ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಂತ್ರಿ ಸ್ಥಾನ ಸಿಗಲೆಂದು ಹೋರಾಡಲಿಲ್ಲವೇಕೆ?

ಶಿಕ್ಷಕರಿಗೆ ಬಸವರಾಜ ಹೊರಟ್ಟಿ ಪ್ರಶ್ನೆ
Last Updated 26 ಫೆಬ್ರುವರಿ 2019, 19:15 IST
ಅಕ್ಷರ ಗಾತ್ರ

ಬೆಳಗಾವಿ: ‘ಶಿಕ್ಷಕರ ಪರವಾಗಿ ಹಲವು ವರ್ಷಗಳಿಂದ ಹೋರಾಡುತ್ತಿದ್ದೇನೆ. ಆದರೆ, ನನಗೆ ಮಂತ್ರಿ ಸ್ಥಾನ ಸಿಗಲೆಂದು ನೀವೇಕೆ ಹೋರಾಟ ಮಾಡಲಿಲ್ಲ?’ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಶಿಕ್ಷಕರನ್ನು ಕೇಳಿದರು.

ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಇಲ್ಲಿನ ಧರ್ಮನಾಥ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ 2018–19ನೇ ಸಾಲಿನ ಶೈಕ್ಷಣಿಕ ಸಮ್ಮೇಳನ ಹಾಗೂ ಪದಾಧಿಕಾರಿಗಳ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಾನು ಮಂತ್ರಿ ಆಗಿದ್ದರೆ ನಿಮ್ಮ ಸಮಸ್ಯೆಗಳೆಲ್ಲವನ್ನೂ ಬಗೆಹರಿಸುತ್ತಿದ್ದೆ. ರಾಜ್ಯದಲ್ಲಿ ವಿವಿಧ ಶಿಕ್ಷಕರ ಸಂಘಟನೆಗಳಿವೆ. ದುರ್ದೈವದಿಂದ ನನ್ನನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಿದಾಗ, ಸಚಿವ ಸ್ಥಾನ ವಂಚಿಸಿದಾಗ ನೀವ್ಯಾರೂ ದನಿ ಎತ್ತಲಿಲ್ಲ. ಈಗ, ಸಮಸ್ಯೆಗಳನ್ನು ಪರಿಹರಿಸಿಕೊಡಿ ಎಂದು ದಂಬಾಲು ಬಿದ್ದಿದ್ದೀರಾ?’ ಎಂದು ಕುಟುಕಿದರು.

‘ಶಿಕ್ಷಕರ ಪರವಾಗಿ ಹೋರಾಟಕ್ಕೆ ಯಾವಾಗಲೂ ಸಿದ್ಧವಿದ್ದೇನೆ. ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಿ, ಅದಕ್ಕೆ ಬೇಕಾಗುವ ಸಹಕಾರ ನೀಡುತ್ತೇನೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಪ್ರಶ್ನಿಸುವ ಧೈರ್ಯವಿದೆ. ಸಭಾಪತಿಯಾಗಿದ್ದರೆ ಟೀಕೆ–ಟಿಪ್ಪಣಿ ಮಾಡುವಂತಿರಲಿಲ್ಲ. ಆದರೆ, ಈಗ ಹಂಗಿಲ್ಲ. ಸಮ್ಮಿಶ್ರ ಸರ್ಕಾರದ ಬಗ್ಗೆ ಏನು ಬೇಕಾದರೂ ಮಾತನಾಡಬಹುದು’ ಎಂದು ಮಾರ್ಮಿಕವಾಗಿ ಹೇಳಿದರು.

‘ಶಿಕ್ಷಕರಾದವರು ಮಂತ್ರಿ ಅಥವಾ ಎಂಎಲ್‌ಸಿಗಳ ಮೇಲೆ ಅವಲಂಬಿತರಾಗಬೇಡಿ. ಸಂಘಟನೆ ಬಲಪಡಿಸಿ, ಹೋರಾಟವನ್ನು ನಂಬಬೇಕು. ನಿಮ್ಮೊಂದಿಗೆ ನಾನಿದ್ದೇನೆ’ ಎಂದರು.

ಸಮ್ಮೇಳನದಲ್ಲಿ ಮಾತನಾಡಿದ ವಿಧಾನಪರಿಷತ್‌ ಸದಸ್ಯರಾದ ಅರುಣ್‌ ಶಹಾಪುರ, ಹಣಮಂತ ನಿರಾಣಿ ಹಾಗೂ ಸಂಘದ ಪದಾಧಿಕಾರಿಗಳು, ಹೊರಟ್ಟಿ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು. ‘ಹೊರಟ್ಟಿಯವರೇ ನೀವು ಸಚಿವರಾಗೇ ಆಗ್ತೀರ. ಯಾಕೆ ಕಾಳಜಿ ಮಾಡ್ತೀರಾ. ನಾವಿದ್ದೀವಲ್ಲ?’ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾರ್ಮಿಕವಾಗಿ ಹೇಳಿದರು.

‘ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ಮುಖ್ಯಮಂತ್ರಿ ಬಳಿ ಇರುವುದರಿಂದ ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ. ಇದರಿಂದ ಇಲಾಖೆ ಅನಾಥವಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಾಣುತ್ತಿಲ್ಲ; ಬೇಡಿಕೆಗಳು ಈಡೇರುತ್ತಿಲ್ಲ’ ಎಂಬ ಅಭಿ‍ಪ್ರಾಯ ಸಮ್ಮೇಳನದಲ್ಲಿ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT