ಪತ್ನಿ ಹಂತಕನಿಗೆ 11 ದಿನಗಳಲ್ಲಿ ಶಿಕ್ಷೆ

7
ತ್ವರಿತ ವಿಚಾರಣೆಯಲ್ಲಿ ಇತಿಹಾಸ ಸೃಷ್ಟಿಸಿದ ಚಿತ್ರದುರ್ಗ ನ್ಯಾಯಾಲಯ

ಪತ್ನಿ ಹಂತಕನಿಗೆ 11 ದಿನಗಳಲ್ಲಿ ಶಿಕ್ಷೆ

Published:
Updated:

ಚಿತ್ರದುರ್ಗ: ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಘಟನೆ ನಡೆದ 11ನೇ ದಿನಕ್ಕೆ ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಇತಿಹಾಸ ಸೃಷ್ಟಿಸಿದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಶನಿವಾರ ಅಪರೂಪದ ಆದೇಶ ನೀಡಿದ್ದಾರೆ. ಅಪಘಾತ ಸಂಭವಿಸಿದ 19 ದಿನಗಳೊಳಗೆ ಸಂತ್ರಸ್ತರಿಗೆ ₹ 1.14 ಕೋಟಿ ಪರಿಹಾರ ಕೊಡಿಸಿ ಈ ಹಿಂದೆ ಗಮನ ಸೆಳೆದಿದ್ದರು.

ಚಳ್ಳಕೆರೆ ತಾಲ್ಲೂಕಿನ ವಲಸೆ ಗ್ರಾಮದ ಪರಮೇಶ್ವರ ಸ್ವಾಮಿ (75) ಶಿಕ್ಷೆಗೆ ಗುರಿಯಾದ ಅಪರಾಧಿ. ಶೀಲ ಶಂಕಿಸಿ ಪತ್ನಿ ಪುಟ್ಟಮ್ಮ (63) ಎಂಬುವರನ್ನು ಜೂನ್‌ 27ರಂದು ಕೊಲೆ ಮಾಡಿದ್ದನು. ಅಂದೇ ಆರೋಪಿಯನ್ನು ಬಂಧಿಸಿದ ಪೊಲೀಸರು ಎರಡು ದಿನಗಳಲ್ಲಿ ದೋಷಾರೋಪಪಟ್ಟಿ ಸಲ್ಲಿಸಿದ್ದರು.

ಜುಲೈ 3ರಂದು ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ಮೂರು ದಿನ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದರು. ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಹೆಸರಿಸಿದ 30 ಸಾಕ್ಷಿಗಳ ಪೈಕಿ ನಿರ್ಣಾಯಕವಾದ 17 ಸಾಕ್ಷ್ಯಗಳನ್ನು ಮಾತ್ರ ಪ್ರಾಸಿಕ್ಯೂಷನ್‌ ವಿಚಾರಣೆ ನಡೆಸಿತು. ವಾದ–ಪ್ರತಿವಾದ ಆಲಿಸಿದ ಮರುದಿನವೇ ನ್ಯಾಯಾಧೀಶರು 50 ಪುಟಗಳ ಆದೇಶವನ್ನು ಬರೆದರು.

ಪತಿ ನೀಡುತ್ತಿದ್ದ ಹಿಂಸೆಯನ್ನು ಪುಟ್ಟಮ್ಮ ಅವರು ಪುತ್ರ ಗಿರೀಶ್‌ (39) ಬಳಿ ಹೇಳಿಕೊಂಡಿದ್ದರು. ‘ತಂದೆಯ ವಿರುದ್ಧ ಸಾಕ್ಷ್ಯ ನುಡಿಯಲು ಯಾವುದೇ ಅಳುಕಿಲ್ಲ. ಸತ್ಯ ಹೇಳದಿದ್ದರೆ ತಾಯಿ ಆತ್ಮಕ್ಕೆ ಶಾಂತಿ ಸಿಗದು’ ಎಂದು ಗಿರೀಶ್‌ ಹೇಳಿದ್ದು ನ್ಯಾಯಾಲಯಕ್ಕೆ ಬಲವಾದ ಸಾಕ್ಷ್ಯವಾಯಿತು.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !