದು ಧರಿಸಬಹುದಾದ ಗ್ಯಾಜೆಟ್‌ ಆಗಿದೆ. ಸಕ್ಕರೆ ಕಾಯಿಲೆ ಮಾತ್ರವಲ್ಲದೆ ಇತರೆ ಸೋಂಕು ಕಾಯಿಲೆಗಳನ್ನು ಈ ಗ್ಯಾಜೆಟ್‌ ಮೂಲಕ ಪತ್ತೆ ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇಲ್ಲಿನ ಗ್ಲಾಸ್ಗೊ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಈ ಗ್ಯಾಜೆಟ್‌ ಅಭಿವೃದ್ಧಿಪಡಿಸಿದೆ. ವಿಜ್ಞಾನಿಗಳ ತಂಡದಲ್ಲಿ ಭಾರತೀಯ ವಿಜ್ಞಾನಿಗಳೂ ಇದ್ದಾರೆ. ರಕ್ತವನ್ನು ಹೊರ ತೆಗೆಯದೆ ಅದರಲ್ಲಿನ ಸಕ್ಕರೆ, ಗ್ಲೂಕೋಸ್‌ ಮತ್ತು ಲವಣಾಂಶದ ಪ್ರಮಾಣವನ್ನು ಈ ಗ್ಯಾಜೆಟ್ ಮಾಪನ ಮಾಡಲಿದೆ ಎಂದು ಬ್ರಿಟನ್‌ ಮೂಲದ ಸೈನ್ಸ್‌ ಜರ್ನಲ್‌ ವರದಿ ಮಾಡಿದೆ.

ಈ ಗ್ಯಾಜೆಟ್‌ ಚರ್ಮದ ಮೂಲಕವೇ ರಕ್ತವನ್ನು ಮಾಪನ ಮಾಡಲಿರುವುದು ವಿಶೇಷ. ಒಂದು  ಗ್ಯಾಜೆಟ್‌ ತಯಾರಿಸಿ ಪ್ರಯೋಗಕ್ಕೆ ಒಳ‍ಪಡಿಸಲಾಗಿದೆ.  ಪೇಟೆಂಟ್‌ ಹಾಗೂ ಸರ್ಕಾರದ ಒಪ್ಪಿಗೆ ಪಡೆದ ಬಳಿಕ ಈ ಗ್ಯಾಜೆಟ್‌ ಮಾರುಕಟ್ಟೆಗೆ ಬರಲಿದೆ.

***

ಬಹೂಪಯೋಗಿ ರೈತ ಆ್ಯಪ್‌...

ಪಂಜಾಬ್‌ ಸರ್ಕಾರ ರೈತರಿಗಾಗಿ ನೂತನ ಆ್ಯಪ್‌ ಅಭಿವೃದ್ಧಿಪಡಿಸಿದೆ. ಇದರ ಮೂಲಕ ರೈತರು ಬೇಸಾಯ, ಬಿತ್ತನೆ, ಕಟಾವು ಹಾಗೂ ಮಾರುಕಟ್ಟೆ ಮಾಹಿತಿಯನ್ನು ಬೆರಳ ತುದಿಯಲ್ಲೇ ಪಡೆಯಬಹುದು.

ಪಂಜಾಬ್‌ ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಈ ಆ್ಯಪ್‌ ವಿನ್ಯಾಸ ಮಾಡಲಾಗಿದೆ.

ಒಕ್ಕಣೆ, ಹವಾಮಾನ ವರದಿ, ರಾಸಾಯನಿಕ ಗೊಬ್ಬರಗಳ ಮಾಹಿತಿ, ಕ್ರಿಮಿನಾಶಕಗಳು, ನೂತನ ತಂತ್ರಜ್ಞಾನ, ಹೊಸ ಯಂತ್ರೋಪಕರಣಗಳು, ಕೃಷಿ ಮತ್ತು ಸಹಕಾರಿ ಬ್ಯಾಂಕ್‌ಗಳ ಸಾಲ ನೀತಿ,  ಕೃಷಿ ವಿಜ್ಞಾನಿಗಳ ಸಲಹೆಗಳು ಈ ಆ್ಯಪ್ ಮೂಲಕ ದೊರೆಯಲಿವೆ. ಆಂಡ್ರಾಯ್ಡ್‌ ಮಾದರಿಯಲ್ಲಿ ಸಿದ್ಧಪಡಿಸಿರುವ ಈ ಆ್ಯಪ್‌ ಅನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಪಾಕೆಟ್ ಚೇಂಜ್‌ ಆ್ಯಪ್‌....

ಭಾರತದ ಗ್ರಾಮೀಣ ಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಮೆರಿಕದ ವಿದ್ಯಾರ್ಥಿಗಳು ಹೊಸ ಆ್ಯಪ್‌ ಅನ್ನು ಅಭಿವೃದ್ದಿಪಡಿಸಿದ್ದಾರೆ. ಇದರ ಮೂಲಕ ಗ್ರಾಮೀಣ ಜನತೆ ಸುಲಭವಾಗಿ ಹಣಕಾಸು ವ್ಯವಹಾರ ನಡೆಸಬಹುದು ಎಂದು ಆ್ಯಪ್‌ ವಿನ್ಯಾಸ ಮಾಡಿದ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಬಿಲ್‌ ಮತ್ತು ಮಿಲಿಂಡಾ ಫೌಂಡೇಷನ್‌ ಆರ್ಥಿಕ ನೆರವಿನಲ್ಲಿ ಈ ಆ್ಯಪ್‌ ವಿನ್ಯಾಸ ಮಾಡಲಾಗಿದ್ದು ಇದಕ್ಕೆ ’ಪಾಕೆಟ್‌ ಚೇಂಜ್’ ಆ್ಯಪ್ ಎಂದು ಹೆಸರಿಡಲಾಗಿದೆ. ಈ ಆ್ಯಪ್ ಅಭಿವೃದ್ಧಿಪಡಿಸಿರುವ ವಿದ್ಯಾರ್ಥಿಗಳ ತಂಡದಲ್ಲಿ ಭಾರತ ಸಂಜಾತ ವಿದ್ಯಾರ್ಥಿಗಳು ಇದ್ದಾರೆ.

ಜನರ ಮೊಬೈಲ್‌ ಫೋನ್‌ಗಳಲ್ಲಿ ಪಾಕೆಟ್ ಚೇಂಜ್‌ ಆ್ಯಪ್‌ ಇದ್ದರೆ ಸಾಕು, ಅವರ ಜೇಬಿನಲ್ಲಿ ಎಟಿಎಂ ಇದ್ದಂತೆ ಎಂದು ಆ್ಯಪ್‌ ರೂಪಿಸಿದ ವಿದ್ಯಾರ್ಥಿಗಳು ಹೇಳಿದ್ದಾರೆ. ಇದರ ಮೂಲಕ ಎಲ್ಲಾ ರೀತಿಯ ಡಿಜಿಟಲ್‌ ವಹಿವಾಟು ನಡೆಸಬಹುದು. ಇದನ್ನು ಅನಕ್ಷರಸ್ಥ ರೈತರು ಕೂಡ ಗೊಂದಲವಿಲ್ಲದಂತೆ ಸರಳವಾಗಿ ಬಳಸುವಂತೆ ವಿನ್ಯಾಸ ಮಾಡಿರುವುದು ವಿಶೇಷ.

ಗೂಗಲ್‌ ಪ್ಲೇಸ್ಟೋರ್‌: Pocket Change app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT