ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿತ್ತು ಕಾಫಿ ಕಿಂಗ್‌ ವಿ.ಜಿ ಸಿದ್ದಾರ್ಥ ಸಾಗಿ ಬಂದ ಹಾದಿ

Last Updated 30 ಜುಲೈ 2019, 10:50 IST
ಅಕ್ಷರ ಗಾತ್ರ

ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ದಾರ್ಥ ಅವರನ್ನು ಅವರ ಹೆಸರಿನಿಂದ ಗುರುತಿಸುತ್ತಿದ್ದದ್ದು ಕೆಲವರಷ್ಟೇ. ಪ್ರತಿ ವರ್ಷ 160 ಕೋಟಿ ಕಪ್‌ ಕಾಫಿ ಕುದಿಸುತ್ತಿದ್ದ ಕಾಫಿ ಉದ್ಯಮದಿಂದಲೇ ಇವರು ಹೆಚ್ಚು ಪರಿಚಿತರಾದರು. ಭಾರತದ ಕಾಫಿರಾಜ ಎಂದು ಹೆಸರು ವಾಸಿಯಾದರು. ಇಷ್ಟೆಲ್ಲ ಹೆಸರು ತಂದುಕೊಟ್ಟ ಇವರ ಈ ಕಾಫಿ ಉದ್ಯಮ ಶುರುವಾಗಿದ್ದು, ಜರ್ಮನಿಯ ಕಾಫಿ ಉದ್ಯಮಿ ಜಿಬೊ ಅವರ ಭೇಟಿಯ ನಂತರ.

ರಾಷ್ಟ್ರೀಯ ಹೆದ್ದಾರಿ 66ನಲ್ಲಿ ಮಂಗಳೂರು ನಗರದಿಂದ ಉಳ್ಳಾಲ ಕಡೆಗೆ ಹೋಗುವ ಮಾರ್ಗದಲ್ಲಿರುವ ನೇತ್ರಾವತಿ ಸೇತುವೆ ಬಳಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ ಅವರು ಸೋಮವಾರ ರಾತ್ರಿ ನಾಪತ್ತೆಯಾಗಿದ್ದಾರೆ. ಪೊಲೀಸರಿಂದ ತೀವ್ರ ಶೋಧ ನಡೆಸಲಾಗುತ್ತಿದೆ.

ಆರಂಭಿಕ ಜೀವನ

ಸಿದ್ಧಾರ್ಥ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೌತಹಳ್ಳಿಯ (ಚೇತನಹಳ್ಳಿ ಎಸ್ಟೇಟ್‌) ಗಂಗಯ್ಯ ಹೆಗ್ಡೆ ಮತ್ತು ವಾಸಂತಿ ದಂಪತಿ ಪುತ್ರ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪುತ್ರಿ ಮಾಳವಿಕಾ ಅವರನ್ನು ವಿವಾಹವಾದರು.

ಸಿದ್ದಾರ್ಥ ಮಂಗಳೂರು ವಿಶ್ವವಿದ್ಯಾಲಯದಲ್ಲಿಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು.135 ವರ್ಷಗಳಿಂದ ಕಾಫಿ ಬೆಳೆಯುತ್ತಿದ್ದ ಕುಟುಂಬದಲ್ಲಿ ಹುಟ್ಟಿದ್ದರೂ, ಕಾಫಿ ಉದ್ಯಮಕ್ಕೆ ಕಾಲಿಡಲು ಇವರು ಹಿಂಜರಿಯುತ್ತಿದ್ದರು.ವಿದ್ಯಾಭ್ಯಾಸದ ನಂತರ 1983ರಲ್ಲಿ ತಮ್ಮ 24ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಪೋರ್ಟ್‌ಫೋಲಿಯೋ ಮ್ಯಾನೇಜ್‌ಮೆಂಟ್ ತರಬೇತಿಗಾಗಿ ಜೆ.ಎಂ.ಫೈನಾನ್ಷಿಯಲ್‌ ಲಿಮಿಟೆಡ್‌ನಲ್ಲಿ ಟ್ರೇನಿಯಾಗಿ ಕೆಲಸಕ್ಕೆ ಸೇರಿಕೊಂಡರು.

‘ನಿನಗಿಷ್ಟ ಬಂದ ವ್ಯಾಪಾರ ಆರಂಭಿಸು. ನಾನು ಬಂಡವಾಳ ಕೊಡುತ್ತೇನೆ’ ಎಂದು ಅವರ ತಂದೆ ಮಾತು ನೀಡಿದರು. ಹೀಗಾಗಿ ಜೆ.ಎಂ.ಫೈನಾನ್ಷಿಯಲ್‌ನಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ ನಂತರ ಸಿದ್ದಾರ್ಥ ಬೆಂಗಳೂರಿಗೆ ಹಿಂದಿರುಗಿದರು. ಅವರ ತಂದೆಯಿಂದ ಹಣ ಪಡೆದು ಸ್ವಂತ ಉದ್ಯಮ ಆರಂಭಿಸಿದರು.

₹30 ಸಾವಿರ ಷೇರು ಮಾರುಕಟ್ಟೆಯ ಕಾರ್ಡ್‌ನೊಂದಿಗೆ ಸಿದ್ದಾರ್ಥ ಬೆಂಗಳೂರಿಗೆ ವಾಪಾಸಾದರು. 1984ರಲ್ಲಿ ಹೂಡಿಗೆ ಸಲಹಾ ಸಂಸ್ಥೆ ಶಿವನ್‌ ಸೆಕ್ಯೂರಿಟಿಸ್‌ ಪ್ರಾರಂಭಿಸಿದರು. ಕೆಲ ದಿನಗಳಲ್ಲಿಯೇ ಟ್ರೇಡಿಂಗ್‌, ಮ್ಯೂಚುಯಲ್‌ ಫಂಡ್ಸ್‌ ಮತ್ತು ರಿಯಲ್‌ ಎಸ್ಟೇಟ್‌ ಕ್ಷೇತ್ರಗಳಿಗೂ ತಮ್ಮ ಸಲಹಾ ಸಂಸ್ಥೆಯನ್ನು ವಿಸ್ತರಿಸಿದರು. 2000ನೇ ಇಸವಿಯಲ್ಲಿ ಅದನ್ನು ವೇಟುವೆಲ್ತ್ ಎಂದು ಮರುನಾಮಕರಣ ಮಾಡಲಾಯಿತು. ತಂತ್ರಜ್ಞಾನ ಸ್ಟಾರ್ಟ್‌ಅಪ್‌ ಕಂಪನಿಗಳಲ್ಲಿ ಹಣ ಹೂಡುವ ಗ್ಲೋಬಲ್‌ ಟೆಕ್ನಾಲಜಿ ಕಂಪನಿಯನ್ನೂ ಶುರುಮಾಡಿದರು.

ಕೆಫೆ ಕಾಫಿ ಡೇ ಶುರುವಾದದ್ದು ಹೇಗೆ?

1993ರಲ್ಲಿ ಕಾಫಿ ಉದ್ಯಮಕ್ಕೆ ಕಾಲಿಟ್ಟ ಸಿದ್ದಾರ್ಥ, ಕಾಫಿ ಬೀಜಗಳ ವ್ಯಾಪಾರ ಮತ್ತು ರಫ್ತು ಪ್ರಾರಂಭಿಸಿದರು.ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿಯನ್ನು ಸ್ಥಾಪಿಸಿದರು. ಜೊತೆಗೆ ಹಾಸನದಲ್ಲಿ ಕಾಫಿ ಬೀಜಗಳ ಕ್ಯೂರಿಂಗ್‌ ಘಟಕವನ್ನು ಪ್ರಾರಂಭಿಸಿದರು. ಜರ್ಮನಿಯ ಕಾಫಿ ವ್ಯಾಪಾರಿ ಚಿಬೊಗೆ ಇವರ ಕಾಫಿ ಬೀಜಗಳನ್ನು ರಫ್ತುಮಾಡಲು ಶುರು ಮಾಡಿದರು.

1948, ಹ್ಯಾಮ್‌ಬರ್ಗ್‌ನಲ್ಲಿ ಚಿಬೊ ಚಿಕ್ಕದೊಂದು ಮಳಿಗೆಯಲ್ಲಿ ಕಾಫಿ ಉದ್ಯಮ ಪ್ರಾರಂಭಿಸಿದ್ದರು, ಕೆಲವೇ ವರ್ಷಗಳಲ್ಲಿ ಅದೊಂದು ಮಿಲಿಯನ್ ಡಾಲರ್‌ ಉದ್ಯಮವಾಗುವಷ್ಟು ಅಭಿವೃದ್ಧಿ ಹೊಂದಿತು. ಇದನ್ನು ನೋಡಿದ ಸಿದ್ದಾರ್ಥ ಭಾರತದಲ್ಲಿ ತಮ್ಮದೇ ಆದ ಕಾಫಿ ಮಳಿಗೆ ತೆರೆಯಬೇಕೆಂದು ಪಣತೊಟ್ಟರು.

ದಕ್ಷಿಣ ಭಾರತ ಫಿಲ್ಟರ್‌ ಕಾಫಿಗೆ ಹೆಸರುವಾಸಿ. ಇದನ್ನೇ ಗಮನದಲ್ಲಿಟ್ಟುಕೊಂಡು ಮೊದಲು ಕಾಫಿ ಪುಡಿಯನ್ನು ಮಾರಾಟ ಮಾಡಲು ಪ್ರಾರಂಭಿಸಿದ ಸಿದ್ದಾರ್ಥ, ಇದಕ್ಕಾಗಿ20 ಮಳಿಗೆಗಳನ್ನು ಸ್ಥಾಪಿಸಿದರು. ಕಾಫಿ ಬೀಜ ಹಾಗೂ ಕಾಫಿ ಪುಡಿ ಮಾರಾಟಕ್ಕೂ ಒಂದು ಕಪ್‌ ಕಾಫಿ ಮಾರಾಟಕ್ಕೂ ಇರುವ ಲಾಭದ ಪ್ರಮಾಣವನ್ನು ತಿಳಿದು ಸಿದ್ದಾರ್ಥಕೆಫೆ ಕಾಫಿ ಡೇ ಆರಂಭಿಸಿದರು.

ಕಾಫಿಯ ಮೇಲೆ ಲಟ್ಟೆ ಕಲೆ, ಕಾಪಚಿನೊ ಅಥವಾ ಮೊಚ ಎನ್ನುವುದು ಚಿರಪರಿಚಿತವಾಗಿದ್ದು,1996ರಲ್ಲಿ ಬೆಂಗಳೂರಿನಲ್ಲಿ ‘A lot can happen over a cup of coffee’ ಎನ್ನುವ ಟ್ಯಾಗ್‌ ಲೈನ್‌ ಮೂಲಕ ಹೊರಹೊಮ್ಮಿದ ಕೆಫೆ ಕಾಫಿ ಡೇ (ಸಿಸಿಡಿ)ಪ್ರಾರಂಭವಾದ ನಂತರವೇ.

ಕಾಫಿ ಉದ್ಯಮ ವಿಸ್ತಾರ

ಈ ಸಿಸಿಡಿ ಮಳಿಗೆಗಳಿಗೆ ಕಾಫಿ ಸರಬರಾಜಾಗುತ್ತಿದ್ದದ್ದು ಸಿದ್ದಾರ್ಥ ಅವರ ಚಿಕ್ಕಮಗಳೂರಿನಲ್ಲಿರುವ 10 ಸಾವಿರ ಎಕರೆ ಕಾಫಿ ಪ್ಲಾಂಟೇಷನ್‌ನಿಂದ. ‘ಲೈವ್‌ಮಿಂಟ್‌’ಗೆ ನೀಡಿದ ಸಂದರ್ಶನವೊಂದರಲ್ಲಿ ಸಿದ್ದಾರ್ಥ, ಮುಂದಿನ 5 ವರ್ಷಗಳಲ್ಲಿ ಕನಿಷ್ಟ 5 ಸಾವಿರ ಮಳಿಗೆಗಳನ್ನು ಪ್ರಾರಂಭಿಸುವ ಇಂಗಿತ ವ್ಯಕ್ತಪಡಿಸಿದ್ದರು.

2016ರಲ್ಲಿ ಸಿದ್ದಾರ್ಥ 1,607 ಕೆಫೆ, 579 ಎಕ್ಸ್‌ಪ್ರೆಸ್‌ ಕಿಯೋಸ್ಕ್‌ ಮತ್ತು 415 ಫ್ರೆಶ್‌ ಮತ್ತು ಗ್ರೌಂಡ್‌ ಮಳಿಗೆಗಳನ್ನು ಹೊಂದಿದ್ದರು. ಇದಲ್ಲದೆ, ಆಸ್ಟ್ರಿಯಾ, ಯೂರೋಪ್‌ನ ಜೆಕ್‌ ರಿಪಬ್ಲಿಕ್‌ ಮತ್ತು ದುಬೈನಲ್ಲೂ ಕಾಫಿ ಮಳಿಗೆಗಳನ್ನು ಹೊಂದಿದ್ದರು.ವಿವಾದಕ್ಕೊಳಗಾದ ಕರಾಚಿ ಗಡಿಯಲ್ಲಿಯೂ ತನ್ನ ಮಳಿಗೆಯನ್ನು ಸ್ಥಾಪಿಸಿರುವ ಕೆಲವೇ ಕೆಲವುಫ್ರಾಂಚೈಸಿಗಳಲ್ಲಿ ಕಾಫಿ ಡೇ ಸಹ ಒಂದು. ಆದರೆ, ಅದು ಹೆಚ್ಚು ದಿನ ನಡೆಯಲಿಲ್ಲ.2016ರ ಹಣಕಾಸು ವರ್ಷದಲ್ಲಿ ಸಿಸಿಡಿ ₹106 ಮಿಲಿಯನ್‌ ಏಕೀಕೃತ ಲಾಭವನ್ನು (ತೆರಿಗೆ ನಂತರದ ಲಾಭ) ತೋರಿಸಿತ್ತು.

ಬಂಡವಾಳ

2015ರಲ್ಲಿ ಸಿದ್ದಾರ್ಥ, ಕಾಫಿ ಡೇ ಉದ್ಯಮದ (ಎಸಿಬಿ) ಷೇರು ಮಾರಾಟ ಮಾಡಲು ನಿರ್ಧರಿಸಿದರು. ಪ್ರತಿ ಈಕ್ವಿಟಿ ಷೇರಿಗೆ ₹316 ರಿಂದ ₹328 ದರ ನಿಗದಿ ಪಡಿಸಲಾಯಿತು. ನಂದನ್‌ ನಿಲಕೇಣಿ, ಕೆಕೆಆರ್, ಸ್ಟಾಂಡರ್ಡ್‌ ಚಾರ್ಟೆಡ್‌ ಪ್ರೈವೇಟ್‌ ಈಕ್ವಿಟಿ, ನ್ಯೂ ಸಿಲ್ಕ್‌ ರೂಟ್‌ ಪಿಇ ಏಷ್ಯಾ ಫಂಡ್‌ ಮತ್ತು ಭಾರತದಅತಿದೊಡ್ಡ ಮಾಧ್ಯಮ ಸಂಸ್ಥೆಯಾದ ಬೆನೆಟ್‌ ಕೋಲ್ಮನ್‌ ಎಂಡ್‌ ಕಂಪನಿ ಇದರ ಪ್ರಮುಖ ಷೇರುದಾರರು.

ಇತರೆ ಉದ್ಯಮಗಳು

ಅನೇಕ ಉದ್ಯಮಗಳನ್ನು ಸಿದ್ದಾರ್ಥ ಹೊಂದಿದ್ದರು. 1995ರಲ್ಲಿ ಎಸ್‌ಐಸಿಎಲ್‌ ಸರಕು ಸಾಗಣೆ ಕಂಪನಿಯನ್ನು ಶುರುಮಾಡಿದರು. 73 ಎಕರೆ ಪ್ರದೇಶದಲ್ಲಿ ಇಕ್ಯುಬೇಷನ್‌ ಕೇಂದ್ರ ನಿರ್ಮಿಸಿದರು. ಚಿಕ್ಕಮಗಳೂರಿನಲ್ಲಿ ಪೀಠೋಪಕರಣ ತಯಾರಿಕೆಗಾಗಿ ‘ದಿ ಡಾರ್ಕ್‌ ಫಾರೆಸ್ಟ್‌’ ಫರ್ನಿಚರ್‌ ಕಂಪನಿಯನ್ನು ಪ್ರಾರಂಭಿಸಿದರು.

ಎನ್‌ಎಸ್‌ಇಎಲ್ ಹಗರಣದಲ್ಲಿ ವೇ 2 ವೆಲ್ತ್‌ ಪಾಲು?

ಸಾವಿರಾರು ಮಂದಿ ಹೂಡಿಕೆದಾರರನ್ನು ವಂಚಿಸಿರುವ ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್ (ಎನ್‌ಎಸ್‌ಇಎಲ್‌) ಹಗರಣದಲ್ಲಿ ವೇ 2 ವೆಲ್ತ್‌ ಪಾಲ್ಗೊಳ್ಳುವಿಕೆ ಇದೆ ಎಂದು ಶಂಕಿಸಿ ಸಿಬಿಐ ಕರ್ನಾಟಕದಲ್ಲೂ ದಾಳಿ ನಡೆಸಿತ್ತು. ಗ್ರಾಹಕರಿಗೆ ಷೇರು ಹಣ ಕೊಡದೆ ವಂಚಿಸಿದ್ದನ್ಯಾಶನಲ್ ಅಗ್ರಿಕಲ್ಚರಲ್ ಕೋಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಮೊದಲು ವೇ 2 ವೆಲ್ತ್‌ ಮೂಲಕ ಟ್ರೇಡ್‌ ಮಾಡಿತ್ತು ಎಂದು ಎನ್‌ಎಸ್‌ಇಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್‌ ಚತುರ್ವೇದಿ ಹೇಳಿಕೆ ನೀಡಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT