ಶುಕ್ರವಾರ, ಮೇ 29, 2020
27 °C
ಕಾಡಂಚಿನ ಗ್ರಾಮಗಳಲ್ಲಿ ನಿಲ್ಲದ ಬೇಟೆ, ಹೆಚ್ಚಾದ ಪ್ರಕರಣಗಳು

ವನ್ಯಜೀವಿಗಳ ಕೊರಳಿಗೆ ಉರುಳು

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ಬಂಡೀಪುರ ಮತ್ತು ನಾಗರಹೊಳೆ ಹುಲಿ ರಕ್ಷಿತಾರಣ್ಯಗಳ ಕಾಡಂಚಿನಲ್ಲಿ ವನ್ಯಜೀವಿಗಳಿಗೆ ಉರುಳು ಹಾಕುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಕಳೆದ ವಾರ ಉರುಳಿಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಹುಲಿ, ಕರಡಿ ರಕ್ಷಿಸಲಾಗಿದೆ.

ಕಾಡಂಚಿನ ಗ್ರಾಮಗಳ ಕೆಲವರು ಪ್ರಾಣಿಗಳ ಮಾಂಸಕ್ಕಾಗಿ ಉರುಳು ಹಾಕುತ್ತಾರೆ. ಆದರೆ, ಈ ಬಾರಿ ಮಾಂಸಕ್ಕಾಗಿ ಹಾಕಿರುವ ಉರುಳುಗಳಂತೆ ಕಾಣುತ್ತಿಲ್ಲ. ವನ್ಯಜೀವಿ ಬೇಟೆಗಾಗಿ ಹಾಕಿರುವ ಉರುಳಿನಂತೆ ಕಾಣುತ್ತಿವೆ ಎಂಬ ಅನುಮಾನ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮೂಡಿವೆ.

ನಾಗರಹೊಳೆ ಅರಣ್ಯದಂಚಿನ ವೀರನಹೊಸಹಳ್ಳಿ ವಲಯದ ಶೆಟ್ಟಹಳ್ಳಿ ಅರಣ್ಯ ಪ್ರದೇಶದ ನೇಗತ್ತೂರು ಗ್ರಾಮದ ಬಳಿ ಆನೆಕಂದಕಕ್ಕೆ ಹೊಂದಿಕೊಂಡಂತೆ ಇದ್ದ ಉರುಳಿಗೆ ಹುಲಿ ಸಿಲುಕಿತ್ತು. ಜನವಸತಿ ಗ್ರಾಮಕ್ಕಿಂತ 3 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಬೇಟೆಗಾರರೇ ಅಳವಡಿಸಿರಬಹುದು ಎಂದು ಸುತ್ತಮುತ್ತಲ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.‌ ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ನಿರಾಕರಿಸುತ್ತಾರೆ. ‘ಗೂಟವೊಂದಕ್ಕೆ ಉರುಳು ಹಾಕಿದ್ದು, ಬೇರೆಲ್ಲೋ ಸಿಲುಕಿದ ಹುಲಿ ಗೂಟದ ಸಮೇತ ಇಲ್ಲಿಗೆ ಬಂದಿದೆ. ಇದು ಇಲ್ಲಿ ಹಾಕಿದ ಉರುಳಲ್ಲ’ ಎಂದು ಹೇಳುತ್ತಾರೆ.

ಬಂಡೀಪುರ ಅರಣ್ಯ ವ್ಯಾಪ್ತಿಯ ಎಚ್.ಡಿ.ಕೋಟೆ ತಾಲ್ಲೂಕಿನ ಹೊಸ ಬೀರ್ವಾಳು ಗ್ರಾಮದ ಬಳಿ ಉರುಳಿಗೆ ಸಿಲುಕಿದ್ದ 5 ವರ್ಷದ ಗಂಡು ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಈ ಭಾಗದಲ್ಲಿ ಪ್ರಾಣಿಯೊಂದು ಉರುಳಿಗೆ ಸಿಲುಕಿರುವುದು ಇದೇ ಮೊದಲು ಎಂದು ಗ್ರಾಮಸ್ಥರು ಹೇಳುತ್ತಾರೆ.

ಇಲವಾಲ ಬಳಿ ದೊಡ್ಡ ಹುಲಿಯೊಂದರ ಚರ್ಮವನ್ನು ಮಾರಾಟ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಅರಣ್ಯ ಸಂಚಾರ ದಳದವರ ಕೈಗೆ ಸಿಕ್ಕಿಬಿದಿದ್ದ. ಪಿರಿಯಾಪಟ್ಟಣ ಭಾಗದ ಅರಣ್ಯದಂಚಿನಲ್ಲಿ ಉರುಳು ಹಾಕಿ ಹುಲಿ ಹಿಡಿದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಈತನ ಹೇಳಿಕೆ ಹಾಗೂ ಈಗ ನಡೆದಿರುವ ಘಟನೆಗಳು ಅರಣ್ಯದಂಚಿನಲ್ಲಿ ಉರುಳು ಹಾಕುವ ಬೇಟೆಗಾರರ ತಂಡ ಜಾಗೃತವಾಗಿರಬಹುದು ಎಂಬ ಅನುಮಾನಗಳಿಗೆ ಪುಷ್ಟಿ ನೀಡಿದೆ.

**
ಏನಿದು ಉರುಳು?

ವಿದ್ಯುತ್ ತಂತಿ, ಸಣ್ಣ ದಾರದ ಗಾತ್ರದಷ್ಟಿರುವ ತಂತಿಗಳನ್ನು ಸುರುಳಿಯಾಕಾರದಲ್ಲಿ ಸುತ್ತಿ ಬೇಲಿ, ಪೊದೆಗಳ ಬಳಿ ಇಡಲಾಗುತ್ತದೆ. ಪ್ರಾಣಿಗಳು ರಾತ್ರಿ ವೇಳೆ ಸಂಚರಿಸುವಾಗ ಇಂಥ ಸೂಕ್ಷ್ಮ ತಂತಿಯ ಉರುಳುಗಳು ಅವುಗಳ ಕಣ್ಣಿಗೆ ಕಾಣಿಸುವುದಿಲ್ಲ. ಅವುಗಳ ತಲೆ ಉರುಳಿಗೆ ಸಿಲುಕಿದರೆ ತಕ್ಷಣ ಅದು ಬಿಗಿಯಾಗಿ ಸ್ಥಳದಲ್ಲೇ ಮೃತಪಡುತ್ತವೆ. ಸಿಕ್ಕಿಹಾಕಿಕೊಂಡ ತಕ್ಷಣ ಕೊಸರಾಡಿ ಬಿಡಿಸಿಕೊಳ್ಳಲು ಯತ್ನಿಸಿದರೆ ಅಥವಾ ಕುತ್ತಿಗೆ ಬದಲು ದೇಹದ ಬೇರೆ ಭಾಗ ಸಿಕ್ಕಿಕೊಂಡರೆ ಅಲ್ಲೇ ಒದ್ದಾಡುತ್ತವೆ.

ಉರುಳಿನ ಹಿನ್ನೋಟ

* ಜುಲೈ 30ರಂದು ಮಲೆಮಹದೇಶ್ವರ ಬೆಟ್ಟದ ಭೋಳಿ ಅರಣ್ಯ ಪ್ರದೇಶದ ಕಿವುಡಾದ್ರಿ ಹಣೆ ಎಂಬಲ್ಲಿ ಕಾಡು ಬೇಟೆಗೆ ಹೊಂಚು ಹಾಕಿದ್ದ, ಹಣೆಹೊಲ ಗ್ರಾಮದ ಗುಂಡ ಹಾಗೂ ದುಂಡ ಎಂಬುವರನ್ನು ಬಂಧಿಸಿ, ಉರುಳು ವಶಪಡಿಸಿಕೊಳ್ಳಲಾಗಿತ್ತು.

* ಜುಲೈ 24ರಂದು ಸೋಮವಾರಪೇಟೆ ತಾಲ್ಲೂಕಿನ ಜೇನುಕಲ್ಲುಬೆಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಉರುಳು ಹಾಕಿ ಮುಳ್ಳುಹಂದಿ ಕೊಂದು ವಾಹನದಲ್ಲಿ ಸಾಗಿಸುತ್ತಿದ್ದ ಚಿನ್ನೇನಹಳ್ಳಿ ಗ್ರಾಮದ ಹನುಮಂತರೆಡ್ಡಿ ಎಂಬುವರನ್ನು ವಲಯ ಅರಣ್ಯ ಅಧಿಕಾರಿಗಳು ಬಂಧಿಸಿದ್ದರು.

* ಜೂನ್ 27ರಂದು ಸಕಲೇಶಪುರ ದೇವಾಲದಕೆರೆ ಗ್ರಾ.ಪಂ ವ್ಯಾಪ್ತಿಯ ಅತ್ತೀಬೀಡು– ಅಚ್ಚನಹಳ್ಳಿ ಗ್ರಾಮದ ಸಂಪರ್ಕ ರಸ್ತೆ ಬಳಿ ಉರುಳಿಗೆ ಸಿಲುಕಿ 4 ವರ್ಷದ ಗಂಡು ಚಿರತೆ ಮೃತಪಟ್ಟಿತು.

* ಡಿ. 7ರಂದು ನಾಗರಹೊಳೆ ಅರಣ್ಯದಂಚಿನ ಶೆಟ್ಟಹಳ್ಳಿ ಅರಣ್ಯ ಪ್ರದೇಶದ ನೇಗತ್ತೂರು ಗ್ರಾಮದ ಬಳಿ ಉರುಳಿಗೆ ಸಿಲುಕಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದರು.

* ಡಿ. 7ರಂದು ಬಂಡೀಪುರ ಅರಣ್ಯ ವ್ಯಾಪ್ತಿಯ ಎಚ್.ಡಿ.ಕೋಟೆ ತಾಲ್ಲೂಕಿನ ಹೊಸ ಬೀರ್ವಾಳು ಗ್ರಾಮದ ಬಳಿ ಉರುಳಿಗೆ ಸಿಲುಕಿದ್ದ 5 ವರ್ಷದ ಗಂಡು ಕರಡಿ ರಕ್ಷಿಸಲಾಗಿದೆ.

**

ಉರುಳಿಗೆ ಹುಲಿಯೊಂದು ಸಿಲುಕಿರುವುದು ಈ ಭಾಗದಲ್ಲಿ ಇದೇ ಮೊದಲು. ಜನವಸತಿಯಿಂದ ಉರುಳು ಹಾಕಿರುವ ಜಾಗ ಸಾಕಷ್ಟು ದೂರದಲ್ಲಿದೆ. ಸುತ್ತಮುತ್ತಲ ಗ್ರಾಮಸ್ಥರು ಉರುಳು ಹಾಕುವುದಿಲ್ಲ.
- ಕೆ.ಡಿ.ಮಹೇಶ್, ಕಚುವಿನಹಳ್ಳಿ

**

ಬೇರೆ ಕಡೆ ಹಾಕಿದ ಉರುಳಿಗೆ ಸಿಲುಕಿದ್ದು, ಗೂಟದ ಸಮೇತ ಕಿತ್ತುಕೊಂಡು ಹುಲಿ ಬಂದಿದೆ. ಶ್ವಾನದಳದ ಸಹಾಯದಿಂದ ತನಿಖೆ ನಡೆಯುತ್ತಿದೆ
- ಸೋಮಪ್ಪ,‌ ಎಸಿಎಫ್, ಹುಣಸೂರು ಪ್ರಾದೇಶಿಕ ಅರಣ್ಯ ವಲಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.